ಹಿರೇಕುರುಬರಹಳ್ಳಿ: ಕೇಳುವರಿಲ್ಲ ದಲಿತರ ಗೋಳು!

7

ಹಿರೇಕುರುಬರಹಳ್ಳಿ: ಕೇಳುವರಿಲ್ಲ ದಲಿತರ ಗೋಳು!

Published:
Updated:
ಹಿರೇಕುರುಬರಹಳ್ಳಿ: ಕೇಳುವರಿಲ್ಲ ದಲಿತರ ಗೋಳು!

ಕುಡಿಯಲು ಶುದ್ಧವಾದ ನೀರಿಲ್ಲ. ಫ್ಲೋರೈಡ್‌ಯುಕ್ತ ನೀರು. ಉತ್ತಮ ರಸ್ತೆ ಇಲ್ಲ. ಇದ್ದರೂ ಬರೀ ದೂಳುಯುಕ್ತ ರಸ್ತೆಗಳು, ಗ್ರಾಮದ ಮಕ್ಕಳು ಉಣ್ಣುವ ಅನ್ನದಲ್ಲಿ ರಸ್ತೆಯ ದೂಳು! ಉತ್ತಮವಾದ ಚರಂಡಿ ವ್ಯವಸ್ಥೆ ಇಲ್ಲ. ಆದರೂ, ಇವುಗಳ ನಡುವೆಯೇ ಈ ಗ್ರಾಮದ ದಲಿತರು ಬದುಕನ್ನು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದಾರೆ.–ಇದು ಬಸವಾಪಟ್ಟಣ ಹೋಬಳಿಗೆ ಸೇರುವ ಹಿರೇಕುರುಬರಹಳ್ಳಿ (ಕಬ್ಬಳದಿಂದ 6 ಕಿಮೀ ದೂರ) ಗ್ರಾಮದ ಚಿತ್ರಣ. ಈ ಗ್ರಾಮ ಅಪ್ಪಟ ದಲಿತರ ಊರು. ಇದನ್ನು ಈ ಹಿಂದೆ ‘ಕುಂದೂರು ಮಾದರಹಟ್ಟಿ’ ಎಂದೇ ಕರೆಯಲಾಗುತ್ತಿತ್ತು.ಸುಮಾರು 35 ಮನೆಗಳನ್ನು ಹೊಂದಿರುವ ಈ ಗ್ರಾಮದಲ್ಲಿ 200 ಜನರು ವಾಸಿಸುತ್ತಿದ್ದಾರೆ. ಇವರೆಲ್ಲರೂ ದಲಿತರು. ಈ ಗ್ರಾಮಕ್ಕೆ ಸೂಕ್ತವಾದ ಬಸ್‌ ವ್ಯವಸ್ಥೆ ಇಲ್ಲ. ಈ ಊರಿಗೆ ಬರುವವರು ಕಬ್ಬಳದಲ್ಲಿ ಇಳಿದುಕೊಂಡು ಅಲ್ಲಿಂದ ಆಟೊ ಅಥವಾ ದ್ವಿಚಕ್ರ ವಾಹನಗಳ ಮೂಲಕ ಈ ಗ್ರಾಮಕ್ಕೆ ಬರಬೇಕಾಗುತ್ತದೆ. ಈ ಗ್ರಾಮದ ರಸ್ತೆಗಳ ಸ್ಥಿತಿಯಂತೂ ಹೇಳತೀರದು. ರಸ್ತೆಯಲ್ಲಿನ ಮಣ್ಣಿನ ದೂಳು ಗ್ರಾಮದ ಜನರು ನಿತ್ಯ ಊಟದ ತಟ್ಟಿಯಲ್ಲಿ ಗಾಳಿ ಮೂಲಕ ಬಂದು ಬೀಳುತ್ತದೆ. ರಸ್ತೆಯಲ್ಲಿ ವಿದ್ಯುತ್‌ ದ್ವೀಪದ ವ್ಯವಸ್ಥೆ ಇಲ್ಲ. ಸಂಜೆಯಾಗುತ್ತಿದ್ದಂತೆ ಇಡೀ ಗ್ರಾಮವನ್ನೇ ಕತ್ತಲು ಆವರಿಸಿಕೊಳ್ಳುತ್ತದೆ. ಇನ್ನು ಇಲ್ಲಿನ ನೀರುಸಂಪೂರ್ಣವಾಗಿ ಫ್ಲೋರೈಡ್‌ ಅಂಶಗಳಿಂದ ತುಂಬಿಕೊಂಡಿದೆ. ಅದನ್ನೇ ಇಲ್ಲಿನ ದಲಿತರು ಅನಿವಾರ್ಯವಾಗಿ ಕುಡಿಯುತ್ತಿದ್ದಾರೆ. ಗ್ರಾಮದ ಸುತ್ತಲೂ ಮುಳ್ಳಿನ ಪೊದೆಗಳು ತುಂಬಿಕೊಂಡಿವೆ. ಈ ಗ್ರಾಮದ ಬಹುತೇಕ ದಲಿತರಿಗೆ ಸ್ವಲ್ಪ ಭೂಮಿ ಇದ್ದು ಅದರಿಂದಲೇ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.ಇತಿಹಾಸ: 1925ರಲ್ಲಿ ಹೊನ್ನಾಳಿ ತಾಲ್ಲೂಕಿನ ಕುಂದೂರಿನಲ್ಲಿದ್ದ ದಲಿತ ಮುಖಂಡ ಹನುಮಂತಪ್ಪ ಎಂಬುವವರು, ಮೈಸೂರು ರಾಜರ ಸರ್ಕಾರದ ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರಾಗಿದ್ದ ಸಮಯದಲ್ಲಿ ರಾಜರು ನೀಡಿದ 150 ಎಕರೆ ಭೂಮಿಯ ಸಾಗುವಳಿಗಾಗಿ ಕುಂದೂರನ್ನು ಬಿಟ್ಟು ಬಂದು ನೆಲೆಸಿದ್ದರು. ಈ ಪ್ರದೇಶ ಮೊದಲು ಕುಂದೂರು ಮಾದರಹಟ್ಟಿ ಎಂದು ಕರೆಯಲಾಗಿತ್ತು. ಪ್ರಸ್ತುತ ಹಿರೇ ಕುರುಬರಹಳ್ಳಿ ಗ್ರಾಮ ಎಂದು ಕರೆಯಲಾಗುತ್ತಿದೆ.ಮದ್ಯಪಾನ, ಮಾಂಸಾಹಾರ ನಿಷೇಧ!: ಸ್ವಾತಂತ್ರ್ಯ ಪೂರ್ವದಲ್ಲಿ ಹೊನ್ನಾಳಿಗೆ ಬಂದಿದ್ದ ಮಹಾತ್ಮ ಗಾಂಧೀಜಿ ಅವರ ಪ್ರಭಾವದಿಂದ ಈ ಗ್ರಾಮದ ದಲಿತರು ಮದ್ಯಪಾನ ಮತ್ತು ಮಾಂಸಾಹಾರವನ್ನು ಸಂಪೂರ್ಣವಾಗಿ ಬಿಟ್ಟಿದ್ದರು.   ಇಲ್ಲಿನ ದಲಿತರು ಈಗಲೂ ಅದನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. ಯಾವುದೇ ಹಬ್ಬ– ಹರಿದಿನಗಳು ಬಂದರೂ ಇಲ್ಲಿ ಮಾಂಸಾಹಾರ ಹಾಗೂ ಮದ್ಯ ಸೇವನೆ ಸಂಪೂರ್ಣ ನಿಷೇಧ. ಮಾರಿಹಬ್ಬದ ನೆಪದಲ್ಲಿ ಬಲಿ–ಪೂಜೆಗಳಿಗೆ ಅವಕಾಶವೇ ಇಲ್ಲ. ದಲಿತ ಯುವಕರೂ ಕೂಡ ಇದನ್ನೇ ಅನುಸರಿಸುತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ನಿವೃತ್ತ ಶಿಕ್ಷಕ ಕೆ.ಎನ್‌.ತಿಪ್ಪೇಸ್ವಾಮಿ.ಶಿಥಿಲಾವಸ್ಥೆಯಲ್ಲಿರುವ ದೇವಾಲಯ: ಗ್ರಾಮದ ದಲಿತರು ಆಂಜನೇಯ ಸ್ವಾಮಿ ಭಕ್ತರು. ಇಲ್ಲಿನ ಆಂಜನೇಯ ಸ್ವಾಮಿ ದೇವಾಲಯ ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದೆ.ಇಲ್ಲಿನ ಒಂದೇ ಒಂದು ಶಾಲಾ ಕೊಠಡಿಯಲ್ಲಿ ನಾಲ್ಕೂ ತರಗತಿಗಳು ನಡೆಯಬೇಕು. ಇರುವ ಒಬ್ಬ ಉಪಾಧ್ಯಾಯ ಮಕ್ಕಳಿಗೆ ಬೋಧನೆ ಮಾಡುವುದರೊಂದಿಗೆ ಬಿಸಿಯೂಟದ ವ್ಯವಸ್ಥೆ, ಶಾಲಾ ಸ್ವಚ್ಛತೆ, ಹಾಲು ವಿತರಣೆ ಎಲ್ಲವನ್ನೂ ನೋಡಿಕೊಳ್ಳಬೇಕು.  ಈ ಶಾಲೆಗೆ ಸರ್ಕಾರದಿಂದ ಸರಬರಾಜಾಗುವ ಪಡಿತರ ಧಾನ್ಯಗಳು ಶಾಲೆಯ ಸಮೀಪಕ್ಕೆ ಬರುವುದಿಲ್ಲ.  ದಿನಸಿ ಲಾರಿಯವರು ಕರೆದಲ್ಲಿಗೆ ಶಿಕ್ಷಕರು ಹೋಗಬೇಕು. ಕಾರಣ, ಇಲ್ಲಿಗೆ ಲಾರಿ ಬರಲು ರಸ್ತೆ ಸರಿ ಇಲ್ಲ ಎನ್ನುತ್ತಾರೆ  ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್‌.ಕಂಸಾಗರ ಗ್ರಾಮ ಪಂಚಾಯ್ತಿಗೆ ಸೇರಿರುವ ಈ ಹಳ್ಳಿಗೆ ಅಲ್ಲಿಂದಲೇ ಕುಡಿಯುವ ನೀರು ಬರಬೇಕು. ಈ ನೀರಿನಲ್ಲಿ ಫ್ಲೋರೈಡ್‌ ಅಂಶ ಹೆಚ್ಚಿರುತ್ತದೆ. ಅದನ್ನೇ ಗ್ರಾಮಸ್ಥರು ಕುಡಿಯುತ್ತಾರೆ ಎನ್ನುತ್ತಾರೆ ಗ್ರಾಮದ ಯುವಕ ಮಹೇಶ್ವರಪ್ಪ.ಇಲ್ಲಿನ ಸಮಸ್ಯೆಗಳ ಬಗ್ಗೆ ಗ್ರಾಮ ಪಂಚಾಯ್ತಿಯ ಗಮನಕ್ಕೆ ತಂದರೂ ಯಾವುದೇ ಪರಿಹಾರ ದೊರೆತಿಲ್ಲ.ಈ ಗ್ರಾಮ ಇತರೆ ದಲಿತ ಗ್ರಾಮಗಳಿಗೆ ಮಾದರಿ ಗ್ರಾಮ ಎನ್ನಬಹುದು. ಜಿಲ್ಲಾಡಳಿತ ಗ್ರಾಮಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂಬುದು ಗ್ರಾಮಸ್ಥರು ಮನವಿ.ಕಣಿವೆ ಬಿಳಚಿ, ಕೆಂಗಾಪುರ ಮತ್ತು ಕಂಸಾಗರದಿಂದ ಈ ಗ್ರಾಮಕ್ಕೆ ಟಾರ್‌ ರಸ್ತೆ, ಬಸ್‌ ವ್ಯವಸ್ಥೆ, ರಸ್ತೆಯ ವಿಸ್ತರಣೆ, ಗ್ರಾಮದಲ್ಲಿ ಮುಳ್ಳು ಪೊದೆ ತೆಗೆದುಹಾಕಬೇಕು.ಆಂಜನೇಯ ಸ್ವಾಮಿ ದೇವಾಲಯ ಜೀರ್ಣೋದ್ಧಾರ,  ಶುದ್ಧ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಎಲ್ಲಾ ಮನೆಗಳಿಗೂ ಕಡ್ಡಾಯವಾಗಿ ಶೌಚಾಲಯ ನಿರ್ಮಾಣ, ವಸತಿ ಹೀನರಿಗಾಗಿ ಕನಿಷ್ಠ ಹತ್ತು ಆಶ್ರಯ ಮನೆಗಳನ್ನು ನೀಡಬೇಕು ಎಂದು ತಾಲ್ಲೂಕು ಮಾದಿಗ ದಂಡೋರ ಸಮಿತಿಯ ಅಧ್ಯಕ್ಷ ಮೋಹನದಾಸ್‌, ಸಮಾಜದ ಮುಖಂಡರಾದ ಎನ್‌.ಎಚ್‌.ವೆಂಕಟೇಶ್ವರಪ್ಪ, ಪ್ರಕಾಶ್‌ಬಾಬು ಒತ್ತಾಯಿಸಿದ್ದಾರೆ.ನೇನು ಬೇಕಿದೆ ?

ಶುದ್ಧ ಕುಡಿಯುವ ನೀರು, ಬಸ್‌, ಬೀದಿ ದೀಪದ ವ್ಯವಸ್ಥೆ.ಸುಗಮ ರಸ್ತೆ, ದೇವಾಲಯದ ಜೀರ್ಣೋದ್ಧಾರ.  ಶೌಚಾಲಯ, ಆಶ್ರಯ ಮನೆ, ವಾಚನಾಲಯ, ಸಮುದಾಯ ಭವನ ಮತ್ತು ಅಂಗನವಾಡಿ ಕೇಂದ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry