ಗುರುವಾರ , ನವೆಂಬರ್ 21, 2019
20 °C
ಮಾಗಡಿ ಲೋಕೋಪಯೋಗಿ ಇಲಾಖೆ ಹಗರಣ

ಹಿರಿಯ ಅಧಿಕಾರಿಗಳು ಕಾರಣ?

Published:
Updated:

ಬೆಂಗಳೂರು: ಮಾಗಡಿ ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ವತಿಯಿಂದ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ಅಕ್ರಮ ನಡೆಯಲು ಇಲಾಖೆಮಟ್ಟದ ಹಿರಿಯ ಅಧಿಕಾರಿಗಳೇ ಕಾರಣರಾಗಿದ್ದಾರೆ ಎಂಬ ಅಭಿಪ್ರಾಯ ಮಂಗಳವಾರ ನಡೆದ ವಿಧಾನಸಭೆಯ ಸದನ ಸಮಿತಿ ಸಭೆಯಲ್ಲಿ ವ್ಯಕ್ತವಾಗಿದೆ.`ನಾವು ಕೇಳಿದ ಕಡತಗಳನ್ನು ನೀಡಲು ಅಧಿಕಾರಿಗಳು ಆರಂಭದಲ್ಲಿ ಹಿಂದೇಟು ಹಾಕಿದ್ದರು. ಬಳಿಕ ಅವುಗಳನ್ನು ಬಲವಂತವಾಗಿ ತರಿಸಿಕೊಂಡು ಪರಿಶೀಲಿಸಿದ ಮೇಲೆ ಇಲಾಖೆ ಮಟ್ಟದಲ್ಲಿ ಕೈವಾಡ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ' ಎಂದು ಸಮಿತಿ ಸದಸ್ಯರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.`ಬಹುತೇಕ ಎಲ್ಲ ಕಡತಗಳಿಗೆ ಹಿರಿಯ ಅಧಿಕಾರಿಯೊಬ್ಬರು ಸಹಿ ಹಾಕಿರುವುದನ್ನು ಸಮಿತಿ ಸದಸ್ಯರು ವಿಶೇಷವಾಗಿ ಗಮನಿಸಿದ್ದಾರೆ. ಉಪವಿಭಾಗದಿಂದ ಬಾರದ ಪ್ರಸ್ತಾವಗಳಿಗೂ ತರಾತುರಿಯಿಂದ ಕಡತ ತಯಾರಿಸಿ ಅನುದಾನ ಬಿಡುಗಡೆ ಮಾಡಿರುವ ಸಂಗತಿ ಗಮನಕ್ಕೆ ಬಂದಮೇಲೆ ನಮ್ಮ ವಿಚಾರಣೆ ದಿಕ್ಕು ಸ್ಪಷ್ಟವಾಗಿದೆ. ಪ್ರಭಾವಿಗಳು ಈ ಹಗರಣದಲ್ಲಿ ಭಾಗಿಯಾದ ಗುಮಾನಿ ಇದ್ದು, ಆ ವಿಷಯವೂ ಚರ್ಚೆಗೆ ಒಳಗಾಗಲಿದೆ' ಎಂದು ವಿವರಿಸಿದರು.`ವಿಚಾರಣೆ ಅಪೂರ್ಣವಾಗಿರುವ ಕಾರಣ ಸದನ ಸಮಿತಿ ಅವಧಿಯನ್ನು ಇನ್ನೊಂದು ತಿಂಗಳಿಗೆ ವಿಸ್ತರಣೆ ಮಾಡಬೇಕು ಎನ್ನುವ ಮನವಿಯನ್ನು ವಿಧಾನಸಭಾಧ್ಯಕ್ಷರು ಪುರಸ್ಕರಿಸಿದ್ದಾರೆ. ಇನ್ನೂ ಒಂದೆರಡು ಸಭೆಗಳನ್ನು ನಡೆಸಿ ನಮ್ಮ ವರದಿಯನ್ನು ಸಿದ್ಧಪಡಿಸಲಿದ್ದೇವೆ' ಎಂದು ಸದನ ಸಮಿತಿ ಅಧ್ಯಕ್ಷ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.

`ಇಲಾಖೆಯಿಂದ ಕೆಲವು ಕಡತಗಳನ್ನು ತರಿಸಿಕೊಂಡು ಪರಿಶೀಲನೆ ಮಾಡುತ್ತಿದ್ದೇವೆ. ಲೋಪಗಳು ಕಂಡುಬಂದಿದ್ದು ಅವುಗಳನ್ನು ವರದಿಯಲ್ಲಿ ದಾಖಲಿಸುತ್ತೇವೆ' ಎಂದು ತಿಳಿಸಿದರು. ಕಾಕತಾಳೀಯವಾಗಿ ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ದಾಖಲಾದ ಪ್ರಕರಣದ ವಿಚಾರಣೆ ಸಹ ಮಂಗಳವಾರ ನಡೆಯಿತು. ಏ. 5ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಪ್ರತಿಕ್ರಿಯಿಸಿ (+)