ಬುಧವಾರ, ನವೆಂಬರ್ 20, 2019
27 °C
ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ; ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ

ಹಿರಿಯರ ಊರಿನಲ್ಲಿ ಸಾಂಸ್ಕೃತಿಕ ಬಡತನವೇ?

Published:
Updated:

ಹಿರಿಯೂರು: ಸಾಂಸ್ಕೃತಿಕ ಬದುಕಿಗೆ ಹೆಸರಾಗಿರುವ ಹಿರಿಯೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೆರಳೆಣಿಕೆಯಷ್ಟು ಅಭಿಮಾನಿಗಳು ಮಾತ್ರ ಬಂದಿರುವುದು ಅತ್ಯಂತ ವಿಷಾದದ ಸಂಗತಿ. ಹಿರಿಯರ ಊರಿನಲ್ಲಿ ಸಾಂಸ್ಕೃತಿಕ ಬಡತನವೇ ಎಂದು ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಪ್ರಶ್ನಿಸಿದರು.ನಗರದಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಮುಕ್ತಾಯ ಸಮಾರಂಭದಲ್ಲಿನ ಸಮಾರೋಪ ಭಾಷಣದಲ್ಲಿ ಅವರು ಮಾತನಾಡಿದರು.ನಮ್ಮ ಹಿರಿಯರು ಮಹತ್ತರ ಉದ್ದೇಶ ಇಟ್ಟುಕೊಂಡು ಕಾವ್ಯಗಳನ್ನು ರಚಿಸಿದರು. ಇಂತಹ ಸಮ್ಮೇಳನಗಳೂ ಕೂಡ ಹೊಸ ಸಂಸ್ಕೃತಿ ಕಟ್ಟಲು ಕಾರಣೀಭೂತವಾಗಬೇಕು. ಸಮ್ಮೇಳನಕ್ಕೆ ಅಭಿಮಾನಿಗಳ ಕೊರತೆ ನೋಡಿ ಇಲ್ಲಿ ಸಾಂಸ್ಕೃತಿಕ ಬರ ಕಾಲಿಟ್ಟಿದೆಯೇ ಎಂಬ ಅನುಮಾನ ಕಾಡುತ್ತಿದೆ. ಕನ್ನಡವನ್ನು ಐಚ್ಛಿಕ ವಿಷಯವಾಗಿ ಓದುತ್ತಿರುವ ಸಾಕಷ್ಟು ವಿದ್ಯಾರ್ಥಿಗಳಿದ್ದು, ಅವರಾದರೂ ಬರಬೇಕಿತ್ತು ಎಂದರು.ಸಮ್ಮೇಳನಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದ ಡಾ.ಪರ್ವಪ್ಪ, `ರಾಮಾಯಣದರ್ಶನಂ' ಮೂಲಕೃತಿ ಓದಲು ಮೂರು ತಿಂಗಳು ಬೇಕಾಗಿತ್ತು. ಭೀಮಯ್ಯ ಅವರ ಅನುವಾದಿತ `ರಾಮಾಯಣದರ್ಶನಂ' ಕೃತಿಯನ್ನು ಕೇವಲ ಮೂರು ದಿನದಲ್ಲಿ ಮುಗಿಸಿದೆ. ಜನಸಾಮಾನ್ಯರಿಗೂ ಈ ಕೃತಿ ಅರ್ಥವಾಗುವಂತಿದೆ ಎಂದು ತಿಳಿಸಿದರು.ಸಮ್ಮೇಳನಾಧ್ಯಕ್ಷ ಭೀಮಯ್ಯ ಮಾತನಾಡಿ, ಸರ್ಕಾರ  ನೆಪ ಹೇಳಿ ಕನ್ನಡ ಶಾಲೆಗಳನ್ನು ಮುಚ್ಚಬಾರದು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 25 ಮೀಸಲಾತಿ ನೀಡಬೇಕು. ಕನ್ನಡದ ಕೆಲಸಗಳಿಗೆ ಉದಾರ ನೆರವು ನೀಡಬೇಕು ಎಂದು ಒತ್ತಾಯಿಸಿದರು.ತಾಲ್ಲೂಕು ಕಸಾಪ ಅಧ್ಯಕ್ಷ ಜಿ. ಧನಂಜಯ ಕುಮಾರ್, ಎಚ್.ಎನ್. ನರಸಿಂಹಯ್ಯ ಮಾತನಾಡಿದರು. ಎಚ್.ಟಿ. ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಬಿ.ಡಿ. ಬಸವರಾಜು ಹಾಜರಿದ್ದರು.  ಜಗದೀಶ್ ದರೇದಾರ್ ನಿರ್ಣಯಗಳನ್ನು ಮಂಡಿಸಿದರು. ವೈ.ಎಸ್. ಅಶ್ವತ್ಥಕುಮಾರ್ ಅನುಮೋದಿಸಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು. ಮಹಾಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)