ಹೀಗೊಬ್ಬ ಕಾಯಕ ಯೋಗಿಯ ಕಥೆ!

7

ಹೀಗೊಬ್ಬ ಕಾಯಕ ಯೋಗಿಯ ಕಥೆ!

Published:
Updated:

ಶನಿವಾರಸಂತೆ: ಆತ ಮೈಸೂರಿನ ಒಬ್ಬ ಪೈಂಟರ್. ವೃತ್ತಿ ಪೇಂಟರ್ ಆದರೂ, ದೇಶಕ್ಕಾಗಿ, ಸಮಾಜಕ್ಕಾಗಿ ಅಳಿಲು ಸೇವೆ ಮಾಡುತ್ತಿರುವ ಕಾಯಕಯೋಗಿ!ಡಿ. ರಂಗಸ್ವಾಮಿ ಎಂಬಾತ ತಿಂಗಳಲ್ಲಿ 24 ದಿನಗಳು ಸ್ವಂತ ವೃತ್ತಿಯಲ್ಲಿ ತೊಡಗಿಕೊಂಡರೇ ಉಳಿದ 6 ದಿನಗಳಲ್ಲಿ ಕರ್ನಾಟಕದಾದ್ಯಂತ ಶಾಲಾ- ಕಾಲೇಜುಗಳಿಗೆ ಭೇಟಿ ನೀಡಿ ತರಗತಿಯ ಬ್ಲಾಕ್ ಬೋರ್ಡ್‌ಗಳಿಗೆ ಉಚಿತವಾಗಿ ಕಪ್ಪು ಪೈಂಟ್ ಮಾಡಿಕೊಡುತ್ತಾನೆ. ಈಚೆಗೆ ಶನಿವಾರಸಂತೆಗೆ ಬಂದಿರುವ ಆತ ಭಾರತಿ ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜುಗಳ ಬ್ಲಾಕ್ ಬೋರ್ಡ್‌ಗಳಿಗೆ ಉಚಿತವಾಗಿ ಕಪ್ಪು ಪೈಂಟ್ ಹಚ್ಚಿಕೊಟ್ಟು ಸೇವೆ ಮೆರೆದಿದ್ದಾನೆ.ಓದಿದ್ದು, 7ನೇ ತರಗತಿವರೆಗೆ. ಸುಮಾರು 40 ವರ್ಷ ವಯಸ್ಸಿನ ಆತ ಜೀವನ ನಿರ್ವಹಣೆಗಾಗಿ ಆರಿಸಿಕೊಂಡ ಉದ್ಯೋಗ ಗೋಡೆಗೆ ಪೈಂಟ್ ಮಾಡುವುದು.ಒಮ್ಮೆ ಕೊಡಗಿನ ಗೋಣಿಕೊಪ್ಪದಲ್ಲಿ ಪ್ರಶಾಂತಿ ನಿಲಯದಲ್ಲಿ ಪೈಟಿಂಗ್ ಮಾಡಿಕೊಡುತ್ತಿದ್ದ ಸಂದರ್ಭ ಧ್ವಜಸ್ಥಂಭದ ಕೆಳಗೆ ಕುಳಿತಿದ್ದಾಗ ದೇಶಕ್ಕಾಗಿ ತಾನೇನಾದರೂ ಅಳಿಲುಸೇವೆ ಸಲ್ಲಿಸಬೇಕು ಎಂಬ ಆಲೋಚನೆ ಮೂಡಿತು. ಆಗ ತೆಗೆದುಕೊಂಡ ನಿರ್ಧಾರವೇ ವಿದ್ಯಾಸಂಸ್ಥೆಗಳ ಬ್ಲಾಕ್ ಬೋರ್ಡ್‌ಗಳಿಗೆ ಉಚಿತವಾಗಿ ಕಪ್ಪುಬಣ್ಣ ಹಚ್ಚುವ ಕಾಯಕ.15 ವರ್ಷಗಳಿಂದ ನಾಡಿನಾದ್ಯಂತ ನಿರಂತರವಾಗಿ ಈ ಅಳಿಲು ಸೇವೆ ಸಲ್ಲಿಸುತ್ತಿರುವ ರಂಗಸ್ವಾಮಿ, ಶಕ್ತಿ ಇರುವತನಕ ಈ ಸೇವೆ ನಿಲ್ಲದು ಎನ್ನುತ್ತಾನೆ.ರಂಗಸ್ವಾಮಿಯ ಅಳಿಲುಸೇವೆ ಉಚಿತವಾದರೂ ವಿದ್ಯಾಸಂಸ್ಥೆಗಳಲ್ಲಿ ತರಗತಿಗಳಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಶಿಕ್ಷಕರು ಪ್ರೀತಿಯಿಂದ ಕೊಡುವ ಹಣದಿಂದ  ಪೈಂಟ್ ಕೊಂಡು ಮತ್ತೊಂದು ವಿದ್ಯಾಸಂಸ್ಥೆಯ ತರಗತಿಗಳ ಬ್ಲಾಕ್ ಬೋರ್ಡಿಗೆ ಹಚ್ಚಲು ಬಣ್ಣ ಖರೀದಿಸುತ್ತಾನೆ.ಪೈಂಟ್ ಮಾಡಿದ ಬಳಿಕ ರಂಗಸ್ವಾಮಿ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಮನೋರಂಜನೆಯನ್ನೂ ನೀಡುತ್ತಾನೆ. ಈತ ಉತ್ತಮ ಹಾಡುಗಾರನಾಗಿದ್ದು, ಮಿಮಿಕ್ರಿ ಮಾಡುವುದರಲ್ಲೂ ಎತ್ತಿದ ಕೈ.ಜೀವನದಲ್ಲಿ ತಾಯಿ, ಗುರು ಹಾಗೂ ಭಗವಂತನ ಪ್ರೇಮಕ್ಕೆ ಬೆಲೆ ಕಟ್ಟಲಾಗದು. ವಿದ್ಯಾರ್ಥಿಗಳು ಗುರುಗಳೊಂದಿಗೆ ಒಳ್ಳೆಯ ನಡತೆ ತೋರಬೇಕು. ದೇಶಕ್ಕಾಗಿ ನಾವೇನಾದರೂ ಮಾಡಬೇಕು ಎಂಬ ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂಬ ಸಂದೇಶವನ್ನೂ ವಿದ್ಯಾಥಿಗಳಿಗೆ ತಲುಪಿಸುತ್ತಾನೆ ರಂಗಸ್ವಾಮಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry