ಹೀಗೆ ಕಾಣಬೇಕಂತೆ ಮದುಮಗಳು!

7

ಹೀಗೆ ಕಾಣಬೇಕಂತೆ ಮದುಮಗಳು!

Published:
Updated:

ಪ್ರೀತಿಸುವ ಹುಡುಗಿಯ ಮನಸ್ಸು ಹೂವಿನಂತೆ. ಪ್ರೀತಿಗೆ ಬಿದ್ದ ಹುಡುಗಿಯ ಮನದಲ್ಲಿ ಸದಾ ಉಲ್ಲಾಸದ ಸೋನೆ ಮಳೆ ಸುರಿಯುತ್ತಲೇ ಇರುತ್ತದೆ. ಪ್ರೀತಿ ಪಕ್ವಗೊಂಡ ನಂತರ ಅದಕ್ಕೆ ಸಂಬಂಧದ ಬೆಸುಗೆ ಬೀಳಲೇ ಬೇಕಲ್ಲವೇ? ಪ್ರೀತಿಗೆ ಬಾಂಧವ್ಯ ಬೆಸುಯುವುದು ಮದುವೆ. ಅದು ಪ್ರತಿ ಹೆಣ್ಣಿನ ಜೀವನದಲ್ಲೂ ಮರೆಯಲಾಗದ ಕ್ಷಣ. ಅಂಥ ಕ್ಷಣವನ್ನು ಜೀವನದುದ್ದಕ್ಕೂ ನೆನಪಿನಲ್ಲಿ ಉಳಿವಂತೆ ಮಾಡುವ ಸಲುವಾಗಿ ಏನೆಲ್ಲಾ ತಯಾರಿ...ಮದುವೆ ಅಂದ ಕ್ಷಣ ಮೊದಲು ಬರುವ ಮಾತು ವಧುವಿನ ಉಡುಗೆ ತೊಡುಗೆಯದ್ದೇ. ಮದುವೆಯಲ್ಲಿ ಅದ್ದೂರಿ ವಸ್ತ್ರ, ಒಡವೆಗಳನ್ನು ಧರಿಸಬೇಕು ಎಂದು ಬಯಸುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚು. ಮದುವೆಯಲ್ಲಿ ತೊಡಲು ಹೆಣ್ಣು ಬಯಸುವ ಕನಸಿನ ವಸ್ತ್ರಗಳನ್ನು ಅನಾವರಣಗೊಳಿಸುವ ಸಲುವಾಗಿ ಯುಬಿ ಸಿಟಿಯಲ್ಲಿ ಫ್ಯಾಷನ್ ಶೋ ಏರ್ಪಡಿಸಲಾಗಿತ್ತು.ವಧುವಿಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿದ ಸಂಗ್ರಹವನ್ನು ಪ್ರದರ್ಶಿಸಲಾಯಿತು. ಆಕರ್ಷಕ ಕಸೂತಿ, ಕಣ್ಣುಕುಕ್ಕುವ ಬಣ್ಣ ಗಮನ ಸೆಳೆದವು. ಇವೆಲ್ಲಕ್ಕಿಂತ ಹೆಚ್ಚಾಗಿ ಶೋ ಕಳೆಗಟ್ಟಿಸಿದ್ದು ಡಿಸೈನರ್‌ಗಳ ಮನಕದಿಯುವ ವಿನ್ಯಾಸ. ಅಂದಹಾಗೆ, ಪ್ರದರ್ಶನದ ಹೆಸರು `ಜಾಗ್ವಾರ್ ಟ್ರೂಸೋಸ್ ವೀಕ್~. ಈ ಫ್ಯಾಷನ್ ಶೋ ಉದ್ದಕ್ಕೂ ವಧುವಿನ ವಸ್ತ್ರಾಭರಣಗಳದ್ದೇ ಕಾರುಬಾರು.ಯುಬಿ ಸಿಟಿ ಆವತ್ತು ಥೇಟ್ ಮದುವೆ ಮನೆಯಂತೆ ಬದಲಾಗಿತ್ತು. ಕಿಕ್ಕಿರಿದು ತುಂಬಿದ್ದ ಫ್ಯಾಷನ್ ಪ್ರಿಯರ ನಡುವೆ ನಡೆದ ಫ್ಯಾಷನ್ ಶೋ ಆರಂಭಕ್ಕೂ ಮುನ್ನ ರಷ್ಯನ್ ಜೋಡಿ ತೋರಿದ ಬ್ಯಾಲೆ ಚಮತ್ಕಾರ ಬಹುತೇಕರು ಉಸಿರು ಬಿಗಿ ಹಿಡಿಯುವಂತೆ ಮಾಡಿತು. ನಂತರ ರೂಪದರ್ಶಿಗಳ ಮೆರವಣಿಗೆ. ನವವಧುವಿನಂತೆ ಸಿಂಗಾರಗೊಂಡಿದ್ದ ರೂಪದರ್ಶಿಯರ ಚೆಲುವಿಗಿಂತಲೂ ವಸ್ತ್ರಾಭರಣಗಳೇ ಹೆಚ್ಚು ಕಣ್ಣು ಕುಕ್ಕುತ್ತಿದ್ದವು. ಈ ಸಂಗ್ರಹವನ್ನು ಕಣ್ತುಂಬಿಕೊಂಡಾಗ ಹೆಣ್ಣಿಗಿಂತ ಸೀರೆ, ಘಾಗ್ರಾ-ಚೋಲಿಯೇ ಚೆಂದ ಅನಿಸಿದ್ದು ಸುಳ್ಳಲ್ಲ.ಕಣ್ಣಿಗೆ ರಾಚುವ ಹೊಂಬಣ್ಣದ ಉಡುಗೆ ಮೇಲೆ ಕಲೆಯ ಚಿತ್ತಾರ. ಕೊರಳಿನಲ್ಲಿ ಮಿನುಗುವ ವಜ್ರದ ಹರಳುಗಳುಳ್ಳ ಮಣಿಮಾಲೆ, ವಧು ಧರಿಸುವ ಕುಪ್ಪಸದ ಮುಂಭಾಗದಲ್ಲಿ ನವಿಲುಗರಿಯ ಚಿತ್ತಾರ. ದುಪಟ್ಟಾದ ಅಂಚಿನುದ್ದಕ್ಕೂ ಎದ್ದು ಕಾಣುವ ಕುಸುರಿ ಕಲೆ. ದುಪಟ್ಟಾವನ್ನು ಹೊದ್ದಾಗ ಹಣೆ ಭಾಗಕ್ಕೆ ಸರಿ ಹೊಂದುವಂತೆ ಪೋಣಿಸಿದ್ದ ಹರಳಿನ ಬಿಲ್ಲೆಗಳು. ದಾವಣಿ ತುಂಬೆಲ್ಲಾ ಹರಡಿಕೊಂಡಿದ್ದ ಚಿತ್ತಾಕರ್ಷಕ ಹರಳಿನ ವಿನ್ಯಾಸ...ರೂಪದರ್ಶಿಯೊಬ್ಬರು ಮಿನವಾಲ ವಧುವಿನ ಸಂಗ್ರಹವನ್ನು ತೊಟ್ಟು ರ‌್ಯಾಂಪ್ ಮೇಲೆ ಮೆಲುವಾಗಿ ಹೆಜ್ಜೆ ಹಾಕುತ್ತಾ ಬಂದಾಗ ಎಲ್ಲರ ಕಣ್ಣುಗಳಲ್ಲೂ ಮೆಚ್ಚುಗೆಯ ನೋಟವಿತ್ತು.  ಇದರ ಜತೆಗೆ ಸಂಸಾರ, ಅವಿರಾಟೆ, ಕಿಮಾಯ ಕಲೆಕ್ಷನ್‌ಗಳನ್ನು ರೂಪದರ್ಶಿಗಳು ಪ್ರದರ್ಶಿಸಿದರು.ಇದೇ ಸಂದರ್ಭದಲ್ಲಿ ಜಾಗ್ವಾರ್‌ನ ಮೂರು ಹೊಸ ಮಾದರಿ ಕಾರುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಜಾಗ್ವಾರ್ ಎಕ್ಸ್‌ಕೆಆರ್, ಎಕ್ಸ್‌ಜೆ ಮತ್ತು ಎಕ್ಸ್ ಮಾಡೆಲ್ ಕಾರುಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry