ಮಂಗಳವಾರ, ಏಪ್ರಿಲ್ 20, 2021
31 °C

ಹಿರಿಯ ನಟಿ ಮೈನಾವತಿ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟಿ ಮೈನಾವತಿ (77) ಶನಿವಾರ ನಿಧನ ಹೊಂದಿದರು. ಓರ್ವ ಪುತ್ರ ಹಾಗೂ ಪುತ್ರಿಯನ್ನು ಅವರು ಅಗಲಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರಾದ ಮೈನಾವತಿ ಎಳೆಯ ವಯಸ್ಸಿನಲ್ಲೇ ರಂಗಭೂಮಿ ಪ್ರವೇಶಿಸಿದ್ದರು. ಅವರ ತಂದೆ ರಂಗರಾವ್  ಪ್ರಖ್ಯಾತ ಹರಿಕಥಾ ವಿದ್ವಾನ್ ಆಗಿದ್ದರು ಹಾಗೂ ಅಕ್ಕ ಪಂಡರಿಬಾಯಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಅಪ್ಪ-ಅಕ್ಕನ ಕಲೆಯ ದಾರಿಯಲ್ಲಿ ನಡೆದ ಮೈನಾವತಿ ಕೂಡ ಬಣ್ಣದ ನಂಟು ಬೆಳೆಸಿಕೊಂಡರು. ಮುಂದಿನ ದಿನಗಳಲ್ಲಿ ಸೋದರಿಯರಿಬ್ಬರೂ ಚಿತ್ರರಂಗ ಪ್ರವೇಶಿದರು.

ಪಂಡರೀಬಾಯಿ ನಿರ್ಮಾಣದ `ಸತಿ ಸಕ್ಕೂ~ ಚಿತ್ರದ ಮೂಲಕ ಮೈನಾವತಿ ಸಿನಿಮಾ ಪ್ರವೇಶಿಸಿದರು.ಬೆಳ್ಳಿತೆರೆ ಪ್ರವೇಶಿಸಿದರೂ ರಂಗಭೂಮಿಯ ನಂಟನ್ನು ಉಳಿಸಿಕೊಂಡಿದ್ದರು. ವಿಭಿನ್ನ ಪಾತ್ರಗಳಿಗೆ ಜೀವತುಂಬುವ ಮೂಲಕ ಅವರು ಪ್ರೇಕ್ಷಕರ ನೆಚ್ಚಿನ ಅಭಿನೇತ್ರಿ ಎನ್ನಿಸಿಕೊಂಡಿದ್ದರು. ಪಂಡರೀಬಾಯಿ ಅವರ ನಿರ್ಮಾಣ ಸಂಸ್ಥೆಯಿಂದ ಹೊರಬಂದ ಕುಟುಂಬ ಯೋಜನೆ ಕುರಿತ `ಅನುರಾಧಾ~ ಚಿತ್ರದಲ್ಲಿ ರಾಜ್‌ಕುಮಾರ್ ಅವರಿಗೆ ನಾಯಕಿಯಾಗಿ ನಟಿಸಿದ್ದರು. ಎಚ್.ಎಲ್.ಎನ್. ಸಿಂಹ ನಿರ್ದೇಶನದ `ಅಬ್ಬಾ ಆ ಹುಡುಗಿ~ ಚಿತ್ರದಲ್ಲಿ ಪ್ಯಾಂಟ್ ತೊಡುವ ಆಧುನಿಕ ಹುಡುಗಿಯಾಗಿ ನಟಿಸಿ, ನೃತ್ಯ ಮಾಡಿ ಸೈ ಎನಿಸಿಕೊಂಡಿದ್ದರು. ಅವಕಾಶಗಳು ಕಡಿಮೆಯಾದಂತೆ ಪೋಷಕ ಪಾತ್ರಗಳಿಗೆ ಸೀಮಿತವಾದರು.`ಶ್ರೀಕೃಷ್ಣ ದೇವರಾಯ~, `ಭಕ್ತ ವಿಜಯ~, `ಹರಿಭಕ್ತ~, `ಸತಿ ನಳಾಯಿನಿ~, `ರಾಯರ ಸೊಸೆ~, `ಸರ್ವಜ್ಞ ಮೂರ್ತಿ~, `ಗಂಡೊಂದು ಹೆಣ್ಣಾರು~, `ಅಮ್ಮ~, `ಮುತ್ತೈದೆ ಭಾಗ್ಯ~, `ನಾನೇ ಭಾಗ್ಯವತಿ~, `ಸೋದರಿ~ ಅವರು ನಟಿಸಿದ ಕೆಲವು ಸಿನಿಮಾಗಳು. ಕನ್ನಡ, ತಮಿಳಿನ ಪ್ರಮುಖ ನಟರೊಂದಿಗೆ ಬಣ್ಣ ಹಚ್ಚಿರುವ ಮೈನಾವತಿ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದರು. ಅವರ ಪುತ್ರ ಗುರುದತ್ ಕೂಡ ಚಿತ್ರರಂಗದಲ್ಲಿ ಸಕ್ರಿಯರು.

`ನೋವು ತಂದ ಅಗಲಿಕೆ~

ನಾನು ಚಿತ್ರರಂಗಕ್ಕೆ ಬರುವುದಕ್ಕಿಂತ ಮುಂಚೆಯೇ ಅವರು ಜನಪ್ರಿಯ ನಟಿಯಾಗಿದ್ದರು. ನಮ್ಮನ್ನು ತುಂಬಾ ಪ್ರೀತಿ, ಗೌರವದಿಂದ ಕಾಣುತ್ತಿದ್ದರು. ಇಷ್ಟು ದೀರ್ಘಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಅವರನ್ನು ಕಳೆದುಕೊಂಡಿರುವುದು ನೋವಿನ ಸಂಗತಿ. ಹೀಗೆ, ಹಿರಿಯರು ಒಬ್ಬೊಬ್ಬರಾಗಿ ಅಗಲಿ ಹೋಗುತ್ತಿರುವುದು ನೋವು ಕೊಡುತ್ತದೆ.

-ಜಯಂತಿ, ಹಿರಿಯ ನಟಿ`ಸದಾ ಹಸನ್ಮುಖಿ~


1954ರಲ್ಲಿ ನಾನು ಮದ್ರಾಸ್‌ಗೆ ಹೋದಾಗ ಪಂಡರಿಬಾಯಿ ಮತ್ತು ಮೈನಾವತಿ ಅವರ ಪರಿಚಯವಾಯಿತು.  ಮೈನಾವತಿ ಯಾವಾಗಲೂ ಹಸನ್ಮುಖಿಯಾಗಿರುತ್ತಿದ್ದರು. ಸುಕ್ಕು ಬೀಳದ ಅವರ ಮುಖ ಕಂಡು `ಯಂಗ್ ಆಗಿದ್ದೀರ~ ಎಂದು ರೇಗಿಸುತ್ತಿದ್ದೆ. ತಮಗೆ ಕೊಟ್ಟ ಪಾತ್ರವನ್ನು ನಿರ್ವಹಿಸುವುದಷ್ಟೇ ಕಾಯಕ ಎಂದುಕೊಂಡಿದ್ದ ನಟಿ ಅವರು. ನಿರ್ಮಾಪಕರಿಗೆ ತೊಂದರೆ ಕೊಟ್ಟವರಲ್ಲ. 

 - ಸಿ.ವಿ. ಶಿವಶಂಕರ್, ಹಿರಿಯ ನಿರ್ದೇಶಕ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.