ಹೀಗೆ ಮಿಂಚಿ ಹಾಗೆ ಮಾಯವಾಗಲಾರೆ

7

ಹೀಗೆ ಮಿಂಚಿ ಹಾಗೆ ಮಾಯವಾಗಲಾರೆ

Published:
Updated:
ಹೀಗೆ ಮಿಂಚಿ ಹಾಗೆ ಮಾಯವಾಗಲಾರೆ

ಕೆನ್ನೆಯ ಮೇಲೆ ಕ್ಷಣ ಕ್ಷಣಕ್ಕೆ ಮೂಡಿ ನಲಿದಾಡುವ ಗುಳಿ. ಅದರಿಂದಾಗಿಯೇ ಚೆಲುವೆಯ ಹೊಳಪು ಇನ್ನಷ್ಟು ಅಂದ. ಕಂದು ಕಣ್ಣುಗುಡ್ಡೆಗಳಿಂದ ಕಂಗಳೂ ಚೆಂದ. ಅದು ಲೆನ್ಸ್ ಅದ್ದಿಟ್ಟ ಸೊಬಗಲ್ಲ; ನಿಜದ ಹೊಳಪು.ಬೆನ್ನುದ್ದಕ್ಕೆ ಜಾರಿಬಿದ್ದ ಕೇಶಕ್ಕೆ ಸಾಗರದ ಅಲೆಯಂಥ ಫಿನಿಷಿಂಗ್ ಟಚ್. ಆಡುವ ಪ್ರತಿಯೊಂದು ಮಾತಿಗೂ ಮಂದಹಾಸದ ಸಾಂಗತ್ಯ. ಜೀನ್ಸ್ ತೊಟ್ಟರೂ ಸೈ; ಸೀರೆಯುಟ್ಟರೂ ಒಪ್ಪುವ ದೇಹ. ನೋಡಿದವರ ಮನದ ಆಳಕ್ಕೆ ಇಳಿದು ಕಚಗುಳಿ ಇಡುವ ರೂಪ!ಹೌದು; ಇವರನ್ನು ಎಲ್ಲೋ ನೋಡಿರುವ ನೆನಪು. ಎಲ್ಲಿ ಎನ್ನುವ ಪ್ರಶ್ನೆಯು ಕಾಡುವ ಹೊತ್ತಿಗೆ, `ಓ... ವಿ ಚಾನಲ್ ಹುಡುಗಿ!~ ಎನ್ನುವ ದೃಶ್ಯ ನೆನಪಿನ ಪುಟದಲ್ಲಿ ಪ್ರತ್ಯಕ್ಷ. `ವಿ~ ಚಾನಲ್‌ನ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ `ಮೈ ಬಿಗ್ ಡಿಸಿಷನ್~ನಲ್ಲಿ ಮಿಂಚಿದ್ದ ಅಂಶಿಕಾ ದಾಸ್ ಎನ್ನುವ ಉದ್ಗಾರ.ಹೌದು, ಮೇಕಪ್ ಇಲ್ಲದೆಯೇ ಕಿರುತೆರೆಯಲ್ಲಿ ಯುವಕರ ಎದೆಯಲ್ಲಿ ಮನೆಮಾಡಿದ ಮಾಡೆಲ್ ಅಂಶಿಕಾ.`ಮೈ ಬಿಗ್ ಡಿಸಿಷನ್~ನಲ್ಲಿ ಪಾಲ್ಗೊಳ್ಳುವ ಮೂಲಕ ತನ್ನ ಜೀವನದ ದೊಡ್ಡ ನಿರ್ಣಯ ಎನ್ನುವಂತೆ ಮಾಡೆಲಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಮಧ್ಯಪ್ರದೇಶದ ರೂಪಸಿಗೆ ಅವಕಾಶಗಳ ವೇದಿಕೆಯಾಗಿದ್ದು ಉದ್ಯಾನನಗರಿ. ಜಾಹೀರಾತು ನಿರ್ಮಾಪಕರು, ನಿರ್ದೇಶಕರ, ಛಾಯಾಗ್ರಾಹಕರ ಕರೆಗೆ ಓಗೊಟ್ಟು ಬಂದಿದ್ದಕ್ಕೆ ನಿರಾಸೆಯಾಗಲಿಲ್ಲ.ರ‌್ಯಾಂಪ್ ಪಟ್ಟಿಯ ಚೌಕಟ್ಟಿನಲ್ಲಿ ಉಳಿಯದ ಬೆಳದಿಂಗಳಂಥ ಈ ರೂಪಸಿಗೆ ಜಾಹೀರಾತುಗಳಲ್ಲಿ ಒಂದರ ಹಿಂದೊಂದು ಅವಕಾಶ. ಸ್ಟಿಲ್ ಕ್ಯಾಮೆರಾಕ್ಕೆ ಪ್ರಿಯವಾಗಿರುವ ಮುಖವಾದ್ದರಿಂದ ವರ್ಷಪೂರ್ತಿ ಶೂಟಿಂಗ್ ಶೆಡ್ಯೂಲ್.ಒಪ್ಪಿಕೊಂಡ ಜಾಹೀರಾತುಗಳಿಗೆ ಮುಖ ಒಪ್ಪಿಸುವ ಬಿಗುವಿನ ಕಾರ್ಯಕ್ರಮದ ನಡುವೆ ಒಂದಿಷ್ಟು ಸಿನಿಮಾ ಅವಕಾಶಗಳು ಮಿಸ್ ಮಾಡಿಕೊಂಡಿದ್ದರೂ ಅಂಶಿಕಾ `ಇನ್ನಷ್ಟು ಅವಕಾಶಗಳು ಬರುತ್ತವೆ~ ಎನ್ನುವ ವಿಶ್ವಾಸ ಬೆಳೆಸಿಕೊಂಡಿರುವ ರೂಪದರ್ಶಿ. ಸ್ಟೇಜ್ ಮೇಲೆ ಅಭಿನಯಿಸಿದ ಅನುಭವದ ಬಲ ಇರುವ ಕಾರಣ ಸಿನಿಮಾಗಳಲ್ಲಿ ಒಂದಿಷ್ಟು ಒಳ್ಳೆಯ ಪಾತ್ರ ಮಾಡುವ ಆಸೆ.ಆದರೆ ಮನದಲ್ಲೊಂದು ಗಟ್ಟಿ ನಿರ್ಧಾರ ಮಾಡಿದ್ದಾಗಿದೆ. `ಹೀಗೆ ಮಿಂಚಿ ಹಾಗೆ ಮಾಯವಾಗಲಾರೆ~ ಎಂದು. ಹೀಗೆ ದಿಟ್ಟ ಹೆಜ್ಜೆಯಿಟ್ಟು ಗ್ಲಾಮರ್ ಜಗತ್ತಿನಲ್ಲಿ ಗುರುತು ಮೂಡಿಸುತ್ತಿರುವ ಅಂಶಿಕಾ ಅವರು ತಮ್ಮ ಅನುಭವ, ಆಸೆ, ನಿರೀಕ್ಷೆಗಳ ಕುರಿತು ಏನನ್ನುತ್ತಾರೆ? ಇಲ್ಲಿವೆ ಉತ್ತರಗಳು.ರೂಪದರ್ಶಿ ಆಗಿದ್ದು?

