ಹಿರಿಯ ಪ್ರಾಥಮಿಕ ಶಾಲೆಗೆ ಪದವೀಧರ ಶಿಕ್ಷಕರು

7

ಹಿರಿಯ ಪ್ರಾಥಮಿಕ ಶಾಲೆಗೆ ಪದವೀಧರ ಶಿಕ್ಷಕರು

Published:
Updated:
ಹಿರಿಯ ಪ್ರಾಥಮಿಕ ಶಾಲೆಗೆ ಪದವೀಧರ ಶಿಕ್ಷಕರು

ಬೆಂಗಳೂರು: ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪದವೀಧರ     ಶಿಕ್ಷಕರು ನೇಮಕಗೊಳ್ಳಲಿದ್ದಾರೆ.ಕೇಂದ್ರ ಸರ್ಕಾರ ರೂಪಿಸಿರುವ ಏಕರೂಪ ಶೈಕ್ಷಣಿಕ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ತಾತ್ವಿಕವಾಗಿ ಒಪ್ಪಿದೆ. ಇದರಿಂದಾಗಿ ಆರು, ಏಳನೇ ತರಗತಿ ಜೊತೆಗೆ ಎಂಟನೇ ತರಗತಿಯೂ ಹಿರಿಯ ಪ್ರಾಥಮಿಕ ಶಾಲೆ ವ್ಯಾಪ್ತಿಗೆ ಬರಲಿದೆ. ಸದ್ಯ ಪ್ರೌಢಶಾಲೆ ವ್ಯಾಪ್ತಿಯಲ್ಲಿರುವ 8ನೇ ತರಗತಿಯನ್ನು ಹಂತ ಹಂತವಾಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ   ವಿಲೀನಗೊಳಿಸಲಾಗುತ್ತದೆ.ಈ ವರ್ಷವೇ ಸುಮಾರು ಎರಡು ಸಾವಿರ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿ ಆರಂಭವಾಗಲಿದೆ. ಸದ್ಯ ವಿಷಯವಾರು ಶಿಕ್ಷಕರು ಇಲ್ಲ. ಒಬ್ಬ ಶಿಕ್ಷಕ ಎಲ್ಲ ವಿಷಯಗಳನ್ನೂ ಬೋಧಿಸಬೇಕಾಗುತ್ತದೆ. ಶೀಘ್ರದಲ್ಲೇ ಈ ಪದ್ಧತಿಗೆ ವಿದಾಯ ಹೇಳಿ, ಪ್ರಾಥಮಿಕ ಶಾಲೆಗಳಲ್ಲೂ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ.ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪಿಯುಸಿ, ಡಿ.ಇಡಿ ವಿದ್ಯಾರ್ಹತೆ ಬದಲಿಗೆ, ಬಿ.ಎ.,ಬಿ.ಇಡಿ ಅಥವಾ ಬಿ.ಎಸ್ಸಿ., ಬಿ.ಇಡಿ ವಿದ್ಯಾರ್ಹತೆ ಹೊಂದಿರುವ    ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ.ಹಾಲಿ ಇರುವ ಶಿಕ್ಷಕರು ಇದರಿಂದ ಆತಂಕಪಡಬೇಕಾಗಿಲ್ಲ. ಅವರಿಗೆ ಆಸಕ್ತಿ ಇದ್ದರೆ ಸರ್ಕಾರ ನೀಡುವ ಸಂಬಳ ಸಹಿತ ರಜೆಯ ಸೌಲಭ್ಯ ಪಡೆದು ಉನ್ನತ ವ್ಯಾಸಂಗ ಪಡೆಯಬಹುದು. ಆದರೆ ಇದು ಕಡ್ಡಾಯ ಅಲ್ಲ.

