ಭಾನುವಾರ, ಮೇ 22, 2022
23 °C

ಹಿರಿಯ ಮುತ್ಸದ್ಧಿ ಎಂ. ಪಿ. ಪ್ರಕಾಶ್ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ, ಹಿರಿಯ ಮುತ್ಸದ್ಧಿ, ರಂಗಕರ್ಮಿ ಎಂ.ಪಿ. ಪ್ರಕಾಶ್ ಇಂದು ಮುಂಜಾನೆ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಬಹುಕಾಲದಿಂದ ಕ್ಯಾನ್ಸರ್ ಜೊತೆಗಿನ ಹೋರಾಟದಲ್ಲಿ ತೊಡಗಿದ್ದರೂ ಅವರು ತನ್ನ ಆಸಕ್ತಿಯ ಕ್ಷೇತ್ರಗಳಿಂದ ವಿಮುಖರಾಗಿರಲಿಲ್ಲ.

ಮರಿಸ್ವಾಮಯ್ಯ ಪಾಟೀಲ್ ಪ್ರಕಾಶ್ ಜನತಾ ಪರಿವಾರದ ಪ್ರಮುಖ ನಾಯಕರಲ್ಲಿ ಒಬ್ಬರು. ನಾಲ್ಕು ಬಾರಿ ವಿಧಾನ ಸಭೆಗೆ ಆಯ್ಕೆಯಾಗಿದ್ದ ಅವರು ಒಂದು ಅವಧಿಗೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದ್ದ ಅವರು ರಾಮಕೃಷ್ಣ ಹೆಗಡೆ, ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಸಂಪುಟಗಳಲ್ಲಿ ಮಂತ್ರಿಯಾಗಿದ್ದರು.

ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿರುವ ಎಂ.ಪಿ. ಪ್ರಕಾಶ್ ಬಹುಕಾಲ ಜನತಾ ಪರಿವಾರದಲ್ಲಿದ್ದರೂ ಜೆಡಿಎಸ್-ಬಿಜೆಪಿ ಸರ್ಕಾರದ ಪತನದ ನಂತರ ಕಾಂಗ್ರೆಸ್ ಸೇರಿದ್ದರು. ಅವರ ಅಧಿಕಾರದ ಅವಧಿಯುದ್ದಕ್ಕೂ ಯಾವ ಖಾತೆಯನ್ನು ನಿರ್ವಹಿಸುತ್ತಿದ್ದರು ಆಯಾ ಸರ್ಕಾರಗಳ ಸಾಂಸ್ಕೃತಿಕ ಮುಖದಂತೆ ಕಾರ್ಯ ನಿರ್ವಹಿಸುತ್ತಿದ್ದ ಪ್ರಕಾಶ್‍ಗೆ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಇದ್ದ ಗೆಳೆಯರೇ ಹೆಚ್ಚು.ವಕೀಲಿ ವೃತ್ತಿಯ ಮೂಲಕ ರಾಜಕಾರಣಕ್ಕೆ ಬಂದಿದ್ದ ಪ್ರಕಾಶ್ ರಂಗಭೂಮಿಯಲ್ಲೂ ಸಕ್ರಿಯರಾಗಿದ್ದವರು. ಒಂದು ಚಲನಚಿತ್ರದಲ್ಲಿಯೂ ಅಭಿನಯಿಸಿದ್ದ ಅವರು ಬುದ್ಧಿಜೀವಿ ರಾಜಕಾರಣಿ ಎಂಬ ಬಿರುದಿಗೆ ಪಾತ್ರರಾಗಿದ್ದರು.

ಬೆಂಗಳೂರಿನ ಫ್ರೀಡಂ ಪಾರ್ಕ್‍ ನಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿದೆ. ಬಳ್ಳಾರಿ ಜಿಲ್ಲೆಯ ಹಡಗಲಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಇದೆ ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.