ಹಿರಿಯರೂ ಬಂದರು; ಮಕ್ಕಳೂ ಓಡಿದರು

ಬುಧವಾರ, ಜೂಲೈ 17, 2019
23 °C

ಹಿರಿಯರೂ ಬಂದರು; ಮಕ್ಕಳೂ ಓಡಿದರು

Published:
Updated:

ಬಾಗಲಕೋಟೆ: `ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್~ ಪತ್ರಿಕೆಗಳ ಪ್ರಾಯೋಜಕತ್ವದಲ್ಲಿ ಭಾನುವಾರ ನಗರದಲ್ಲಿ ಪ್ರಥಮ ಭಾರಿಗೆ ಏರ್ಪಡಿಸಿದ್ದ ಕೆ.ಎ. ನೆಟ್ಟಕಲ್ಲಪ್ಪ ಸ್ಮಾರಕ ರಸ್ತೆ ಓಟ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 212 ಸ್ಪರ್ಧಿಗಳು ಆಗಮಿಸಿದ್ದರು.ಧಾರವಾಡ, ಹುಬ್ಬಳ್ಳಿ, ವಿಜಾಪುರ, ಮೂಡುಬಿದಿರೆ, ಗದಗ, ಹಾಸನ, ಬೆಂಗಳೂರು, ಮೈಸೂರು ಸೇರಿದಂತೆ ಅತಿಥೇಯ ಬಾಗಲಕೋಟೆ ಜಿಲ್ಲೆಯ ಕ್ರೀಡಾಪಡುಗಳು ಭಾಗವಹಿಸುವ ಮೂಲಕ ಸ್ಪರ್ಧೆಯನ್ನು ಯಶಸ್ವಿಗೊಳಿಸಿದರು.ನಗರದ ಬಿವಿವಿ ಸಂಘದ ಮುಖ್ಯ ಪ್ರವೇಶದ್ವಾರದ ಬಳಿ (ಬೀಳೂರು ಅಜ್ಜನ ಗುಡಿ ಮುಂಭಾಗ) ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಪುರುಷರ ವಿಭಾಗದ 12 ಕಿ.ಮೀ. ರಸ್ತೆ ಓಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ ಚಾಲನೆ ನೀಡಿದರು. ಪುರುಷರ ವಿಭಾಗದ ಸ್ಪರ್ಧೆಯಲ್ಲಿ 162 ಸ್ಪರ್ಧಿಗಳು ಭಾಗವಹಿಸುವ ಮೂಲಕ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಯಿತು.ನಗರದ ವಿದ್ಯಾಗಿರಿಯ ಬಿವಿವಿ ಎಂಜಿನಿಯರಿಂಗ್ ಕಾಲೇಜು ವೃತ್ತದಿಂದ ಬೆಳಿಗ್ಗೆ 7.50ಕ್ಕೆ ಆರಂಭಗೊಂಡ ಮಹಿಳೆಯರ ವಿಭಾಗದ 6 ಕಿ.ಮೀ.ರಸ್ತೆ ಓಟಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀಣಾ ಪ್ರಕಾಶ ಎಮ್ಮಿ ಚಾಲನೆ ನೀಡಿದರು. ಮಹಿಳೆಯರ ವಿಭಾಗದಲ್ಲಿ 14 ಸ್ಪರ್ಧಿಗಳು ಭಾಗವಹಿಸಿದ್ದರು.ದಡ್ಡೇನವರ ಕ್ರಾಸ್‌ನಿಂದ ಬೆಳಿಗ್ಗೆ 8.15ಕ್ಕೆ ಆರಂಭಗೊಂಡ ಬಾಲಕರ ವಿಭಾಗದ ರಸ್ತೆ ಓಟಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಗುಂಡಪ್ಪ ಚಾಲನೆ ನೀಡಿದರು. 26 ಸ್ಪರ್ಧಿಗಳು ಬಾಲಕರ ವಿಭಾಗದಲ್ಲಿ ಪಾಲ್ಗೊಂಡಿದ್ದರು.ಬಾಲಕಿಯರ ವಿಭಾಗದ ರಸ್ತೆ ಓಟಕ್ಕೆ ಬೆಳಿಗ್ಗೆ 8.40ಕ್ಕೆ ಸಾರ್ವಜನಿಕರ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಎಂ.ಮಡಿವಾಳ ಚಾಲನೆ ನೀಡಿದರು. 10 ಸ್ಪರ್ಧಿಗಳು ಬಾಲಕಿಯರ ವಿಭಾಗದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.ಸಹಕಾರ: ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಶನಿವಾರವೇ ಆಗಮಿಸಿದ್ದ ಕ್ರೀಡಾಪಟುಗಳಿಗೆ ಉಳಿದುಕೊಳ್ಳಲು ಕಲ್ಯಾಣ ಮಂಟಪ, ಅಥ್ಲೀಟ್ ಮತ್ತು ದೈಹಿಕ ಶಿಕ್ಷಕರು ಸಂಚರಿಸಲು ಬಸ್ ಮತ್ತು ಕಾರ್ಯಕ್ರಮ ನಡೆಸಲು ಸಭಾಂಗಣವನ್ನು ನಗರದ ಬಸವೇಶ್ವರ ವಿದ್ಯಾವರ್ದಕ ಸಂಘ ಒದಗಿಸಿ ಸಹಕಾರ ನೀಡಿತು. ಜಿಲ್ಲಾ ಪೊಲೀಸ್ ಸಿಬ್ಬಂದಿ ಸೂಕ್ತ ಭದ್ರತೆ ಮತ್ತು ಸಂಚಾರ ನಿಯಂತ್ರಣ ಮಾಡುವ ಮೂಲಕ ರಸ್ತೆ ಓಟ ಸುಲಲಿತವಾಗಿ ನಡೆಯಲು ಅವಕಾಶ ಕಲ್ಪಿಸಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆ್ಯಂಬುಲೆನ್ಸ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು  ರಸ್ತೆ ಓಟದ ಸ್ಪರ್ಧೆ ಸುಗಮವಾಗಿ ನಡೆಸಲು ದೈಹಿಕ ಶಿಕ್ಷಕರನ್ನು ನಿಯೋಜಿಸಿತ್ತು. ಜೊತೆಗೆ ಸ್ಥಳೀಯ ಸಾರ್ವಜನಿಕರು ರಸ್ತೆ ಓಟದ ಸ್ಪರ್ಧೆಗೆ ಸಹಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry