ಹಿರಿಯ ಜೀವಗಳಿಗೆ `ಚೈತನ್ಯ' ತುಂಬಿದ ಶಿಕ್ಷಕಿ

7

ಹಿರಿಯ ಜೀವಗಳಿಗೆ `ಚೈತನ್ಯ' ತುಂಬಿದ ಶಿಕ್ಷಕಿ

Published:
Updated:

ಹುಬ್ಬಳ್ಳಿ: ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದ ವಿಶ್ವನಾಥ ಅಠವಳೆ ಮತ್ತು ಸಹಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಉಷಾ ಜೋಡಿ ಈಗ ಜೀವನ ಸಂಜೆಯಲ್ಲಿದ್ದಾರೆ. ಬದುಕು ಸುಸೂತ್ರವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ದಿಢೀರ್ ಉಂಟಾದ ಕೌಟುಂಬಿಕ ಸಮಸ್ಯೆ ಅವರನ್ನು ಮನೆ ಬಿಟ್ಟು ಹೊರ ಬರುವಂತೆ ಮಾಡಿತು. ಆಗ ವಿಶ್ವನಾಥ ಅವರಿಗೆ 87 ವರ್ಷ, ಉಷಾ ಅವರ ವಯಸ್ಸು 81. ದಿಕ್ಕು ತೋಚದೆ ನಿಂತಿದ್ದಾಗ ಕೈ ಹಿಡಿದವರು ಶಿಕ್ಷಕಿ ವೀಣಾ ಅಠವಳೆ.ವಿಶ್ವನಾಥ-ಉಷಾ ದಂಪತಿ ನಗರದ ದೇವಾಂಗಪೇಟೆ ರಸ್ತೆಯ ರಾಜಾಜಿ ನಗರದಲ್ಲಿರುವ ವೀಣಾ ಅವರ ಮನೆ `ಚೈತನ್ಯ ಧಾಮ'ದಲ್ಲಿ ಆಶ್ರಯ ಪಡೆದು ಏಳು ವರ್ಷಗಳಾಗಿವೆ. ವೃದ್ಧಾಶ್ರಮ ಸೇರಿಸುವಂತೆ ಕೋರಿಕೊಂಡ ಈ ದಂಪತಿಗೆ ವೀಣಾ ತಮ್ಮ ಮನೆಯಲ್ಲೇ ಆಶ್ರಯ ನೀಡಿದ್ದಾರೆ.ನಗರದ ಉಣಕಲ್‌ನ ಶಾಸಕರ ಮಾದರಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವೀಣಾ ಅವರು ರಂಗ ಕಲಾವಿದರೂ ಹೌದು. ಪಠ್ಯಾಧಾರಿತ ಮಕ್ಕಳ ನಾಟಕಗಳನ್ನು ರಚಿಸಿ ಮಕ್ಕಳ ಪ್ರತಿಭೆಗೆ ಕನ್ನಡಿ ಹಿಡಿಯುವ ಕೆಲಸ ಮಾಡುತ್ತಿರುವ ಅವರು ಹಿರಿಯರಿಗೂ ನೆರಳಾಗಿ ನಿಂತು ಸಹೋದ್ಯೋಗಿಗಳಿಗೂ ಆದರ್ಶದ ಪಾಠ ಹೇಳಿದ್ದಾರೆ.ಹೆತ್ತವರಿಗೆ ವಯಸ್ಸಾಗುತ್ತಿದ್ದಂತೆ ಮಕ್ಕಳು ವೃದ್ಧಾಶ್ರಮಗಳ ವೆಬ್‌ಸೈಟ್ ತಡಕಾಡುವ ಕಾಲವಿದು. ಹೀಗಿರುವಾಗ ಯಾವುದೇ ಸಂಬಂಧ ಇಲ್ಲದವರನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡು ಅವರ ಒಡನಾಟದಲ್ಲಿ ಸುಖ ಕಾಣುವ ವೀಣಾ ಬಗ್ಗೆ ವಿಶ್ವನಾಥ-ಉಷಾ ದಂಪತಿ ಅಭಿಮಾನ ಹೊಂದಿದ್ದಾರೆ. `ಹೇಗೆ ನಡೆಯುತ್ತಿದೆ ನಿಮ್ಮ ಜೀವನ' ಎಂದು ಕೇಳಿದರೆ ಕಿವಿ ಸರಿಯಾಗಿ ಕೇಳಿಸದ ಉಷಾ ಕಣ್ಣು ಮಿಟುಕಿಸಿದರೆ, ವಿಶ್ವನಾಥ ಕ್ಷಣಾರ್ಧದಲ್ಲಿ ಆನಂದಾಶ್ರು ಸುರಿಸುತ್ತಾರೆ.ಈ ದಂಪತಿ ಇಬ್ಬರು ಗಂಡು ಮಕ್ಕಳೊಂದಿಗೆ ಸಿಬಿಟಿ ಬಳಿ ವಾಸವಾಗಿದ್ದರು. ಮಗಳಿಗೆ ಮದುವೆಯಾಗಿತ್ತು. ದೊಡ್ಡ ಮಗ ತೀರಿಕೊಂಡ ನಂತರ ಮನೆಯಲ್ಲಿ ಉಂಟಾದ ಗೊಂದಲದ ಪರಿಸ್ಥಿತಿಯಿಂದ ಬದುಕಿನ ಆಧಾರ ಕಳೆದುಕೊಂಡ ಅವರು, ರಕ್ತ ಸಂಬಂಧಿ ಅಲ್ಲದಿದ್ದರೂ ಕೇವಲ ಪರಿಚಿತರಾದ ವೀಣಾ ಅವರನ್ನು ಹುಡುಕಿಕೊಂಡು ಬಂದು ತಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸುವಂತೆ ಕೋರಿದರು. ಆದರೆ ಅವರ ಕೈ ಬಿಡಲು ವೀಣಾ ಮನಸ್ಸು ಒಪ್ಪಲಿಲ್ಲ. `ನಿಮಗೆ ಸರಿ ಎನಿಸುವುದಾದರೆ ನಮ್ಮ ಮನೆಯಲ್ಲೇ ಇದ್ದು ಬಿಡಿ' ಎಂದರು. ಅಲ್ಲಿಂದ ಈ ಪ್ರೀತಿ-ಆದರದ ನದಿ ಹರಿಯಲು ಆರಂಭವಾಯಿತು.ಈ ಹಿರಿಯ ದಂಪತಿಯ ಪುತ್ರಿ ಅಲಕಾ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಾಸವಾಗಿದ್ದಾರೆ. ಅವರು ಆಗಾಗ ಬಂದು ಕ್ಷೇಮ ವಿಚಾರಿಸಿಕೊಂಡು, ಅಲ್ಪ ಸ್ವಲ್ಪ ಸಹಾಯ ಮಾಡಿ ಹೋಗುತ್ತಾರೆ. ಅದು ಬಿಟ್ಟರೆ ಎಲ್ಲ ಖರ್ಚುಗಳನ್ನೂ ವೀಣಾ ನೋಡಿಕೊಳ್ಳುತ್ತಿದ್ದಾರೆ. ವೀಣಾ ಅವರ ಇಬ್ಬರು ಹೆಣ್ಣು ಮಕ್ಕಳು ಬೆಂಗಳೂರಿನಲ್ಲಿದ್ದಾರೆ. ಪತಿ ರಾಮಕೃಷ್ಣ ಮತ್ತು 90ರ ವಯಸ್ಸಿನ ತಾಯಿಯೊಂದಿಗೆ ವೀಣಾ ಈ ಕಾಯಂ ಅತಿಥಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನಗುನಗುತ್ತಲೇ ಹೊತ್ತುಕೊಂಡಿದ್ದಾರೆ. ವೀಣಾ ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಬಂದಾಗ ಹಾಗೂ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದಾಗ ಈ ಅಜ್ಜ-ಅಜ್ಜಿ ಹಿರಿ ಹಿರಿ ಹಿಗ್ಗಿದ್ದಾರೆ.`ನಮ್ಮ ಮನೆಯಲ್ಲಿ ಇರಲು ಅವಕಾಶ ನೀಡಿದ್ದೇನೋ ನಿಜ. ಆದರೆ ಅವರು ಬಂದ ನಂತರ ನನ್ನ ಬದುಕಿಗೆ ಹಿರಿಯರ ನೆರಳು ಸಿಕ್ಕ ಅನುಭವವಾಗಿದೆ. ಇಳಿ ವಯಸ್ಸಿನಲ್ಲೂ ಅವರು ಆದರ್ಶ ಜೀವನ ನಡೆಸುತ್ತಿದ್ದಾರೆ. ಪ್ರತಿಯೊಂದು ವಿಚಾರದ ಬಗ್ಗೆ ಪರಸ್ಪರ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಂಡು ಬಂದ ಕಾರಣ ರಕ್ತದೊತ್ತಡ, ಮಧುಮೇಹದಂಥ ತೊಂದರೆ ಅವರನ್ನು ಕಾಡಲೇ ಇಲ್ಲ. ಹೀಗಾಗಿ ಅವರದು ಅನುಕರಣೀಯ ಬದುಕು' ಎನ್ನುತ್ತಾರೆ ವೀಣಾ.`ಇಂಥ ಪ್ರೀತಿ, ಆತ್ಮೀಯತೆ ಕಾಣಸಿಗುವುದು ಬಲು ಅಪರೂಪ. ನಮ್ಮ ಹೆತ್ತವರಿಗೆ ಸಮಾಧಾನದ ಬದುಕು ಕರುಣಿಸಿದ ವೀಣಾ ಸೇವೆ ಅನನ್ಯ' ಎಂಬುದು ಅಲಕಾ ಅವರ ಮನದಾಳದ ಮಾತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry