ಹಿಸ್ಸಾರ್ ಉಪ ಚುನಾವಣೆ: ನ್ಯಾ. ಸಂತೋಷ್ ಹೆಗ್ಡೆ ಅಸಮಾಧಾನ

7

ಹಿಸ್ಸಾರ್ ಉಪ ಚುನಾವಣೆ: ನ್ಯಾ. ಸಂತೋಷ್ ಹೆಗ್ಡೆ ಅಸಮಾಧಾನ

Published:
Updated:

ನವದೆಹಲಿ, (ಪಿಟಿಐ): ಅಣ್ಣಾ ಅವರು ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಹೋರಾಟ ರಾಜಕೀಯೇತರ ಆಂದೋಲನವಾಗಿ ಮುಂದುವರಿಯಬೇಕು ಎಂದು ಕರ್ನಾಟಕದ ಮಾಜಿ ಲೋಕಾಯುಕ್ತ ಹಾಗೂ ಅಣ್ಣಾ ತಂಡದ ಸದಸ್ಯರಲ್ಲಿ ಒಬ್ಬರಾದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಲಹೆ ಮಾಡಿದ್ದಾರೆ.  ಭ್ರಷ್ಟಾಚಾರಿಗಳು ಕೇವಲ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರವಲ್ಲ ಎಲ್ಲ ಪಕ್ಷದಲ್ಲೂ ಇದ್ದಾರೆ. ಹೀಗಿರುವಾಗ ರಾಜಕೀಯೇತರ ಆಂದೋಲನವೊಂದು ಹಿಸ್ಸಾರ್ ಉಪ ಚುನಾವಣೆಗೆ ತೆರಳುವುದು ಅಗತ್ಯವಿರಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಹಿಸ್ಸಾರ್‌ನಲ್ಲಿ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಮಾತ್ರ ಮನವಿ ಮಾಡಬಹುದಿತ್ತು. ಅದನ್ನು ಬಿಟ್ಟು ಕಾಂಗ್ರೆಸ್ ವಿರುದ್ಧ ಅಣ್ಣಾ ತಂಡ ಪ್ರಚಾರಕ್ಕೆ ತೆರಳಿರುವುದು ಸರಿಯಾದ ಕ್ರಮವಲ್ಲ ಎಂದು ಹೆಗ್ಡೆ ನಿಯತಕಾಲಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಹೀಗೆಂದ ಮಾತ್ರಕ್ಕೆ ನಾನು ಕಾಂಗ್ರೆಸ್ ಪರ ಎಂದು ಭಾವಿಸಬೇಕಿಲ್ಲ. ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ನನಗೆ ಇಷ್ಟವಿಲ್ಲ. ನಾನು ರಾಜಕೀಯೇತರ ವ್ಯಕ್ತಿ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಹಿಸ್ಸಾರ್ ಉಪ ಚುನಾವಣೆ ಕುರಿತು ನಿರ್ಧಾರ ತೆಗೆದುಕೊಳ್ಳುವ ಮುನ್ನ ಅಣ್ಣಾ ತಂಡದ ಯಾರೂ ತಮ್ಮನ್ನು ಸಂಪರ್ಕಿಸಿರಲಿಲ್ಲ, ಅವರ ನಿಲುವಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಅರವಿಂದ್ ಕೇಜ್ರಿವಾಲ್ ದೂರವಾಣಿಯಲ್ಲಿ ಸಂಪರ್ಕಿಸಿ ಅಭಿಪ್ರಾಯ ಕೇಳಿದ್ದರು ಎಂದಿದ್ದಾರೆ.ಲೋಕಪಾಲ ಮಸೂದೆ ಜಾರಿಗೆ ಕೇಂದ್ರ ಸರ್ಕಾರ ಒಪ್ಪದಿದ್ದರೆ ಈ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಒಂದು ವೇಳೆ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಜಾರಿಯಾದರೆ ಹಿಸ್ಸಾರ್‌ನಲ್ಲಿ ತೆಗೆದುಕೊಂಡ ನಿರ್ಧಾರ ತಪ್ಪಾಗುತ್ತದೆ.ಆದ್ದರಿಂದ ಏನಾದರೂ ಬದಲಾವಣೆ ತರಲು ಬಯಸಿದರೆ ಸಲ್ಪ ತಾಳ್ಮೆ ಅಗತ್ಯ ಎಂದು ಅವರಿಗೆ ತಿಳಿಸಿರುವುದಾಗಿ ಹೇಳಿದರು. ಒಟ್ಟಾರೆ ಹಿಸ್ಸಾರ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮತ್ತು `ಸಂಸತ್‌ಗಿಂತ ಅಣ್ಣಾ ದೊಡ್ಡವರು~ ಎಂಬ ಕೇಜ್ರಿವಾಲ್ ಅವರ ಹೇಳಿಕೆ ಮುಜುಗರ ಉಂಟು ಮಾಡಿದೆ ಎಂದು ಹೆಗ್ಡೆ ಪುನರುಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry