ಹಿರಿಯೂರು: ಆಯಕಟ್ಟಿನ ಜಾಗಗಳಲ್ಲಿ ನಿವೇಶನ: ರಸ್ತೆ ಬದಿ ಸಂತೆ

7

ಹಿರಿಯೂರು: ಆಯಕಟ್ಟಿನ ಜಾಗಗಳಲ್ಲಿ ನಿವೇಶನ: ರಸ್ತೆ ಬದಿ ಸಂತೆ

Published:
Updated:

ಹಿರಿಯೂರು: ನಗರಕ್ಕೆ ಹೊಂದಿಕೊಂಡು ಆಯಕಟ್ಟಿನ ಜಾಗಗಳಲ್ಲಿದ್ದ ಜಮೀನುಗಳನ್ನು ಖಾಸಗಿಯವರಿಗೆ ನಿವೇಶನಗಳನ್ನಾಗಿ ವಿಂಗಡಿಸಲು ನಿರಂತರವಾಗಿ ಅನುಮತಿ ನೀಡುತ್ತಾ ಬಂದಿರುವ ಪುರಸಭೆ, ಸಂತೆಗೆ, ಖಾಸಗಿ ಬಸ್‌ನಿಲ್ದಾಣಕ್ಕೆ ಸೂಕ್ತ ಜಾಗವಿಲ್ಲದಂತೆ ಮಾಡಿ ಸಾರ್ವಜನಿಕರ ಹಿಡಿಶಾಪಕ್ಕೆ ಒಳಗಾಗಿದ್ದಾರೆ.ಪೂನಾ-ಬೆಂಗಳೂರು, ಬೀದರ್-ಶ್ರೀರಂಗಪಟ್ಟಣದಂತಹ ಪ್ರಮುಖ ಹೆದ್ದಾರಿಗಳು ಹಾದು ಹೋಗಿರುವ ಹಿರಿಯೂರಿಗೆ ನಿತ್ಯ ಸಾವಿರಾರು ವಾಹನ, ಪ್ರಯಾಣಿಕರು ಬಂದು ಹೋಗುತ್ತಾರೆ. ವಾರದ ಸಂತೆಯ ದಿನವಾದ ಶನಿವಾರ ಬಂತೆಂದರೆ ರಸ್ತೆಯಲ್ಲಿ ಸಂತೆ ನಡೆಯುವ ಕಾರಣ ವಾಹನ ಸವಾರರು, ಪ್ರಯಾಣಿಕರು ಪರದಾಡುವಂತಹ ವಾತಾವರಣ ನಿರ್ಮಾಣವಾಗುತ್ತದೆ.1998ರಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್‌ನಿಲ್ದಾಣ ನಿರ್ಮಿಸಲು ಸಂತೆ ನಡೆಯುತ್ತಿದ್ದ ಜಾಗವನ್ನು ಪುರಸಭೆ ಬಿಟ್ಟುಕೊಟ್ಟ ನಂತರ ಸಂತೆಗೆ ಜಾಗವೇ ಇಲ್ಲದಂತಾಯಿತು. ಸಂತೆ ಮತ್ತು ಬಸ್‌ನಿಲ್ದಾಣ ಎರಡೂ ಸಾರ್ವಜನಿಕರಿಗೆ ಮುಖ್ಯವಾದವು.

 

ಆಗ ಪುರಸಭೆ ಆಡಳಿತ ನಡೆಸುತ್ತಿದ್ದವರು ಸಂತೆಗೆ ಶೀಘ್ರದಲ್ಲಿಯೇ ನಗರದ ಮಧ್ಯಭಾಗದಲ್ಲಿ ಸೂಕ್ತ ಜಾಗದ ವ್ಯವಸ್ಥೆ ಮಾಡುವುದಾಗಿ ನೀಡಿದ್ದ ಭರವಸೆ 14 ವರ್ಷ ಕಳೆದರೂ ಈಡೇರದಿರುವುದು ಆಡಳಿತ ನಡೆಸುವವರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.ಸಂತೆ ನಡೆಯುತ್ತಿದ್ದ ಜಾಗದಲ್ಲಿ ಮುಕ್ಕಾಲು ಭಾಗವನ್ನು ಬಸ್‌ನಿಲ್ದಾಣಕ್ಕೆ ಬಿಟ್ಟುಕೊಟ್ಟಿದ್ದರಿಂದ ಪ್ರಸ್ತುತ ನಿಲ್ದಾಣದ ಆಸುಪಾಸಿನ ರಸ್ತೆಗಳಲ್ಲಿ ಸಂತೆ ನಡೆಯುತ್ತಿದೆ. ಸ್ವಲ್ಪ ಮಳೆ ಬಂದರೂ ವ್ಯಾಪಾರಿಗಳ, ಗ್ರಾಹಕರ ಪರದಾಟ ಹೇಳತೀರದು.ಕೆಲವು ವರ್ಷಗಳಿಂದ ವೇದಾವತಿ ಬಡಾವಣೆಯಲ್ಲಿ ಪ್ರತಿ ಬುಧವಾರ ಸಂತೆಗೆ ವ್ಯವಸ್ಥೆ ಮಾಡಿದ್ದರೂ ಬಸ್‌ನಿಲ್ದಾಣಕ್ಕೆ, ನಗರಕ್ಕೆ ದೂರವಾಗಿರುವ ಕಾರಣ ಆ ಬಡಾವಣೆಯ ನಿವಾಸಿಗಳಿಗೆ ಮಾತ್ರ ಸಂತೆ ಅನುಕೂಲವಾಗಿದೆ. ಬಸ್‌ನಿಲ್ದಾಣ ಮತ್ತು ಸಂತೆಯ ಜಾಗ ಒತ್ತುವರಿ ಆಗಿದ್ದರೂ ಅದನ್ನು ತೆರವುಗೊಳಿಸುವ ಕೆಲಸಕ್ಕೆ ಪುರಸಭೆ ಮುಂದಾಗಿಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.ಖಾಸಗಿ ಬಸ್‌ಗಳಿಗೆ ಪ್ರತ್ಯೇಕ ನಿಲ್ದಾಣ ಇಲ್ಲದಿರುವ ಕಾರಣ ರಸ್ತೆ ಸಾರಿಗೆ ಬಸ್‌ನಿಲ್ದಾಣದಲ್ಲಿನ ಪ್ರವೇಶ ದ್ವಾರದಲ್ಲಿ ಒಂದಿಷ್ಟು ಜಾಗ ಮಾಡಿಕೊಂಡು ಖಾಸಗಿ ಬಸ್‌ಗಳು, ಮೆಟಡಾರ್‌ಗಳು, ಆಟೋಗಳು ನಿಲ್ಲುತ್ತಿವೆ. ದಿನದಲ್ಲಿ ಹಲವು ಬಾರಿ ಸಂಚಾರದಲ್ಲಿ ಅಸ್ತವ್ಯಸ್ತತೆ ಉಂಟಾಗುತ್ತದೆ.

 

ಸಂಚಾರ ವ್ಯವಸ್ಥೆ ಸರಿಪಡಿಸಲು ಪೊಲೀಸರು ಹರಸಾಹಸ ಮಾಡಬೇಕಾಗುತ್ತದೆ. ನಾಗರಿಕರಿಂದ ಸಾವಿರಾರು ರೂಪಾಯಿ ತೆರಿಗೆ ಸಂಗ್ರಹಿಸುವ ಪುರಸಭೆಯವರು ಈಗಲಾದರೂ ಸಂತೆಗೆ ಸೂಕ್ತವಾದ ಜಾಗವನ್ನು ವ್ಯವಸ್ಥೆ ಮಾಡಬೇಕು. ಬಸ್‌ನಿಲ್ದಾಣದ ಸುತ್ತಮುತ್ತ ಆಗಿರುವ ಒತ್ತುವರಿ ತೆರವುಗೊಳಿಸಬೇಕು.ಪ್ರಧಾನ ರಸ್ತೆಯ ಪಾದಚಾರಿ ರಸ್ತೆಗಳಲ್ಲಿ ಅಂಗಡಿ ಸಾಮಾನುಗಳನ್ನು ಒಟ್ಟಿ ಪಾದಚಾರಿಗಳಿಗೆ ತೊಂದರೆ ಕೊಡುತ್ತಿರುವ ವರ್ತಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ವಂದೇಮಾತರಂ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಲ್. ಗಿರಿಧರ್ ಒತ್ತಾಯ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry