ಗುರುವಾರ , ಮಾರ್ಚ್ 4, 2021
27 °C

ಹಿರಿಯ ಸಾಹಿತಿಗಳ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯ ಸಾಹಿತಿಗಳ ವಿರುದ್ಧ ಆಕ್ರೋಶ

ಮೈಸೂರು: ಇಲ್ಲಿನ ಎಂಜಿನಿಯರುಗಳ ಸಭಾಂಗಣದಲ್ಲಿ ಬುಧವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಹಿರಿಯ ಸಾಹಿತಿಗಳಾದ ಸಿ.ಪಿ. ಕೃಷ್ಣಕುಮಾರ್, ದೇ.ಜವರೇಗೌಡ, ಕೆ. ಭೈರವಮೂರ್ತಿ ಅವರ ವಿರುದ್ಧ ಕರ್ನಾಟಕ ರಾಜ್ಯ ಕನ್ನಡ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಎನ್‌ಟಿಎಂ ಶಾಲೆಯನ್ನು ರಾಮಕೃಷ್ಣಮಠಕ್ಕೆ ಹಸ್ತಾಂತರಿಸಬೇಕು ಎಂದು ದೇಜಗೌ, ಸಿಪಿಕೆ ಸೇರಿದಂತೆ ಹಲವು ಹಿರಿಯ ಸಾಹಿತಿಗಳು ಹೇಳಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಎನ್‌ಟಿಎಂ ಶಾಲೆ ಉಳಿವಿಕೆ ಹೋರಾಟ ನಡೆಸುತ್ತಿರುವ ಕಾರ್ಯಕರ್ತರನ್ನು ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ತಕ್ಷಣ ಸಿಪಿಕೆ ಅವರು ಕ್ಷಮೆ ಯಾಚಿಸಬೇಕೆಂದು ಘೋಷಣೆ ಗಳನ್ನು ಕೂಗಿದರು.

 

ಇದರಿಂದ ಸಮಾರಂಭದಲ್ಲಿ ಗೊಂದಲದ ವಾತಾವರಣ ಉಂಟಾಗಿ ಧಿಕ್ಕಾರ, ಘೋಷಣೆಗಳೇ ಕೇಳುವಂತಾಯಿತು. ನಂತರ ಮಧ್ಯ ಪ್ರವೇಶಿಸಿದ ಪೊಲೀಸರು ಕಾರ್ಯಕರ್ತರನ್ನು ಹೊರಕ್ಕೆ ಕರೆದುಕೊಂಡು ಹೋಗುವಲ್ಲಿ ಸಫಲರಾದರು. ರಾಮಕೃಷ್ಣ ಮಠಕ್ಕೆ ಬೆಂಬಲ ನೀಡಿರುವ ಸಾಹಿತಿಗಳ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಸಂಘಟನೆಯ ರಾಜ್ಯ ಘಟಕ ಅಧ್ಯಕ್ಷ ಆನಂದ್‌ಕುಮಾರ್ ಧಮಕಿ ಹಾಕಿದರು.ನಂತರ ಸಮಾರಂಭ ಆರಂಭವಾಗಿ ಡಾ.ಮಳಲಿ ವಸಂತಕುಮಾರ್ ಅವರ ‘ಅಕ್ಕಿಹೆಬ್ಬಾಳು ಮೂರ್ತಿರಾವ್ ಜೀವನ ಚರಿತ್ರೆ’ ಪುಸಕ್ತವನ್ನು ಸಿಪಿಕೆ ಬಿಡುಗಡೆ ಮಾಡಿ ಮಾತನಾಡಿದರು. ‘ದೊಡ್ಡದೊಂದು ಬಿರುಗಾಳಿ ಹೋದ ಹಾಗಾಯಿತು’ ಎನ್ನುತ್ತಲೇ  ಮಾತಿಗಿಳಿದ ಸಿಪಿಕೆ ‘ಕೃತಿಯಲ್ಲಿ ಮಳಲಿ ಅವರ ದೋಷದರ್ಶನ ಅತಿಯಾಯಿತು’ ಎಂದು ಆಕ್ಷೇಪ ವ್ಯಕ್ತಪಡಿಸಿದರು.‘ಪುಸ್ತಕದ ಹೆಸರೇ ತಪ್ಪಾಗಿದೆ. ಅಕ್ಕಿಹೆಬ್ಬಾಳು ನರಸಿಂಹರಾಯ ಮೂರ್ತಿರಾವ್ ಎಂದಾಗ­ಬೇಕಿತ್ತು. ಇಲ್ಲವೇ, ಎ.ಎನ್. ಮೂರ್ತಿರಾವ್ ಎಂದಾದರೂ ಇರಬೇಕಿತ್ತು. ಆದರೆ, ಅಕ್ಕಿಹೆಬ್ಬಾಳು ಮೂರ್ತಿರಾವ್ ಎಂದು ಇಟ್ಟಿರುವುದು ಅಷ್ಟು ಸರಿಯಲ್ಲ. ಏಕೆಂದರೆ ಮೂರ್ತಿರಾವ್ ಅವರು ಯಾವತ್ತೂ ಈ ಹೆಸರಿನಲ್ಲಿ ಬರೆಯಲೇ ಇಲ್ಲ’ ಎಂದರು.‘ಮೂರ್ತಿರಾವ್, ಡಿವಿಜಿ ಹಾಗೂ ಕುವೆಂಪು ಅವರಿಗೂ ಹಲವು ವೈದೃಶ್ಯಗಳಿವೆ. ದೇವರ ಇರುವಿಕೆಯನ್ನು ವೈಜ್ಞಾನಿಕವಾಗಿ ಕುವೆಂಪು ಸಿದ್ಧಮಾಡಲು ಯತ್ನಿಸಿದರು. ಡಿವಿಜಿ ಅವರು ಸಾಂಪ್ರದಾಯಿಕವಾಗಿ ಸಿದ್ಧಮಾಡಿದರು. ಆದರೆ, ಮೂರ್ತಿರಾವ್ ಅವರು ವೈಜ್ಞಾನಿಕವಾಗಿ ದೇವರ ಇರುವಿಕೆಯನ್ನು ಅಲ್ಲಗಳೆದರು’ ಎಂದು ಅಭಿಪ್ರಾಯಪಟ್ಟರು.‘ಮೂರ್ತಿರಾವ್ ಅವರ ‘ದೇವರು’ ಒಂದು ಅದ್ಭುತ ಪುಸ್ತಕ. ಇದು ಚಿಕ್ಕದಾದರೂ ಗಣ್ಯ ಕೃತಿ. ದೇವರನ್ನು ನಂಬದ ಮೂರ್ತಿರಾವ್ ಅವರು ಆಸ್ತಿಕರ ಜತೆ ಅಸಹನೆಯಿಂದ ಕೂಡಿದವರಾಗಿ­ರಲಿಲ್ಲ. ಅದು ಅವರ ದೊಡ್ಡತನ’ ಎಂದರು.‘ಡಿವಿಜಿ ಅವರು 1940ಕ್ಕೆ ಸುವರ್ಣಯುಗ ಅಂತ್ಯವಾಯಿತು ಎಂದರು. ಇದು ಒಂದು ರೀತಿಯಲ್ಲಿ ಪ್ರತಿಗಾಮಿತನವಾಗಿ ಕಾಣುತ್ತದೆ. ಆದರೆ, ಮೂರ್ತಿರಾವ್‌ ಅವರು ಸುವರ್ಣಯುಗ ಬಂದೇ ಇಲ್ಲ ಎನ್ನುತ್ತಾರೆ. ಹೀಗಾಗಿ, ಇಬ್ಬರಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಆದಾಗ್ಯೂ ಡಿವಿಜಿ ಅವರದು ಬಹುದೊಡ್ಡ ವ್ಯಕ್ತಿತ್ವ ಎಂಬುದು ನಿರ್ವಿವಾದದ ಸಂಗತಿ’ ಎಂದು ಅಭಿಪ್ರಾಯಪಟ್ಟರು.ಹಿರಿಯ ಸಾಹಿತಿಗಳಾದ ಡಾ.ದೇ. ಜವರೇಗೌಡ, ಪ್ರೊ.ಕೆ. ಭೈರವಮೂರ್ತಿ, ಡಾ.ಮಳಲಿ ವಸಂತಕುಮಾರ್, ಜಿ.ಎಸ್. ಭಟ್ಟ, ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಸದಸ್ಯ ಡಾ.ಕಬ್ಬಿನಾಲೆ ವಸಂತಭಾರದ್ವಾಜ್, ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್, ಮುಖಂಡರು, ಸಾಹಿತಿಗಳು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.