ಶುಕ್ರವಾರ, ಮೇ 14, 2021
25 °C

ಹಿರಿಯೂರು: ಉದ್ಘಾಟನೆ ಭಾಗ್ಯ ಕಾಣದ `ಸಾಮರ್ಥ್ಯ ಸೌಧ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ತಾಲ್ಲೂಕು ಪಂಚಾಯ್ತಿಗೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶದಿಂದ ನಗರದ ಹುಳಿಯಾರು ರಸ್ತೆಯಲ್ಲಿ ತಾಲ್ಲೂಕು ಕ್ರೀಡಾಂಗಣದ ಪಕ್ಕದಲ್ಲಿ 2008-09 ರಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ರೂ 43 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ `ಸಾಮರ್ಥ್ಯ ಸೌಧ'ಕ್ಕೆ ಇನ್ನೂ ಉದ್ಘಾಟನೆಯ ಭಾಗ್ಯ ಸಿಗದಿರುವ ಬಗ್ಗೆ ವಂದೇಮಾತರಂ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಲ್.ಗಿರಿಧರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಯಾವುದೋ ಒತ್ತಡಕ್ಕೆ ಕಟ್ಟುಬಿದ್ದು ಸದರಿ ಕಟ್ಟಡವನ್ನು ನಿರ್ಮಾಣ ಮಾಡಿದ್ದ ಉದ್ದೇಶವನ್ನು ಬದಿಗಿಟ್ಟು, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯ ನಡೆಸಲು ಅವಕಾಶ ಕೊಡಲಾಗಿತ್ತು. ಈಗ ವಸತಿ ನಿಲಯವನ್ನು ತೆರವುಗೊಳಿಸಿದ್ದು, ಕಟ್ಟಡ ತನ್ನ ಸಾಮರ್ಥ್ಯವನ್ನೇ ಕಳೆದುಕೊಂಡಂತೆ ಕಾಣುತ್ತಿದೆ. ಪುಂಡ ಪೋಕರಿಗಳಿಂದ ಕಿಟಕಿಯ ಗಾಜುಗಳು ಹಾಳಾಗಿವೆ. ಕಟ್ಟಡದ ಮುಂಭಾಗದ ಫ್ಲೋರಿಂಗ್ ಕಿತ್ತು ಹೋಗಿದೆ. ಈಗ ಮತ್ತೊಮ್ಮೆ ದುರಸ್ತಿ ಮಾಡಿಸಿದ ನಂತರವೇ ಇದು ಬಳಕೆಗೆ ಲಭ್ಯವಾಗಲಿದೆ. ಅಧಿಕಾರಿಗಳು ಮುಂದಾಲೋಚನೆ ಮಾಡದೆ ಕೈಗೊಳ್ಳುವ ಕ್ರಮಗಳಿಂದ ಸರ್ಕಾರಿ ಹಣ ಪೋಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.ಶೀಘ್ರದಲ್ಲಿಯೇ ಚಾಲನೆ: ತಾಲ್ಲೂಕು ಪಂಚಾಯಿತಿಗೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ನಿರ್ಮಿಸಿರುವ ಸಾಮರ್ಥ್ಯಸೌಧವನ್ನು  ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದಿಂದ ತಾಲ್ಲೂಕು ಪಂಚಾಯಿತಿ ವಶಕ್ಕೆ ಪಡೆಯಲಾಗಿದೆ. ಈಚೆಗೆ ಐಟಿಐ ಕಾಲೇಜು ನಡೆಸಲು ಕಟ್ಟಡವನ್ನು ಬಿಟ್ಟುಕೊಡುವಂತೆ ಅರ್ಜಿ ಬಂದಿತ್ತು. ಈ ಸೌಧ  ಅಗತ್ಯವಿರುವ ಕಾರಣ ಕೊಡಲು ಸಾಧ್ಯವಿಲ್ಲ ಎಂದು ಹಿಂಬರಹ ನೀಡಿದ್ದೇವೆ. ಶೀಘ್ರದಲ್ಲಿಯೇ ಅಗತ್ಯವಿರುವ ದುರಸ್ತಿ ಕಾರ್ಯ ಮುಗಿಸಿ ತರಬೇತಿ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತೇವೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್.ರಮೇಶ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.