ಹೀರೊ ನಟಿಯರು!

7

ಹೀರೊ ನಟಿಯರು!

Published:
Updated:
ಹೀರೊ ನಟಿಯರು!

ಸಿನಿಮಾ. ಅದು ಯಾವುದೇ ಭಾಷೆಯದಿರಲಿ. ಒಬ್ಬ ನಾಯಕ. ಒಬ್ಬಳು ನಾಯಕಿ. ಅಥವಾ ಇಬ್ಬರು ಮೂವರು ನಾಯಕ- ನಾಯಕಿಯರು. ಕೆಲವು ಚಲನಚಿತ್ರಗಳಲ್ಲಿ ನಾಯಕನ ಸುತ್ತ ಕಥೆ ಸುತ್ತುತ್ತಿರುತ್ತದೆ. ನಾಯಕಿ ಇಲ್ಲಿ ಶೋಪೀಸ್ ಎನ್ನುವಂತಹ ಕಾಲವಿತ್ತು. ಆದರೆ ಇತ್ತೀಚೆಗೆ ತೆರೆಕಂಡ ಅದರಲ್ಲೂ ಯಶಸ್ಸಿನ ರುಚಿಯನ್ನೂ ಕಂಡ ಬಾಲಿವುಡ್‌ನ ಕೆಲವು ಸಿನಿಮಾಗಳಲ್ಲಿ ನಾಯಕಿಯೇ ಕೇಂದ್ರಬಿಂದು.ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ‘ನೋ ಒನ್ ಕಿಲ್ಡ್ ಜೆಸ್ಸಿಕಾ’ ಇಂತಹ ಒಂದು ಚಿತ್ರ. ರಾಣಿ ಮುಖರ್ಜಿ ಮತ್ತು ವಿದ್ಯಾ ಬಾಲನ್ ಈ ಚಿತ್ರದ ಹೀರೋಗಳು ಎಂದೇ ಬಿಂಬಿಸಲಾಯಿತು. ಅದರಲ್ಲಿ ಅನುಮಾನವೇ ಇಲ್ಲ. ಬದಲಾವಣೆಗೆ ನಾಂದಿ ಹಾಡಿದ ಈ ಟ್ರೆಂಡ್ ‘ಧೋಬಿ ಘಾಟ್’ನಲ್ಲೂ ಮುಂದುವರಿಯಿತು. ಈ ಚಿತ್ರದಲ್ಲಿ ಮೋನಿಕಾ ಡೋಗ್ರಾಗೆ ಈ ಪಟ್ಟ ಹೋಗುತ್ತದೆ. ಅಮೀರ್ ಖಾನ್, ಪ್ರತೀಕ್ ಬಬ್ಬರ್ ಇಬ್ಬರ ಪಾತ್ರವೂ ಇದರಲ್ಲಿ ಜಾಳು ಜಾಳು. ಚಿತ್ರದಲ್ಲಿ ಮಿಂಚಿದ್ದು ಸರಳವಾಗಿ ಅಭಿನಯಿಸಿದ, ಕಥೆಯ ಪ್ರಮುಖ ಪಾತ್ರ ಮೋನಿಕಾ.‘7 ಖೂನ್ ಮಾಫ್’ನಲ್ಲಿ ಪ್ರಿಯಾಂಕಾ ಚೋಪ್ರಾ ಜೊತೆ ನಟಿಸಿದ ಪುರುಷ ಪಾತ್ರಗಳು ಏಳು. ಇವರಲ್ಲಿ ಒಬ್ಬಿಬ್ಬರು ಅಂತರರಾಷ್ಟ್ರೀಯವಾಗಿ ಹೆಸರು ಮಾಡಿದ ನಟರು. ಹೀರೊ ಪಾತ್ರದಲ್ಲಿ ಮೆರೆಯುವಂತಹ ಸಾಮರ್ಥ್ಯವುಳ್ಳವರು. ಆದರೂ ಈ ಸಿನಿಮಾದಲ್ಲಿ ಪ್ರಿಯಾಂಕಾ ಮುಂದೆ ಉಳಿದ ಪಾತ್ರಗಳು ಮಂಕು. ಕಥೆಯೇ ಹಾಗಿದೆ. ಚಿತ್ರದ ಪ್ರೊಮೊ, ಪ್ರಚಾರದಲ್ಲಿ ಈ ಏಳು ಮಂದಿಯ ಜೊತೆ ಕಾಣಿಸಿಕೊಂಡ ಪ್ರಿಯಾಂಕಾ ಸಾಧನೆಯ ಸಮೀಪ ಆಕೆಯ ಪ್ರತಿಸ್ಪರ್ಧಿಗಳಾದ ಕರೀನಾ, ಕತ್ರಿನಾ ಸದ್ಯಕ್ಕೆ ಸುಳಿಯುವ ಸೂಚನೆಯೂ ಇಲ್ಲ.ಗಟ್ಟಿ ಪಾತ್ರಗಳನ್ನು ಪಡೆದ ಇನ್ನೊಬ್ಬ ಬಾಲಿವುಡ್ ನಟಿಯೆಂದರೆ ಕಂಗನಾ ರನೌತ್. ‘ವೋ ಲಮ್ಹೆ’ಯ ಭಾರವನ್ನು ಹೊತ್ತಿದ್ದು ನಿಶ್ಚಿತವಾಗಿಯೂ ಸುಂದರಿ ಕಂಗನಾಳ ಸಪೂರವಾದ ಹೆಗಲೇ. ‘ಗ್ಯಾಂಗಸ್ಟರ್’ನಲ್ಲಿ ಕೂಡಾ ಶಿನೆ ಅಥವಾ ಇಮ್ರಾನ್ ಹಷ್ಮಿ ಎದುರು ಪ್ರೇಕ್ಷಕರ ಗಮನ ಸೆಳೆದವಳು ಕಂಗನಾಳೇ. ‘ಫ್ಯಾಷನ್’, ‘ನಾಕ್ ಔಟ್’, ‘ನೋ ಪ್ರಾಬ್ಲಂ’ನಲ್ಲೂ ಈಕೆಯದು ನಾಯಕರನ್ನು ಮೀರಿಸಿದ ಪಾತ್ರಗಳೇ. ಹೀಗಾಗಿ ಕೆಲವು ಚಿತ್ರಗಳ ಟೈಟಲ್‌ನಲ್ಲಿ ನಾಯಕನಿಗಿಂತ ಮೊದಲು ಈಕೆಯ ಹೆಸರೇ ಕಾಣಿಸಿಕೊಂಡಿದ್ದು.ಚಾಲ್ತಿಯಲ್ಲಿರುವ ನಟಿಯರು ಕೇವಲ ನಾಯಕನ ಜೊತೆ ಮರ ಸುತ್ತುವ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟಪಡಲಾರರು ಎಂಬುದು ನಿರ್ದೇಶಕರಿಗೂ ಗೊತ್ತಾದಂತಿದೆ. ಚಿತ್ರಕಥೆಯಲ್ಲಿ ಪಾತ್ರ ತೀರಾ ಗಟ್ಟಿಯಾಗಿರಬೇಕು. ಛಾಪು ಮೂಡಿಸುವಂತಿರಬೇಕು ಎಂದು ನಟಿಯರೇ ಬೇಡಿಕೆ ಮುಂದಿಡುತ್ತಿದ್ದಾರೆ.ಚಿತ್ರದ ಪ್ರಚಾರದಲ್ಲೂ ಅಷ್ಟೇ. ‘ದಂ ಮಾರೋ ದಂ’ ಪ್ರಚಾರಕ್ಕಾಗಿ ರೋಶನ್ ಸಿಪ್ಪಿ ಬಳಸಿದ್ದು ದೀಪಿಕಾಳ ಚಿತ್ರವನ್ನು ಮಾತ್ರ. ಅಭಿಷೇಕ್ ಬಚ್ಚನ್ ಪಾಪ ಸುಮ್ಮನಿರಬೇಕಾಯಿತು. ಇನ್ನೊಬ್ಬ ನಿರ್ದೇಶಕ ಮಧುರ್ ಭಂಡಾರ್ಕರ್ ಮಹಿಳೆ ಪ್ರಧಾನವಾಗಿರುವ ಚಿತ್ರ ತೆಗೆಯುವಲ್ಲಿ ನಿಸ್ಸೀಮ.ಇದೇ ಸೂತ್ರವನ್ನು ಲಾರಾ ದತ್ತಾ ತನ್ನ ಚೊಚ್ಚಲ ನಿರ್ಮಾಣದ ‘ಚಲೋ ದಿಲ್ಲಿ’ಯಲ್ಲೂ ಅಳವಡಿಸಿಕೊಂಡಿದ್ದಾಳಂತೆ. ಮಲ್ಲಿಕಾ ಶೇರಾವತ್‌ಳ ಮೊದಲ ಚಿತ್ರ ‘ಮರ್ಡರ್’ನಲ್ಲಿ ಆಕೆಯೇ ಜನಪ್ರಿಯತೆ ಅಲೆ ಮೇಲೆ ತೇಲಿದಳು. ಇದರ ಎರಡನೇ ಭಾಗದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್‌ಳದ್ದೇ ದರ್ಬಾರ್ ಅಂತೆ.ಇದಕ್ಕೆಲ್ಲಾ ನಾಂದಿ ಹಾಡಿದ ವಿದ್ಯಾ ಬಾಲನ್‌ಳನ್ನು ಮರೆಯಲಾದೀತೆ? ‘ಪರಿಣಿತಾ’, ‘ಭೂಲ್ ಭುಲಯ್ಯ’, ‘ನೋ ಒನ್ ಕಿಲ್ಡ್.. ‘ ಎಂದು ತಾನೇ ಹೀರೋ ಆಗಿ ಅಭಿನಯಿಸಿದ್ದಾಳೆ ವಿದ್ಯಾ. ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾ ಮುಂದೆಯೂ ಅದೇ ಪಾತ್ರಗಳಿಗೆ ಸೀಮಿತಗೊಳಿಸಿಕೊಂಡಿದ್ದಾಳಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry