ಹೀಗೆ ಸುಮ್ಮನೆ...

7

ಹೀಗೆ ಸುಮ್ಮನೆ...

Published:
Updated:

ನೀನೆಂದರೆ ಹೀಗೆ ಕಣೋ. ನನ್ನೊಳಗೆ  ಕೋಟಿ ಸಾಲ್ದೀಪಗಳ ಬೆಳಕು ಚೆಲ್ಲಿದ ಹಾಗೆ... ಮನದಾಳದ ದನಿಗಳು ಸದ್ದಿಲ್ಲದೆ ಮಧುರ ಹಾಡುವ ಹಾಗೆ... ಹೃದಯಾದಾಳದ ಭಾವಗಳು ಮಾತಿಲ್ಲದೆ ಮುದ್ದಾದ ಕವಿತೆಯಾಗುವ ಹಾಗೆ... ನೀನೆಂದರೆ ನನಗೆ ಬೆಟ್ಟದಷ್ಟು ಇಷ್ಟ. ನೀನು ಜೊತೆಯಿರಬೇಕೆಂಬ ಹಂಬಲಗಳ ಮೊಂಡು ಹಠ. ನಿನ್ನ ನೆನಪುಗಳಿಗೆ ಸಪ್ತವರ್ಣದ ಕಾಮನಬಿಲ್ಲಿನ ಸೊಬಗು. ನನ್ನೊಳಗೆ ಮಾಸದ ಉತ್ಸಾಹ ಚಿಮ್ಮಿಸುವ ಯಾವುದೋ ಶಕ್ತಿಯ ಮೆರುಗು.

ನೀನೆಂದರೆ ಹೀಗೆ ಕಣೋ.. ಕಾರಣವಿಲ್ಲದೆ ಕಣ್ಣಂಚು ಒದ್ದೆಯಾಗುತ್ತದೆ... ಮೆತ್ತಗೆ ತುಟಿಯಲ್ಲಿ ನಗುವೊಂದು ಮುಗುಳಾಗುತ್ತದೆ. ಏಕೆ? ಏನು? ಹೇಗೆ? ಎಂಬ ನಿನ್ನ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಕೊಡದೆ ನಾ ಮೌನದ ಮರೆಗೆ ಸರಿಯುತ್ತೇನೆ... ನಿನ್ನ ಆ ಮುದ್ದು-ಪೆದ್ದು ಪ್ರಶ್ನೆಗಳಿಗೆಲ್ಲ ಸಿಹಿ ಮುತ್ತಿಕ್ಕಿ ಹಾಗೆಯೇ ನನ್ನೆದೆ ಚಿಪ್ಪಿನೊಳಗೆ ಅಡಗಿಸಿಕೊಳ್ಳುತ್ತೇನೆ. ಎಂದೋ ಒಂದು ದಿನ ಅವು ಮುತ್ತುಗಳಾಗುತ್ತವೆ. ಬೆಚ್ಚಗೆ ಅಪ್ಪಿಕೊಳ್ಳುತ್ತೇನೆ.

ಲೋಕವೆಂದರೆ ಹೀಗೆ ಕಣೋ... ಸುತ್ತಲೂ ನೂರಾರು ಜನ, ನೂರಾರು ಮಾತು, ಮಾತಿನೊಳಗೆ ನೂರಾರು ಭಾವ, ಭಾವದೊಳಗೆ ನೂರಾರು ತುಡಿತ-ಮಿಡಿತ. ನನ್ನ-ನಿನ್ನೊಳಗಿನ ಈ ಮಧುರ ಬಾಂಧವ್ಯಕ್ಕೆ ಹೆಸರಿನ ನಂಟೇಕೆ? ಸ್ನೇಹ, ಪ್ರೀತಿ, ಮಮತೆ, ಕಾಳಜಿ, ಅಕ್ಕರೆ, ವಾತ್ಸಲ್ಯ ಭಾವಗಳು ಬೆರೆತ ಈ ಭಾವಬಂಧವು ಬಿಡಿಸದ ಗಂಟಾಗಿ ಬೆಸೆದುಕೊಳ್ಳಲಿ... ಈ ಒಡನಾಟದ ಬಾಂಧವ್ಯವು ಹರಿಯುತ್ತಿರಲಿ ನಮ್ಮೊಳಗೆ ಬತ್ತದ ತರಂಗಿಣಿಯಂತೆ. ಸಾಗುತ್ತಿರಲಿ ಈ ಭಾವ ಪಯಣ ಚೆಂದದ ಮೆರವಣಿಗೆಯಂತೆ...

ಮರೆತುಬಿಡು ಗೆಳೆಯಾ ಈ ಲೋಕದ ನಿಂದೆ

ನಮಗೇಕೆ ಈ ಜನರ ಕುಹಕ ನುಡಿಗಳ ಚಿಂತೆ?

ಇಚ್ಚೆಯಿಂದ ಮೆಚ್ಚಿಕೊಂಡ ಈ ಜೀವನ ನಡೆಯುತ್ತಿರಲಿ ಹೀಗೆ ಮೆಲ್ಲನೆ....

“ಇರಲಿ ಗೆಳೆಯ ಈ ಅನುಬಂಧ ಹೀಗೆ ಸುಮ್ಮನೆ”

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry