ಹಿರಿಯರ ಕಲ್ಯಾಣಕ್ಕೆ ರಾಷ್ಟ್ರೀಯ ನೀತಿ ಅಗತ್ಯ

7

ಹಿರಿಯರ ಕಲ್ಯಾಣಕ್ಕೆ ರಾಷ್ಟ್ರೀಯ ನೀತಿ ಅಗತ್ಯ

Published:
Updated:

ರಾಮನಗರ: ಹಿರಿಯ ನಾಗರಿಕರ ಕಲ್ಯಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿಕೊಂಡು ಸಮಗ್ರವಾದ ರಾಷ್ಟ್ರೀಯ ನೀತಿಯೊಂದನ್ನು ರಚಿಸಬೇಕಾದ ಅಗತ್ಯ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ತಿಳಿಸಿದರು.ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಗುರುಭವನದಲ್ಲಿ ಗುರುವಾರ ಏರ್ಪಡಿಸದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಹಿರಿಯ ನಾಗರಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ ಸೌಲಭ್ಯಗಳು ಸಾಲದು. ಇವರಿಗೆ ಇನ್ನೂ ಹೆಚ್ಚಿನ ಸೌವಲತ್ತುಗಳನ್ನು ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಸಮಗ್ರ ರಾಷ್ಟ್ರೀಯ ನೀತಿ ರಚನೆಯಾಗಬೇಕಿದೆ ಎಂದು ಅವರು ಪ್ರತಿಪಾದಿಸಿದರು.ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿವೆ. ಇದರಿಂದ ಹಿರಿಯ ನಾಗರಿಕರು ಕಂಗಾಲಾಗಿದ್ದಾರೆ. ಹಿರಿಯರ ರಕ್ಷಣೆ ಮತ್ತು ಪೋಷಣೆಗೆ ಯುವ ಜನತೆ ತಾತ್ಸಾರ ಮಾಡಬಾರದು ಎಂದು ಅವರು ಕಿವಿಮಾತು ಹೇಳಿದರು.ಹಳ್ಳಿಗಳಲ್ಲಿನ ಯುವ ಜನತೆ ಉದ್ಯೋಗ ಅರಸಿ ನಗರಗಳನ್ನು ಸೇರುತ್ತಿದ್ದಾರೆ. ಇದರಿಂದ ಹಿರಿಯ ಜೀವಗಳು ಮಾತ್ರ ಹಳ್ಳಿಗಳಲ್ಲಿ ಕಂಡು ಬರುತ್ತಿದ್ದಾರೆ. ಗ್ರಾಮಗಳು ಒಂದ ರೀತಿಯಲ್ಲಿ ವೃದ್ಧಾಶ್ರಮಗಳಂತೆ ಬಾಸವಾಗುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಹಿರಿಯರಿಗೆ ಗೌರವ ಕೊಡುವುದು ನಮ್ಮ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ಆದರೆ ನಾಗರಿಕತೆ ಸೋಗಿನಲ್ಲಿ ಆಧುನಿಕತೆಯ ಅಬ್ಬರದಿಂದ ಹಿರಿಯರಿಗೆ ದೊರೆಯಬೇಕಾದ ಗೌರವ ಮತ್ತು ಸ್ಥಾನಮಾನ ದೊರೆಯುತ್ತಿಲ್ಲ. ದಿನಾಚರಣೆ ಮಾಡುವುದರ ಮೂಲಕ ಹಿರಿಯರನ್ನು ಸ್ಮರಿಸಬೇಕಾದ ಸ್ಥಿತಿ ಬಂದಿರುವುದು ವಿಷಾದನೀಯ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರನ್ನು ಸಮಾರಂಭದಲ್ಲಿ ಸಚಿವರು ಸನ್ಮಾನಿಸಿದರು. ಸನ್ಮಾನಿತರು- ಹನುಮಂತೇಗೌಡನ ದೊಡ್ಡಿಯ ಬಿ.ಕೆಂಪಯ್ಯ (94), ದೊಡ್ಡಗಂಗವಾಡಿಯ ದೊಡ್ಡರೇವಣ್ಣ (104), ಬೂದಗುಪ್ಪೆಯ ಚೂಡಮ್ಮ (74), ಸುಂಡಘಟ್ಟದ ಜಗದೀಶ್ವರಾಚಾರ್ (78), ಮಾಯಸಂದ್ರದ ಧರಣೇಂದ್ರಯ್ಯ (83), ಮಾಗಡಿಯ ಹನುಮಂತಯ್ಯ (80), ಕೂಟಗಲ್‌ನ ಕಮಲಮ್ಮ (78), ಚನ್ನಪಟ್ಟಣದ ಸಿ.ಟಿ.ರಾಮಮೂರ್ತಿ (79) ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ಮಲ್ಲಿಕಾರ್ಜುನೇಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತ ಶಿವಲಿಂಗಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ, ನಗರಸಭೆ ಸದಸ್ಯ ಸಾಬಾನ್ ಸಾಬ್, ಬಮೂಲ್ ನಿರ್ದೇಶಕ ಪಿ.ನಾಗರಾಜು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಿ. ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಎಸ್.ಎಂ.ಚಂದ್ರ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry