ಗುರುವಾರ , ನವೆಂಬರ್ 21, 2019
21 °C

ಹಿರಿಯೂರಿನಲ್ಲಿ 60ಲಕ್ಷ, ಕೊಳ್ಳೇಗಾಲ ಬಳಿ 15 ಲಕ್ಷ ವಶ

Published:
Updated:

ಹಿರಿಯೂರು: ಆಂಧ್ರಪ್ರದೇಶ ಮೂಲದ ಯುವಕರಿಬ್ಬರು ಬೆಂಗಳೂರಿನಿಂದ ತರುತ್ತಿದ್ದ 60 ಲಕ್ಷ ರೂಪಾಯಿಗಳನ್ನು ನಗರ ಠಾಣೆ ಪೊಲೀಸರು ಗುರುವಾರ ಬೆಳಿಗ್ಗೆ ವಶಪಡಿಸಿಕೊಂಡಿದ್ದಾರೆ.ಇಲ್ಲಿನ ರಾಜ್ಯ ರಸ್ತೆ ಸಾರಿಗೆ ಬಸ್‌ನಿಲ್ದಾಣದ ಬಳಿ ಸಂಶಯಾಸ್ಪದವಾಗಿ ನಡೆದುಕೊಂಡ ಯುವಕರಿಬ್ಬರ ತಪಾಸಣೆ ನಡೆಸಿದಾಗ  ಅವರ ಬಳಿ ಭಾರೀ ಮೊತ್ತದ ಹಣ ಇರುವುದು ಗೊತ್ತಾಗಿದೆ.ಹಣ ಸಾಗಿಸುತ್ತಿದ್ದವರು ಆಂಧ್ರಪ್ರದೇಶ ಮೂಲದ ಲೋಕೇಶ್, ಮಧು ಎಂದು ತಿಳಿದು ಬಂದಿದೆ. ಹಣವನ್ನು ರಾಜೇಶ್ ಎನ್ನುವವರಿಗೆ  ತಲುಪಿಸಲು ತೆಗೆದುಕೊಂಡು ಹೋಗುತ್ತಿರುವುದಾಗಿ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.ಆದರೆ ಹಣ ಸಾಗಿಸುತ್ತಿದ್ದ ಬಗ್ಗೆ ಸ್ಪಷ್ಟ ಮಾಹಿತಿ ನೀಡದ ಕಾರಣ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.ಕೊಳ್ಳೇಗಾಲ ವರದಿ: ತಾಲ್ಲೂಕಿನ ಒಡೆಯರಪಾಳ್ಯ ಟಿಬೆಟನ್ ಕ್ಯಾಂಪ್‌ನಿಂದ ಬೆಂಗಳೂರಿಗೆ ಕಾರಿನಲ್ಲಿ ಸಾಗಿಸುತ್ತಿದ್ದ ರೂ 15 ಲಕ್ಷವನ್ನು ಚುನಾವಣಾ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.ಒಡೆಯರಪಾಳ್ಯ ಟಿಬೆಟನ್ ಕ್ಯಾಂಪ್‌ನ ತೇನ್‌ಜಿನ್ ತಿಡುಪು ಮತ್ತು ತೇಜಿನ್‌ಕುಂಗ ಅವರು ಕಾರಿನಲ್ಲಿ ರೂ.15 ಲಕ್ಷದೊಂದಿಗೆ ಗುರುವಾರ ಬೆಂಗಳೂರಿಗೆ ತೆರಳುತ್ತಿದ್ದರು. ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿ ಆರೋಪಿಗಳು ಮತ್ತು ಹಣವನ್ನು ವಶಕ್ಕೆ ಪಡೆದರು.ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಇಲ್ಲದ ಕಾರಣ ಸತ್ತೇಗಾಲ ಸೆಕ್ಟರ್ ಮ್ಯಾಜಿಸ್ಟ್ರೇಟ್ ಮಹದೇವಮ್ಮ, ಯೋಗಾನಂದ್, ಅಬಕಾರಿ ಇಲಾಖೆ ಜಿಲ್ಲಾಧಿಕಾರಿ ಮಾದೇಶ್ ಅವರು ಹಣವನ್ನು ವಶಪಡಿಸಿಕೊಂಡು ಕಾರಿನ ಸಮೇತ ಗ್ರಾಮಾಂತರ ಪೊಲೀಸರಿಗೆ ಮುಂದಿನ ಕ್ರಮಕ್ಕೆ ನೀಡಿದ್ದಾರೆ.ಟಿಬೆಟನ್ ಕ್ಯಾಂಪ್ ಚಾರಿಟಬಲ್ ಸೊಸೈಟಿಯಿಂದ ಬೆಂಗಳೂರಿಗೆ ದೇವಾಲಯ ನಿರ್ಮಾಣಕ್ಕೆ ಹಣ ನೀಡಲು ಹೋಗುತ್ತಿದ್ದುದಾಗಿ ತಿಳಿದು ಬಂದಿದೆ.

ಪ್ರತಿಕ್ರಿಯಿಸಿ (+)