ಹಿರೇನಲ್ಲೂರು: ವಿಷಾಹಾರ- 30 ವಿದ್ಯಾರ್ಥಿನಿಯರು ಅಸ್ವಸ್ಥ

7

ಹಿರೇನಲ್ಲೂರು: ವಿಷಾಹಾರ- 30 ವಿದ್ಯಾರ್ಥಿನಿಯರು ಅಸ್ವಸ್ಥ

Published:
Updated:

ಹಿರೇನಲ್ಲೂರು (ಬೀರೂರು):  ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಬುಧವಾರ ಬೆಳಿಗ್ಗೆ ವಿಷಾಹಾರ ಸೇವನೆಯಿಂದ 30ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಬೀರೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಹಾಸ್ಟೆಲ್ ವಾರ್ಡನ್ ನಿರ್ಮಲಾ ಅವರನ್ನು ಅಮಾನತುಗೊಳಿಸಲಾಗಿದೆ.ಹಾಸ್ಟೆಲ್ ಅವ್ಯವಸ್ಥೆ ಕಂಡು ಆಕ್ರೋಶಗೊಂಡಿದ್ದ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಎಂ.ಎಚ್.ಪ್ರಕಾಶ್‌ಮೂರ್ತಿ ಅವರಿಗೆ ಘೇರಾವ್ ಹಾಕಿದರು. ಪರಿಣಾಮ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನತೆ ಉಂಟಾಗಿತ್ತು.ಕಡೂರು ತಾಲ್ಲೂಕು ಹಿರೇನಲ್ಲೂರಿನ ಬಾಲಕಿಯರ ವಸತಿ ನಿಲಯದಲ್ಲಿ 1ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುವ 40ಕ್ಕೂ ಅಧಿಕ ವಿದ್ಯಾರ್ಥಿನಿಯರಿದ್ದಾರೆ. ಬುಧವಾರ ಬೆಳಿಗ್ಗೆ ಉಪಾಹಾರ ಸೇವಿಸಿದ ನಂತರ 30ಕ್ಕೂ ಅಧಿಕ ಮಂದಿ ವಾಂತಿ ಹಾಗೂ ಹೊಟ್ಟೆ ನೋವಿನಿಂದ ಬಳಲಾರಂಭಿಸಿದರು. ಗ್ರಾಮಸ್ಥರೇ ಮುಂದಾಗಿ ಆಂಬ್ಯುಲೆನ್ಸ್‌ನಲ್ಲಿ ಬೀರೂರು ಆಸ್ಪತ್ರೆಗೆ ಕರೆತಂದರು.

ಸುದ್ದಿ ತಿಳಿದು ಬೀರೂರಿಗೆ ಆಗಮಿಸಿದ ಶಾಸಕ ಡಾ. ವಿಶ್ವನಾಥ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದುದನ್ನು ಗಮನಿಸಿ ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆಗೆ ಖುದ್ದು ಕೈಜೋಡಿಸಿದರು.ವಾರದ ಹಿಂದೆಯೂ ಕಳಪೆ ಆಹಾರ: ವಾರದ ಹಿಂದೆಯೂ ಕಳಪೆ ಆಹಾರ ನೀಡಲಾಗಿತ್ತು. ಆದರೆ ಹಾಸ್ಟೆಲ್‌ಗೆ ಭೇಟಿ ನೀಡಿದ್ದ ಅಧಿಕಾರಿಗಳು ಮುಂದೆ ಈ ರೀತಿ ಲೋಪವಾಗದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡಿದ್ದರಿಂದ ಸುಮ್ಮನಾದೆವು ಎಂದು ಪೋಷಕರು ಆಸ್ಪತ್ರೆ ಬಳಿ ಮಾಧ್ಯಮ ಪ್ರತಿನಿಧಿಗಳ ಎದುರು ಅಲವತ್ತುಕೊಂಡರು.  ‘ಹಾಸ್ಟೆಲ್‌ನಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಹಣ್ಣುಗಳನ್ನು ನೀಡುತ್ತಲೇ ಇರಲಿಲ್ಲ ಎಂಬ ವಿಷಯವನ್ನೂ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದೇ ಪರಿಸ್ಥಿತಿ ಪುನರಾವರ್ತನೆಯಾದರೆ ಮಕ್ಕಳ ಗತಿಯೇನು?’ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.ಬೆಳಿಗ್ಗೆ ಉಪಹಾರ ಸೇವನೆ ವೇಳೆಯೇ ತಿಂಡಿ ವಾಸನೆ ಬರುತ್ತಿದೆ ಎಂದು ದೂರಿದರೂ ವಾರ್ಡನ್ ಕಿವಿಗೊಡಲಿಲ್ಲ. ಬದಲಿಗೆ ಸುಮ್ಮನೆ ಆಹಾರ ಸೇವಿಸಿ ಎಂದು ಗದರಿಸಿದ್ದಾಗಿ ವಿದ್ಯಾರ್ಥಿನಿಯರು ದೂರಿದರು.ಅಮಾನತು: ಈ ಮಧ್ಯೆ, ಆಸ್ಪತ್ರೆಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಭಾಕರ್, ಕರ್ತವ್ಯಲೋಪ ಕಾರಣ ವಾರ್ಡನ್ ನಿರ್ಮಲಾ ಅವರನ್ನು ಅಮಾನತುಗೊಳಿಸಲಾಗಿದ್ದು, ಘಟನೆ ಬಗ್ಗೆ ಇಲಾಖಾ ತನಿಖೆಗೂ ಸೂಚಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry