ಮಂಗಳವಾರ, ಏಪ್ರಿಲ್ 20, 2021
32 °C

ಹೀಗೊಂದು ಸಾಂಸ್ಕೃತಿಕ ಉತ್ಸವದಲ್ಲಿ ಪಕ್ಷದ ತುತ್ತೂರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಚೆಗೆ ಮೂರು ದಿನಗಳ ‘ಶಿಕಾರಿಪುರ ಸಾಂಸ್ಕೃತಿಕ ಉತ್ಸವ’ ಅದ್ದೂರಿಯಾಗಿ ನಡೆಯಿತು.ಶಿಕಾರಿಪುರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ  ಸ್ವಂತ ಕ್ಷೇತ್ರ. ಈ ಉತ್ಸವಕ್ಕಾಗಿ ಮೂರು ದಿವಸವೂ ಅವರೇ ಖುದ್ದು ಹಾಜರಿದ್ದರು.  ಕಲಾವಿದರ, ಸಾರ್ವಜನಿಕರ ಉತ್ಸವವಾಗಬೇಕಿದ್ದ ಈ ‘ಸರ್ಕಾರಿ ಉತ್ಸವ’ ಆಡಳಿತ ಪಕ್ಷದ ತುತ್ತೂರಿಯ ವೇದಿಕೆಯಾಗಿ, ಯಡಿಯೂರಪ್ಪ ಕುಟುಂಬದ ಕಾರ್ಯಕ್ರಮವಾಗಿ ಮಾರ್ಪಾಡಾಗಿದ್ದು ಈಗ ಜಿಲ್ಲೆಯಲ್ಲಿಯೇ ಚರ್ಚೆಗೆ ಗ್ರಾಸವಾಗಿದೆ.ಶಿಕಾರಿಪುರದ ಹುಚ್ಚುರಾಯಸ್ವಾಮಿ ಜಾತ್ರಾ ಮಹೋತ್ಸದ ಅಂಗವಾಗಿ ಜೋಡಣೆಯಾಗಿದ್ದು ಈ ಸಾಂಸ್ಕೃತಿಕ ಉತ್ಸವ. ಜಾತ್ರಾ ಮಹೋತ್ಸವ ಕೇವಲ ನಾಲ್ಕೈದು ದಿವಸ ಇರುವಾಗ ಮುಖ್ಯಮಂತ್ರಿಗಳ ಆಣತಿ ಮೇರೆಗೆ ತರಾತುರಿಯಲ್ಲೇ ಆಯೋಜಿಸಲಾಗಿತ್ತು. ಆದರೆ, ಉತ್ಸವದಲ್ಲಿ ಸ್ಥಳೀಯ ಸಾಹಿತ್ಯ, ಸಂಸ್ಕೃತಿಯ ಸಂಘಸಂಸ್ಥೆಗಳನ್ನು, ಸಾರ್ವಜನಿಕರನ್ನು, ಕೊನೇ ಪಕ್ಷ ಜಾತ್ರಾ ಸಮಿತಿಯವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಆಶ್ಚರ್ಯ ತಂದಿದೆ. ಉತ್ಸವದ ಉದ್ದಕ್ಕೂ ಮಿಂಚಿದವರು ಅಧಿಕಾರಿಗಳು ಮತ್ತು ಯಡಿಯೂರಪ್ಪ ಕುಟುಂಬದ ಸದಸ್ಯರು.ಮೂರು ದಿವಸದ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಾಲಾವಕಾಶ ಸಿಕ್ಕಿದ್ದು ಅತ್ಯಲ್ಪ. ಉದ್ಘಾಟನಾ ದಿನದಂದೇ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನೂ ಒಟ್ಟಿಗೆ ಇಟ್ಟುಕೊಂಡಿದ್ದರಿಂದ ಬಹಳ ಸಮಯ ವೇದಿಕೆ ಕಾರ್ಯಕ್ರಮಕ್ಕೆ ಹಿಡಿಯಿತು.  ಪ್ರಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ದೀರ್ಘಾವಧಿ ಭಾಷಣ ಮಾಡಿದರು.ಪಾಲ್ಗೊಂಡಿದ್ದ ಮೂವರು ಸಚಿವರು ಚುಟುಕಾಗಿ ಮಾತನಾಡಿದರೂ ಮುಖ್ಯಮಂತ್ರಿಗಳನ್ನು ಹೊಗಳಲು ಬಹು ಸಮಯ ಮೀಸಲಿಟ್ಟರು. ಇದ್ದುದರಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಸಮಯಪ್ರಜ್ಞೆ ಮೆರೆದರು. ಒಟ್ಟಾರೆ ಉತ್ಸವಕ್ಕೆ ಸೇರಿದ್ದ ಸಾವಿರಾರು ಸಂಖ್ಯೆಯ ಜನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಪೂರ್ಣ ಸವಿಯುವ ಸೌಭಾಗ್ಯ ಸಿಗಲಿಲ್ಲ.ಎರಡನೇ ದಿವಸ ಅಧಿಕೃತ ವೇದಿಕೆ ಕಾರ್ಯಕ್ರಮ ಇಲ್ಲದಿದ್ದರೂ ಸಂಸದರೊಬ್ಬರೇ ‘ಅಭಿವೃದ್ಧಿ’ ಬಗ್ಗೆ ಭರ್ಜರಿ ಭಾಷಣವನ್ನೇ ಮಾಡಿದರು. ಸಂಸದರ ಪತ್ನಿ, ಮುಖ್ಯಮಂತ್ರಿಗಳ ಪುತ್ರಿ ಎಸ್.ವೈ. ಅರುಣಾದೇವಿ ವೇದಿಕೆ ಹತ್ತಿ ಕಲಾವಿದರಿಗೆ ಶಾಲು ಹೊದಿಸಿ, ಜನರತ್ತ ಕೈ ಬೀಸಿದರು.

ಸಮಾರೋಪ ದಿನದಂದು ಮತ್ತೆ ಉದ್ಘಾಟನಾ ದಿನದ ಕಾರ್ಯಕ್ರಮಗಳ ಪುನರಾವರ್ತನೆ. ಅಧಿಕಾರಿಗಳು, ಉತ್ಸವದ ಯಶಸ್ಸಿಗೆ ಮುಖ್ಯಮಂತ್ರಿ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರನ್ನು ವೇದಿಕೆಯಲ್ಲಿ ಸನ್ಮಾನಿಸಿದರು. ಇದಕ್ಕೆ ಪ್ರತಿಯಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಮುಖ್ಯಮಂತ್ರಿ ಹಾಗೂ ಸಂಸದರಿಂದ ಸನ್ಮಾನಿಸಿಕೊಂಡರು.

ಸಾಲದ್ದಕ್ಕೆ ಸಾಲುಸಾಲಾಗಿ ಅಧಿಕಾರಿಗಳು, ಜತೆಗೊಬ್ಬ ಪತ್ರಕರ್ತ ಕೂಡ ಮುಖ್ಯಮಂತ್ರಿ ಹಾಗೂ ಸಂಸದರ ಕಾಲಿಗೆ ಬಿದ್ದು ಧನ್ಯತೆಯನ್ನು ಅನುಭವಿಸಿದರು.ಇಡೀ ಉತ್ಸವದಲ್ಲಿ ವಿರೋಧ ಪಕ್ಷಗಳ ಪ್ರತಿನಿಧಿಗಳಿಗಾಗಲೀ, ಸಾಂಸ್ಕೃತಿಕ ಕ್ಷೇತ್ರದ ಸಾಧಕರಿಗಾಗಲಿ ಆಹ್ವಾನ ಇರಲಿಲ್ಲ. ಉತ್ಸವದಲ್ಲಿ ಮುಖ್ಯರಾಗಬೇಕಿದ್ದ ಕಲಾವಿದರಿಗೂ ಇಲ್ಲಿ ಸೂಕ್ತ ಗೌರವ ಮನ್ನಣೆ ಸಿಗಲಿಲ್ಲ. ಉತ್ಸವದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದವರು ನೆರೆದಿದ್ದ ಜನರನ್ನು ಪಕ್ಷದ ಕಾರ್ಯಕರ್ತ ಬಂಧುಗಳೆಂದು ಸಂಬೋಧಿಸಿದರೆ ಹೊರತು, ಕಲಾರಸಿಕರನ್ನಾಗಿ ಕಾಣಲಿಲ್ಲ.

ಉತ್ಸವದಲ್ಲಿ ಯಡಿಯೂರಪ್ಪ ಕುಟುಂಬದ ಮೇಲುಗೈ ಇದೆ ಎಂಬ ಕಾರಣಕ್ಕೋ ಏನೋ ಊರಿನಲ್ಲಿದ್ದರೂ ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಶಾಸಕ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆದ ಕೆ.ಎಸ್. ಈಶ್ವರಪ್ಪ ಉತ್ಸವಕ್ಕೆ ಬರುವ ಮನಸ್ಸು ಮಾಡಲಿಲ್ಲ.

ಇಡೀ ಉತ್ಸವಕ್ಕೆ 1ಕೋಟಿ ರೂಪಾಯಿಗೂ ಹೆಚ್ಚಿನ ಹಣ ವ್ಯಯವಾಗಿದೆ ಎನ್ನಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರ ಸಂಭಾವನೆ 15ಲಕ್ಷ ರೂಪಾಯಿ, ಉಳಿದ ಖರ್ಚಿಗೆ 10ಲಕ್ಷ ರೂಪಾಯಿ ವೆಚ್ಚ ಮಾಡಿದೆ. ಆದರೆ, ಉಳಿದ ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಈಗ ಎದ್ದಿದೆ. ಉತ್ಸವಕ್ಕಾಗಿ ಅಧಿಕಾರಿಗಳು ‘ತಮ್ಮ ಕೈ’ಯಿಂದ ಹಣ ನೀಡಿದ್ದಾರೆಂಬ ಮಾತುಗಳೂ ಕೇಳಿಬಂದಿವೆ.ಲೋಕೋಪಯೋಗಿ ಇಲಾಖೆ 10ಲಕ್ಷ ರೂಪಾಯಿ, ತೋಟಗಾರಿಕೆ ಇಲಾಖೆ 25 ಸಾವಿರ ರೂಪಾಯಿ ಹೀಗೆ ವಿವಿಧ ಇಲಾಖೆಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಉತ್ಸವಕ್ಕೆ ದೇಣಿಗೆ ನೀಡಿವೆ. ಹೀಗಾಗಿಯೇ ಉತ್ಸವದ ‘ಯಶಸ್ಸಿ’ಗೆ ದುಡಿದ ಅಧಿಕಾರಿಗಳನ್ನು ಯಡಿಯೂರಪ್ಪ-ರಾಘವೇಂದ್ರರು ಸನ್ಮಾನಿಸಿದ್ದು. ತಾವು ನೀಡಿದ ದೇಣಿಗೆಗೆ ತಮ್ಮನ್ನು ಸನ್ಮಾನಿಸಲಾಗಿದೆ ಎಂದು ತಿಳಿದ ಅಧಿಕಾರಿಗಳು, ಇಬ್ಬರ ಕಾಲಿಗೂ ಪೈಪೋಟಿಯಲ್ಲಿ ಬಿದ್ದು ಪುಳಕಿತರಾಗಿದ್ದಾರೆ.ಹೀಗೆ ಸನ್ಮಾನಗೊಂಡ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ‘ಇದು ಆರಂಭ. ಇಂತಹ ಹಲವು ಉತ್ಸವಗಳನ್ನು ಇಲ್ಲಿ ನೀವು ಮಾಡಬೇಕಾಗಿದೆ. ಹಾಗಾಗಿ, ನಿಮಗೆ ಈ ಸನ್ಮಾನ’ ಎಂದು ಸನ್ಮಾನದ ಹಿಂದಿನ ಉದ್ದೇಶವನ್ನು ಅಧಿಕಾರಿಗಳಿಗೆ ಸೂಚ್ಯವಾಗಿ ಹೇಳಿದ್ದಾರೆ.ವೇದಿಕೆಯಲ್ಲಿ ಹೀಗೆ ಸನ್ಮಾನಗೊಂಡ ಹಲವು ಅಧಿಕಾರಿಗಳಿಗೆ ಉತ್ಸವದ ಉದ್ದಕ್ಕೂ ಜನಪ್ರತಿನಿಧಿಗಳಿಂದಷ್ಟೇ ಅಲ್ಲ, ಅವರ ಆಪ್ತ ಸಹಾಯಕರಿಂದಲೂ ಬೈಗುಳ, ಹೀಯಾಳಿಕೆ ಉಚಿತವಾಗಿ ಸಿಕ್ಕಿದೆ.‘ಶಿಕಾರಿಪುರ ಸಾಂಸ್ಕೃತಿಕ ಉತ್ಸವ’ ಈ ವರ್ಷ ಮಾತ್ರ ಎಂದು ಈ ಮೊದಲು ಮುಖ್ಯಮಂತ್ರಿ ಘೋಷಣೆ ಮಾಡಿದ್ದರು. ಆದರೆ, ಮುಖ್ಯಮಂತ್ರಿಗಳನ್ನು ಸಂಪ್ರೀತಗೊಳಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ, ಇನ್ನು ಮುಂದೆ ಪ್ರತಿ ವರ್ಷವೂ ಶಿಕಾರಿಪುರ ಸಾಂಸ್ಕೃತಿಕ ಉತ್ಸವವನ್ನು ವೈಭವದಿಂದ ಆಯೋಜಿಸಲಾಗುವುದು, ಈ ಸಂಬಂಧ ಸರ್ಕಾರದ ಕ್ರಿಯಾ ಯೋಜನೆಯಲ್ಲೇ ಸೇರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು.ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾ ಉತ್ಸವ ನಡೆಸಬೇಕೆಂಬ ಬೇಡಿಕೆ ಬಹುವರ್ಷಗಳಿಂದ ಇದೆ. ಆದರೆ, ಈ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ!

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.