ಖಾಸಗಿ ಶಾಲೆಗಳಿಗೆ ಸೂಚನೆ: ಬಿ.ಎ.,ಬಿ.ಇಡಿ ಅಥವಾ ಬಿ.ಎಸ್ಸಿ., ಬಿ.ಇಡಿ ವಿದ್ಯಾರ್ಹತೆ ಹೊಂದಿದವರನ್ನು ಮಾತ್ರ ನೇಮಕ ಮಾಡಿಕೊಳ್ಳುವಂತೆ ಸರ್ಕಾರ ಈಗಾಗಲೇ ಖಾಸಗಿ ಶಾಲೆಗಳಿಗೆ ಸೂಚನೆ ನೀಡಿದೆ. ಸರ್ಕಾರಿ ಶಾಲೆಗಳಲ್ಲೂ ಮುಂದೆ ಹೊಸದಾಗಿ ನೇಮಕ ಮಾಡಿಕೊಳ್ಳುವಾಗ ಇದನ್ನು ಪಾಲಿಸಲಾಗುತ್ತದೆ. ಈ ನಿಟ್ಟಿನಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲಾಗುತ್ತದೆ.ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸದಾಗಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಿ ಸರ್ಕಾರಕ್ಕೆ ಕಳುಹಿಸಿದೆ. ಸದ್ಯ ಆ ಪ್ರಸ್ತಾವ ಕಾನೂನು ಇಲಾಖೆಯ ಪರಿಶೀಲನೆಯಲ್ಲಿದೆ. ಆದಷ್ಟು ಬೇಗ ಹೊಸ ನಿಯಮಾವಳಿಗಳು ಜಾರಿಗೆ ಬರಲಿವೆ ಎಂಬ ವಿಶ್ವಾಸವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕುಮಾರ ನಾಯಕ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಸುಮಾರು 23 ಸಾವಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಎಲ್ಲ ಕಡೆ ಒಮ್ಮೆಗೆ 8ನೇ ತರಗತಿ ಆರಂಭಿಸುವುದು ಕಷ್ಟ. 2-3 ವರ್ಷಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 5ನೇ ತರಗತಿ ಕಿರಿಯ ಪ್ರಾಥಮಿಕ ಶಾಲೆ ವ್ಯಾಪ್ತಿಗೆ ಬರಲಿದೆ. ಆ ಶಾಲೆಗಳಿಗೆ ಡಿ.ಇಡಿ ವಿದ್ಯಾರ್ಹತೆವುಳ್ಳವರು ನೇಮಕಗೊಳ್ಳಲಿದ್ದಾರೆ. ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಬಿ.ಎ.,ಬಿ.ಇಡಿ ಅಥವಾ ಬಿ.ಎಸ್ಸಿ., ಬಿ.ಇಡಿ ವಿರ್ದ್ಯಾಹತೆವುಳ್ಳವರು ಶಿಕ್ಷಕರಾಗಲು ಅರ್ಹರಾಗಲಿದ್ದಾರೆ ಎಂದರು.ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಪಿಯುಸಿವರೆಗೂ ಕೇಂದ್ರದ ಅನುದಾನ ದೊರೆಯಲಿದೆ. ಹೀಗಾಗಿ ಪಿಯುಸಿಯನ್ನು ಪ್ರೌಢಶಾಲೆಯಲ್ಲಿ ವಿಲೀನಗೊಳಿಸಬೇಕಾಗುತ್ತದೆ.ಈ ಸಂಬಂಧ ವರದಿ ನೀಡಲು ಸಮಿತಿ ರಚಿಸಲಾಗಿದೆ. ಅದರ ವರದಿಯನ್ನು ಆಧರಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ವಿವರಿಸಿದರು.ಪಠ್ಯಕ್ರಮ ಬದಲಾವಣೆ: ಡಿ.ಇಡಿ ಮತ್ತು ಬಿ.ಇಡಿ ಪಠ್ಯಕ್ರಮವನ್ನು ಬದಲಾಯಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯ ಮುಖ್ಯ ಉದ್ದೇಶ ಗುಣಾತ್ಮಕ ಶಿಕ್ಷಣ ನೀಡುವುದಾಗಿದೆ. ಈ ಹಿನ್ನೆಲೆಯಲ್ಲಿ ಮೊದಲು ಶಿಕ್ಷಕರ ಗುಣಮಟ್ಟ ಹೆಚ್ಚಿಸಬೇಕು ಎಂಬ ದೃಷ್ಟಿಯಿಂದ ಪಠ್ಯಕ್ರಮ ಬದಲಾಯಿಸಲಾಗುತ್ತಿದೆ ಎಂದರು.ಶಿಕ್ಷಕರ ಹುದ್ದೆಗಳು ಖಾಲಿ: ರಾಜ್ಯದಲ್ಲಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮಂಜೂರಾಗಿರುವ ಶಿಕ್ಷಕರ ಹುದ್ದೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ.ರಾಜ್ಯದಲ್ಲಿ 21,109 ಸರ್ಕಾರಿ ಕಿರಿಯ ಹಾಗೂ 22,568 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಇವುಗಳಲ್ಲಿ ಒಟ್ಟು 12,602 ಹುದ್ದೆಗಳು ಖಾಲಿ ಇವೆ.ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲೂ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಆದರೆ ಸರ್ಕಾರಿ ಶಾಲೆಗಳಿಗೆ ಹೋಲಿಸಿದರೆ ಪರವಾಗಿಲ್ಲ. ಪ್ರಾಥಮಿಕ ಶಾಲೆಗಳಲ್ಲಿನ ಶಿಕ್ಷಕರ ನೇಮಕ ಸಂಬಂಧ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲಿಂದ ಒಪ್ಪಿಗೆ ದೊರೆತ ನಂತರ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎನ್ನುತ್ತಾರೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry