ಹಿರಿಯ ಸಾಹಿತಿ ಸಾ.ಶಿ. ಮರುಳಯ್ಯ ಇನ್ನಿಲ್ಲ

7

ಹಿರಿಯ ಸಾಹಿತಿ ಸಾ.ಶಿ. ಮರುಳಯ್ಯ ಇನ್ನಿಲ್ಲ

Published:
Updated:
ಹಿರಿಯ ಸಾಹಿತಿ ಸಾ.ಶಿ. ಮರುಳಯ್ಯ ಇನ್ನಿಲ್ಲ

ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ ಸಾ.ಶಿ. ಮರುಳಯ್ಯ (85) ಶುಕ್ರವಾರ ಬೆಳಿಗ್ಗೆ ನಿಧನರಾದರು.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೆಲ ದಿನಗಳಿಂದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಸಾ.ಶಿ.ಮ ಇಚ್ಛೆಯಂತೆ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಜೆ.ಎಸ್.ಎಸ್‌ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

1931ರಲ್ಲಿ ಜನಿಸಿದ ಸಾ.ಶಿ. ಮರುಳಯ್ಯ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದವರು. ತಂದೆ ಶಿವರುದ್ರಯ್ಯ, ತಾಯಿ ಸಿದ್ದಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಸಾಸಲು ಗ್ರಾಮದಲ್ಲಿ. ಕಾಲೇಜು ಕಲಿತಿದ್ದು ಚಿತ್ರದುರ್ಗದಲ್ಲಿ. ಇಂಟರ್‌ಮೀಡಿಯಟ್‌ ಮುಗಿಸಿ ಮ್ಯಾಂಗನೀಸ್ ಗಣಿಯ ಕಂಟ್ರಾಕ್ಟರ್ ಬಳಿ ಕೆಲಕಾಲ ಗುಮಾಸ್ತರಾಗಿ ಕೆಲಸ ಮಾಡಿದರು.

ಕೂಡಿಟ್ಟ ಹಣದಿಂದ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರಿಗೆ ಬಂದ ಸಾ.ಶಿ.ಮ ಅವರಿಗೆ ಬಿ.ಎ ಆನರ್ಸ್‌ನಲ್ಲಿ ಡಿ.ಎಲ್.ಎನ್, ದೇಜಗೌ, ತ.ಸು.ಶಾಮರಾಯ, ಎಸ್.ವಿ.ಪರಮೇಶ್ವರ ಭಟ್ಟ, ಎಸ್.ವಿ.ರಂಗಣ್ಣ ಮುಂತಾದ ವಿದ್ವಾಂಸರ ಮಾರ್ಗದರ್ಶನ ದೊರೆಯಿತು. ಎಂ.ಎ. ಓದಲು ಅಡಚಣೆಯಾಗಿ ಮತ್ತೆ ಉದ್ಯೋಗಕ್ಕೆ ಸೇರಿದರು.

ಚಾಮರಾಜನಗರ ಕಾಲೇಜಿನ ಅರೆಕಾಲಿಕ ಶಿಕ್ಷಕರಾಗಿ ಕೆಲ ಕಾಲ ಕಾರ್ಯನಿರ್ವಹಿಸಿದರು. ಎಂ.ಎ ಪೂರ್ಣಗೊಳಿಸಿ ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಕಾಲೇಜುಗಳಲ್ಲಿ ಬೋಧನಾ ವೃತ್ತಿ ಮುಂದುವರಿಸಿದರು.1995ರಿಂದ 1998ರವರೆಗೆ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ರಾಜ್ಯಭಾಷಾ ಆಯೋಗದ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

‘ಶಿವತಾಂಡವ’, ‘ಕೆಂಗನಕಲ್ಲು’, ‘ರಾಸಲೀಲೆ’, ‘ರೂಪಸಿ’ (ಕಾವ್ಯ); ‘ಪುರುಷಸಿಂಹ’, ‘ಹೇಮಕೂಟ’, ‘ಸಾಮರಸ್ಯದ ಶಿಲ್ಪ’ (ಕಾದಂಬರಿ); ‘ವಿಜಯವಾತಾಪಿ’, ‘ಎರಡು ನಾಟಕಗಳು’, ‘ಮರೀಬೇಡಿ’ (ನಾಟಕ); ‘ನೆಲದ ಸೊಗಡು’ (ಕಥಾಸಂಕಲನ); ‘ವಚನ ವೈಭವ’, ‘ಸ್ಪಂದನ’, ‘ಅವಲೋಕನ’ (ಸಂಶೋಧನಾ ಕೃತಿಗಳು); ‘ಮಾಸ್ತಿಯವರ ಕಾವ್ಯಸಮೀಕ್ಷೆ’, ‘ಅಭಿವ್ಯಕ್ತ’, ‘ಅನುಶೀಲನ’ (ವಿಮರ್ಶೆ) ಅವರ ಪ್ರಮುಖ ಕೃತಿಗಳು.

ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ಎಚ್.ನರಸಿಂಹಯ್ಯ ಪ್ರಶಸ್ತಿ ಸಾ.ಶಿ.ಮ ಅವರಿಗೆ ಸಂದ ಕೆಲ ಗೌರವಗಳು. ಅವರ ‘ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ’ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಸಂದಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry