ಸೋಮವಾರ, ಮೇ 10, 2021
21 °C

ಹೀಚುಗಳನ್ನು ಚಿವುಟುವುದೇ ಸಮಸ್ಯೆಗೆ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಪಕ್ಷದೊಳಗಿರುವ ಕೆಲವು `ಹೀಚು~ಗಳಿಂದ ರಾಜ್ಯ ಬಿಜೆಪಿಯಲ್ಲಿ ಗೊಂದಲ ಉಂಟಾಗಿದೆ. ಈ ಹೀಚುಗಳನ್ನು ಕಿತ್ತು ಹಾಕಿದರೆ ಸಮಸ್ಯೆ ಬಗೆಹರಿಯುತ್ತದೆ~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದರು.ವಿಧಾನಸೌಧದಲ್ಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಬುಧವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, `ಅನೇಕ ಹಿರಿಯರು ಬಿತ್ತಿದ ಬೀಜ ಈಗ ಹೆಮ್ಮರವಾಗಿ ಬೆಳೆದಿದೆ. ಫಲ ಕೊಡುವ ಆರಂಭದಲ್ಲಿ ಕೆಲವು ಹೀಚು ಕಾಯಿಗಳನ್ನೂ (ಪ್ರಯೋಜನಕ್ಕೆ ಬಾರದ) ಬಿಡುವುದು ಸಾಮಾನ್ಯ. ಬಿಜೆಪಿ ಎಂಬ ಹೆಮ್ಮರದಲ್ಲೂ ಅನೇಕ ಹೀಚುಗಳಿವೆ~ ಎಂದು ಭಿನ್ನಮತೀಯ ಚಟುವಟಿಕೆ ನಡೆಸುತ್ತಿರುವವರ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದರು.ನಿರ್ದಿಷ್ಟವಾಗಿ ಯಾರನ್ನು `ಹೀಚು~ ಎಂದು ಗುರುತಿಸುತ್ತಿದ್ದೀರಿ? ಎಂಬ ಪ್ರಶ್ನೆಗೆ `ಅನೇಕರು ಇದ್ದಾರೆ. ಯಾರ ಬಗ್ಗೆಯೂ ವ್ಯಕ್ತಿಗತವಾಗಿ ನಾನು ಮಾತನಾಡುವುದಿಲ್ಲ~ ಎಂದರು. `ಹೀಚುಗಳನ್ನು ಕಿತ್ತು ಹಾಕುವವರು ಯಾರು~ ಎಂಬ ಮರುಪ್ರಶ್ನೆಗೆ, `ಹೀಚುಗಳನ್ನು ಯಾರೂ ಕಿತ್ತು ಹಾಕೋದು ಬೇಡ. ಸಾಮಾನ್ಯವಾಗಿ ಅವು ತಾವಾಗಿಯೇ ಬಿದ್ದು ಹೋಗುತ್ತವೆ. ಬಿಜೆಪಿಯಲ್ಲೂ ಹಾಗೆಯೇ ಆಗುತ್ತದೆ~ ಎಂದು ಈಶ್ವರಪ್ಪ ಉತ್ತರಿಸಿದರು.ಶಾಸಕರಲ್ಲಿ ಗೊಂದಲವಿಲ್ಲ:`ಪಕ್ಷದ 120 ಶಾಸಕರೂ ತಮ್ಮ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳ ಬಗ್ಗೆ ಶಾಸಕರಲ್ಲಿ ಗೊಂದಲವಿಲ್ಲ. ನಾಯಕತ್ವದಲ್ಲೇ ಸ್ವಲ್ಪ ಗೊಂದಲವಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ನಡೆದಂತೆ ಈಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಅವಧಿಯಲ್ಲೂ ಅಭಿವೃದ್ಧಿ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತಿವೆ~ ಎಂದರು.ಬಿಜೆಪಿ ಸರ್ಕಾರ ಯಶಸ್ವಿಯಾಗಿ ತನ್ನ ಅವಧಿಯನ್ನು ಪೂರ್ಣಗೊಳಿಸುತ್ತದೆ. ಅದನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಬ್ರಹ್ಮನೇ ಬಂದರೂ ಬಿಜೆಪಿಯನ್ನು ಒಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತು ಜನತಾ ಪರಿವಾರ ಹಲವು ಬಾರಿ ಹೋಳಾಗಿವೆ. ಆದರೆ, ಬಿಜೆಪಿ ಎಂದೂ ಇಬ್ಭಾಗ ಆಗಿಲ್ಲ. ಆಗುವುದೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.`ಅವರಿಂದಲೇ ನಾಯಕನಾದೆ~: `ಸದಾನಂದ ಗೌಡ ಮತ್ತು ಈಶ್ವರಪ್ಪ ಬೆನ್ನಿಗೆ ಚೂರಿ ಹಾಕಿದರು~ ಎಂದು ಯಡಿಯೂರಪ್ಪ ಆರೋಪ ಮಾಡಿರುವ ಕುರಿತು ಪ್ರಶ್ನಿಸಿದಾಗ, `ಈ ಬಗ್ಗೆ ನೀವು ಯಡಿಯೂರಪ್ಪ ಅವರ ಬಳಿಯೇ ಉತ್ತರ ಕೇಳಬೇಕು. ನನ್ನ ತಾಯಿ, ತಾಯಿ ಸ್ವರೂಪದ ಸಂಘಟನೆ ಮತ್ತು ಯಡಿಯೂರಪ್ಪ ಅವರಿಂದಲೇ ನಾನು ನಾಯಕನಾಗಿ ಬೆಳೆದಿದ್ದೇನೆ. ಅವರು ಏನೇ ಹೇಳಿದರೂ ಆ ಬಗ್ಗೆ ನಾನು ಪ್ರತ್ಯಾರೋಪ ಮಾಡುವ ಗೋಜಿಗೆ ಹೋಗುವುದಿಲ್ಲ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.