ಶುಕ್ರವಾರ, ನವೆಂಬರ್ 22, 2019
20 °C

ಹಿರಿಯ ಗಾಯಕ ಮನ್ನಾಡೇ ಭೇಟಿ ಮಾಡಿದ ದೀದಿ

Published:
Updated:

ಬೆಂಗಳೂರು: ಕಲ್ಯಾಣನಗರದ ತಮ್ಮ ಮಗಳ ಮನೆ `ರಿತು ಗೋಕುಲಂ'ನಲ್ಲಿ ವಾಸವಾಗಿರುವ ಹಿರಿಯ ಹಿನ್ನೆಲೆ ಗಾಯಕ ಮನ್ನಾಡೇ ಅವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.ಯೋಗಕ್ಷೇಮ ವಿಚಾರಣೆಯೊಂದಿಗೆ `ವಿಶೇಷ್ ಸಂಗೀತ ಮಹಾಸಮ್ಮಾನ್' ಪ್ರಶಸ್ತಿ ನೀಡಿರುವ ಬಗ್ಗೆಯೂ ಊಹಾಪೋಹಗಳಿವೆ. ಮನ್ನಾಡೇ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತೇ ಎನ್ನುವುದು ಸ್ಪಷ್ಟವಾಗಿಲ್ಲ. ಹೆಚ್ಚಿನ ಆರೋಗ್ಯ ಸೇವೆಗಾಗಿ ಕೋಲ್ಕತ್ತಾಗೆ ಬರಬೇಕೆಂದು ಮಮತಾ ಮನ್ನಾಡೇ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಕೋಲ್ಕತ್ತಾಗೆ ತೆರಳುವ ಆಸೆಯನ್ನು ಮನ್ನಾಡೇ ತಮ್ಮಂದಿಗೆ ಹಂಚಿಕೊಂಡಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ.

ಸುದೀಪ್ತ ಸಾವು ಆಕಸ್ಮಿಕ?

ಸ್ನಾತಕೋತ್ತರ ವಿದ್ಯಾರ್ಥಿ, ಎಸ್‌ಎಫ್‌ಐ ಕಾರ್ಯಕರ್ತ ಸುದೀಪ್ತ ಗುಪ್ತಾ ಅವರ ಸಾವಿನ ಕುರಿತು ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, `ಇದೊಂದು ದುರಾದುಷ್ಟಕರ ಘಟನೆ. ವಿದ್ಯಾರ್ಥಿ ಗುಪ್ತ ಅವರ ಸಾವು ಆಕಸ್ಮಿಕವಾದದ್ದೇ ಹೊರತು ಪೊಲೀಸರ ಲಾಠಿಚಾರ್ಜ್‌ನಿಂದ ಆಗಿರುವುದಲ್ಲ' ಎಂದು ಸ್ಪಷ್ಟಪಡಿಸಿದರು.ಎಸ್‌ಎಫ್‌ಐ ಪ್ರತಿಭಟನೆ : ಸುದೀಪ್ತ ಅವರ ಸಾವಿಗೆ ಆಕ್ರೋಶ ವ್ಯಕ್ತಪಡಿಸಿ ಎಸ್‌ಎಫ್‌ಐ ಸಂಘಟನೆ ಸದಸ್ಯರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು. ಅಲ್ಲದೇ ಮಮತಾ ಬ್ಯಾನರ್ಜಿ ಅವರ ಪ್ರತಿಕೃತಿಯನ್ನು ದಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಹುಳ್ಳಿ ಉಮೇಶ್, `ಎರಡು ವರ್ಷಕ್ಕೊಮ್ಮೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಸಂಘದ ವಾರ್ಷಿಕ ಚುನಾವಣೆಯನ್ನು ಏರ್ಪಡಿಸುವ ಮೂಲಕ ಪಶ್ಚಿಮ ಬಂಗಾಳ ಸರ್ಕಾರ ವಿದ್ಯಾರ್ಥಿ ಸಂಘಟನೆಯನ್ನು ಬಲಹೀನಗೊಳಿಸಿದೆ' ಎಂದು ದೂರಿದರು.`ಪಶ್ಚಿಮ ಬಂಗಾಳ ಸರ್ಕಾರ ವಿದ್ಯಾರ್ಥಿ ಸಂಘಟನೆಗಳ ಚಳವಳಿಗಳನ್ನು ಹತ್ತಿಕ್ಕುವ ಮೂಲಕ ವಿದ್ಯಾರ್ಥಿ ಒಕ್ಕೂಟದ ದನಿಯನ್ನು ಅಡಗಿಸುತ್ತಿದೆ' ಎಂದು ಕಿಡಿಕಾರಿದರು.

ಪ್ರತಿಕ್ರಿಯಿಸಿ (+)