ಆಕಸ್ಮಿಕವಂತೂ ಅಲ್ಲ. ಹದಿನೈದು ವರ್ಷದವಳಿದ್ದಾಗ ಕಂಡ ಕನಸಿದು. ಕಳೆದ ವರ್ಷ `ವಿ~ ಚಾನಲ್‌ನ ರಿಯಾಲಿಟಿ ಶೋ ಮೂಲಕ ಎಂಟ್ರಿ. ಈಗ ನನಗೆ ಇಪ್ಪತ್ತು ವರ್ಷ. ನನಗೆ ಅದೃಷ್ಟದ ಬಲ ಇದೆ ಎಂದುಕೊಂಡಿದ್ದೇನೆ.ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಹಾಗೂ ಪ್ರಚಾರ ಸಿಕ್ಕಿತು. ಆನಂತರ ಅನೇಕ ಜಾಹೀರಾತು ಕಂಪೆನಿಗಳಿಂದ ಸಾಕಷ್ಟು ಕಾಲ್ ಬಂದವು. ಹೆಚ್ಚಿನವು ಪ್ರಿಂಟ್ ಹಾಗೂ ಕೆಟಲಾಗ್ ಜಾಹೀರಾತುಗಳು. ಕಳೆದ ಹದಿಮೂರು ತಿಂಗಳಿಂದ ನಿರಂತರ ಕೆಲಸ. ಬಿಡುವು ಸಿಕ್ಕರೆ ನಾಟಕಗಳಲ್ಲಿ ಅಭಿನಯ.ಆಸಕ್ತಿಯ ಕ್ಷೇತ್ರ?

ಮಾಡೆಲಿಂಗ್‌ನಲ್ಲಿ ನಾನು ಸ್ವಲ್ಪ ಶಿಸ್ತು ಪಾಲಿಸುತ್ತೇನೆ. ಯಾವ್ಯಾವುದೋ ಪ್ರಾಡಕ್ಟ್‌ಗಳಿಗಾಗಿ ಮುಖ ತೋರಿಸಲು ಬಯಸುವುದಿಲ್ಲ. ಮುಖ್ಯವಾಗಿ ಮೈ ಮುಚ್ಚಿಕೊಂಡು ಚೆಂದವಾಗಿ ಕಾಣಿಸಬೇಕು ಎನ್ನುವುದು ನನ್ನ ತತ್ವ. ಅದನ್ನು ಈವರೆಗೆ ಕಟ್ಟುನಿಟ್ಟಿನಿಂದ ಪಾಲಿಸಿಕೊಂಡು ಬಂದಿದ್ದೇನೆ. ಸ್ವಲ್ಪ ಮಾಡ್ ಆಗಿರುವ ಡ್ರೆಸ್ ಓಕೆ. ಆದರೆ ನೋ ಬಿಕಿನಿ!ಗ್ಲಾಮರ್ ಜಗತ್ತಿನಲ್ಲಿ ಭವಿಷ್ಯ?

ಸುಲಭವಾಗಿ ಕೈಚೆಲ್ಲಿ ನಿಲ್ಲುವುದಿಲ್ಲ. ಜೊತೆಗೆ ಆತುರ ಕೂಡ ಮಾಡುವುದಿಲ್ಲ. ಆದ್ದರಿಂದ ಉತ್ತಮ ಭವಿಷ್ಯದ ಕಡೆಗೆ ನಿಧಾನ ಹೆಜ್ಜೆ. ಹೀಗೆ ಮಿಂಚಿ ಹಾಗೆ ಮಾಯವಾಗಲಾರೆ. ಲಾಂಗ್‌ಟರ್ಮ್ ಯೋಚನೆಗಳು ಯೋಜನೆಗಳಾಗಿವೆ. ಅವುಗಳನ್ನು ಕಾರ್ಯರೂಪಕ್ಕೆ ತರಬೇಕು. ಸಿನಿಮಾದಲ್ಲಿ ಅಭಿನಯಿಸುವುದು ಇಷ್ಟ. ಆದರೆ ಒಳ್ಳೆಯ ಕ್ಯಾರೆಕ್ಟರ್ ರೋಲ್ ಸಿಗಬೇಕು. ಐಟಂ ಡಾನ್ಸ್ ಅವಕಾಶಗಳನ್ನು ನಾನೇ ಕೈಬಿಟ್ಟಿದ್ದೇನೆ.ಜೀವನ ತತ್ವ?

ನನ್ನ ಪಾಲಿಗೆ ದೇವರು ಏನು ಬರೆದಿದ್ದಾನೋ ಅದು ಬಂದೇ ಬರುತ್ತದೆ. ಏನು ಆಗುತ್ತದೋ ಅದು ಒಳಿತಿಗಾಗಿ ಎಂದು ಮುಂದೆ ಸಾಗುತ್ತೇನೆ. ಕೆಲವರು ಸಿಕ್ಕ ಅವಕಾಶ ಒಪ್ಪಿಕೋ ಎನ್ನುತ್ತಾರೆ. ಆದರೆ ನಾನು ಆತುರದಲ್ಲಿ ಎಲ್ಲವನ್ನೂ ಉಡಿಯಲ್ಲಿ ತುಂಬಿಕೊಳ್ಳುವ ಹುಡುಗಿ ಅಲ್ಲ.ಮನೆಯಲ್ಲಿ ಪ್ರೋತ್ಸಾಹ?

ಖಂಡಿತವಾಗಿಯೂ ಇದೆ. ಅಪ್ಪ-ಅಮ್ಮ, ನನ್ನ ಇಬ್ಬರು ಸಹೋದರರು ಹಾಗೂ ಸಹೋದರಿ ಬೆಂಬಲಿಸುತ್ತಾರೆ. ಅವರ ಸಲಹೆ ಪಡೆದು ಪ್ರತಿಯೊಂದು ಪ್ರಾಜೆಕ್ಟ್ ಒಪ್ಪಿಕೊಳ್ಳುತ್ತಾ ಬಂದಿದ್ದೇನೆ.ಪ್ರೇರಣೆ ಯಾರು?

ಮಾಧುರಿ ದೀಕ್ಷಿತ್. ಚಿಕ್ಕವಳಿದ್ದಾಗಿಂದ ಅವರು ಅಭಿನಯಿಸಿದ ಸಿನಿಮಾಗಳ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದೆ. ದಕ್ಷಿಣದ ಕೆಲವು ನಟರ ಪ್ರೌಢ ಅಭಿನಯ ಇಷ್ಟವಾಗುತ್ತದೆ. ಆದ್ದರಿಂದ ಅವಕಾಶ ಸಿಕ್ಕರೆ ಅಂಥ ಉತ್ತಮ ನಟರೊಂದಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಆಸೆಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry