ಮಂಗಳವಾರ, ನವೆಂಬರ್ 19, 2019
27 °C

ಹೀನಾ ರಬ್ಬಾನಿ ಸ್ಪರ್ಧೆಯಿಲ್ಲ?

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನ ಮಾಜಿ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್ ಮುಂದಿನ ತಿಂಗಳು ನಡೆಯಲಿರುವ ಸಂಸದೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸಾಹ ತೋರುತ್ತಿಲ್ಲ ಹಾಗೂ ಅವರ ತಂದೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಪಂಜಾಬ್ ಪ್ರಾಂತ್ಯದ ವಿಧಾನಸಭಾ ಕ್ಷೇತ್ರದ ಸಂಖ್ಯೆ 177ರಲ್ಲಿ ಹೀನಾ ತಂದೆ ಗುಲಾಂ ರಬ್ಬಾನಿ ಖಾರ್ ಸ್ಪರ್ಧಿಸಲು ಅನುಮತಿ ದೊರೆತಿದ್ದು, ಅವರು ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.  ಪಾಕಿಸ್ತಾನ ಪೀಪಲ್ಸ್ ಪಾರ್ಟಿಯಿಂದ ಕಳೆದ ಬಾರಿ ಪ್ರತಿನಿಧಿಸಿದ್ದ ಮಹಿಳಾ ಮೀಸಲು ಕ್ಷೇತ್ರದಿಂದಲೂ ಹೀನಾ ಸ್ಪರ್ಧಿಸುವುದಿಲ್ಲ. ಬದಲಾಗಿ ಅವರ ತಂದೆ ಪರ ಪ್ರಚಾರ ನಡೆಸುವರು ಎಂದು ಪತ್ರಿಕೆಯೊಂದು ವರದಿ ಮಾಡಿದೆ.ಗುಲಾಂ ಅವರು ಅಗತ್ಯ ವಿದ್ಯಾರ್ಹತೆ (ಪದವಿ)ಯನ್ನು ಹೊಂದಿಲ್ಲ ಎನ್ನುವ ಕಾರಣಕ್ಕೆ 2008ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನು ನಿರಾಕರಿಸಲಾಗಿತ್ತು. ಹೊಸ ಚುನಾವಣಾ ನಿಯಮದ ಪ್ರಕಾರ ಪಾಕ್‌ನಲ್ಲಿ ಅಭ್ಯರ್ಥಿಯು ಪದವಿಯನ್ನು ಹೊಂದಿರುವುದು ಕಡ್ಡಾಯ. 34ನೆ ವಯಸ್ಸಿಗೆ ವಿದೇಶಾಂಗ ಸಚಿವ ಖಾತೆಯನ್ನು ನಿರ್ವಹಿಸಿದ ಹೀನಾ ಕಿರಿಯ ವಯಸ್ಸಿನ ಮಹಿಳಾ ಸಚಿವೆಯಾಗ್ದ್ದಿದರು.ಮುಷರಫ್ ಸ್ಪರ್ಧೆ:  ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಮುಂದಿನ ತಿಂಗಳು ನಡೆಯಲಿರುವ ಸಂಸದೀಯ ಚುನಾವಣೆಯಲ್ಲಿ ಉತ್ತರ ಪಾಕಿಸ್ತಾನದಿಂದ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರ ಅಂಗೀಕಾರವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಮುನ್ನ ಕರಾಚಿ ಕ್ಷೇತ್ರದಿಂದ ಸ್ಪರ್ಧಿಸಲು ಮುಷರಫ್ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿತ್ತು. ಕರಾಚಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿರುವ ಜಮಾತ್-ಎ-ಇಸ್ಲಾಂ ಸಂಘಟನೆಯ ಮುಖಂಡ ನಿಯಾಮತ್ತುಲ್ಲಾ ಖಾನ್, `ಮುಷರಫ್ ಅಧ್ಯಕ್ಷರಾಗಿದ್ದ ವೇಳೆ ಎರಡು ಬಾರಿ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)