ಗುರುವಾರ , ಅಕ್ಟೋಬರ್ 17, 2019
27 °C

ಹೀರೊ: 3 ಹೊಸ ವಾಹನಗಳು ಮಾರುಕಟ್ಟೆಗೆ

Published:
Updated:
ಹೀರೊ: 3 ಹೊಸ ವಾಹನಗಳು ಮಾರುಕಟ್ಟೆಗೆ

ನವದೆಹಲಿ (ಐಎಎನ್‌ಎಸ್): ದೇಶದ ಮುಂಚೂಣಿ ದ್ವಿಚಕ್ರ ವಾಹನ ತಯಾರಿಕೆ ಕಂಪೆನಿ ಹೀರೊ ಮೋಟೊ ಕಾರ್ಪ್ ಬುಧವಾರ ಇಲ್ಲಿ ಎರಡು ಹೊಸ ಬೈಕ್ ಮತ್ತು ಒಂದು ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

125ಸಿಸಿ ಸಾಮರ್ಥ್ಯದ `ಇಗ್ನೈಟರ್~ ಮತ್ತು 100ಸಿಸಿ ಸಾಮರ್ಥ್ಯದ `ಫ್ಯಾಷನ್ ಎಕ್ಸ್ ಪ್ರೊ~ ಈ ಹೊಸ ಬೈಕ್‌ಗಳು. `ಮಾಸ್ಟ್ರೊ~ ಹೊಸ ಸ್ಕೂಟರ್. ಜಪಾನ್ ಮೂಲದ ಹೋಂಡಾ ಕಂಪೆನಿಯಿಂದ ಬೇರ್ಪಟ್ಟ ನಂತರ ಹೀರೊ ಮೋಟೊ ಕಾರ್ಪ್ ಕಳೆದ ವರ್ಷಾಂತ್ಯದಲ್ಲಿ `ಇಂಪಲ್ಸ್~ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

`ಮಾಸ್ಟ್ರೊ~ ಸ್ಕೂಟರ್ ಮುಂದಿನ ತಿಂಗಳು ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ. ಬೈಕುಗಳು ವರ್ಷಾಂತ್ಯಕ್ಕೆ ಮಾರುಕಟ್ಟೆ ಪ್ರವೇಶಿಸಲಿವೆ. ಬಿಡುಗಡೆ ವೇಳೆ ವಾಹನಗಳ ಬೆಲೆಯನ್ನು ಪ್ರಕಟಿಸುವುದಾಗಿ ಕಂಪೆನಿ ಹೇಳಿದೆ.

ಸುಧಾರಿತ ತಂತ್ರಜ್ಞಾನ ಹೊಂದಿರುವ `ಇಗ್ನೈಟರ್~ ಕಾಲೇಜು ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ಗಮನದಲ್ಲಿ ಇಟ್ಟುಕೊಂಡು ತಯಾರಿಸಲಾಗಿದೆ. `ಮಾಸ್ಟ್ರೊ~ ಮಹಿಳೆಯರು ಮತ್ತು ಪುರುಷರು ಇಬ್ಬರನ್ನೂ ಆಕರ್ಷಿಸಲಿದೆ ಎಂದು ಕಂಪೆನಿಯ ಹಿರಿಯ ಉಪಾಧ್ಯಕ್ಷ ಅನಿಲ್ ದುವಾ ತಿಳಿಸಿದ್ದಾರೆ.

`ಕಳೆದ ವರ್ಷ ಕಂಪೆನಿಯು 6 ದಶಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಈ ಹೊಸ ಮಾದರಿಗಳು ಪ್ರಸಕ್ತ ವರ್ಷ  ಮಾರುಕಟ್ಟೆ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ~ ಎಂದು ಹೀರೊ ಮೋಟೊ ಕಾರ್ಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಮುಂಜಾಲ್ ತಿಳಿಸಿದ್ದಾರೆ.

Post Comments (+)