ಬುಧವಾರ, ನವೆಂಬರ್ 13, 2019
21 °C

ಹುಗ್ಗೇನಹಳ್ಳಿ: ಕಾಡಾನೆ ಕಂಡು ಗ್ರಾಮಸ್ಥರು ಆತಂಕ

Published:
Updated:

ಹಿರೀಸಾವೆ: ಹೋಬಳಿಯ ಗಡಿ ಗ್ರಾಮವಾದ ಹುಗ್ಗೇನಹಳ್ಳಿ ಬಳಿಯ ಗೊರಟಿಕೆರೆಯಲ್ಲಿ ಮಂಗಳ ವಾರ ಮೂರು ಕಾಡಾನೆಗಳು ಕಾಣಿಸಿಕೊಂಡಿದ್ದು, ಸುತ್ತ ಮುತ್ತಲ ಗ್ರಾಮಸ್ಥರಲ್ಲಿ ಭೀತಿ ಮೂಡಿದೆ.ಎರಡು ದಿನಗಳ ಹಿಂದೆ ಈ ಆನೆಗಳು ಅರಸೀಕೆರೆ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿದ್ದವು. ಚನ್ನರಾಯ ಪಟ್ಟಣ ತಾಲ್ಲೂಕಿನ ವಳಗೇರಹಳ್ಳಿಯಲ್ಲಿದ್ದ ಕಾಡಾನೆಗಳನ್ನು ಅರಣ್ಯ ಸಿಬ್ಬಂದಿ ಸೋಮವಾರ ಸಂಜೆ ಬೆದರಿಸೊ ಓಡಿಸಿದ್ದರಿಂದ ರಾತ್ರಿ ವೇಳೆಗೆ ಹೋಬಳಿಯ ಕಬ್ಬಳಿ, ಮಂಡಕ್ಕನಹಳ್ಳಿ, ಕೆ.ಕಾಮಘಟ್ಟದ ಮೂಲಕ ತುರುವೇಕೆರೆ ತಾಲ್ಲೂಕಿನ ಬೇವಿನಹಳ್ಳಿ, ಬಿಗನೇನಹಳ್ಳಿ ತಲುಪಿವೆ. ನಂತರ ಹಿಂದಿರುಗಿರುವ ಈ ಕಾಡಾನೆಗಳು ಮಂಗಳವಾರ ಬೆಳಿಗ್ಗೆ ಹುಗ್ಗೇನಹಳ್ಳಿ ಜಮೀನಿನಲ್ಲಿ ಕಾಣಿಸಿಕೊಂಡಿದ್ದು ಜನರಲ್ಲಿ ಭೀತಿ ಮೂಡಿಸಿವೆ.ಜನರ ಕೂಗಾಟಕ್ಕೆ ಬೆದರಿದ ಆನೆಗಳು ಪಕ್ಕದಲ್ಲಿರುವ ಗೊರಟಿ ಕೆರೆಯೊಳಗೆ ಇಳಿದಿವೆ. ಸುತ್ತಮುತ್ತಲ ಗ್ರಾಮಗಳ ಜನರು ಕೆರೆಯ ಸುತ್ತ ಬೆಂಕಿ ಹೊತ್ತಿಸಿ ಆನೆಗಳು ಕೆರೆಯಿಂದ ಹೊರಗೆ ಬರದಂತೆ ಮಾಡಿದ್ದಾರೆ. ಈ ಗ್ರಾಮವು ಹಾಸನ ಜಿಲ್ಲೆ ಮತ್ತು ತುಮಕೂರು ಜಿಲ್ಲೆಗಳ ಗಡಿಯಲ್ಲಿದೆ. ಚನ್ನರಾಯಪಟ್ಟಣ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕು ಅರಣ್ಯ ಸಿಬ್ಬಂದಿ ಹಾಗೂ ತುರುವೇಕೆರೆ ಮತ್ತು ಹಿರೀಸಾವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.ಈ ಕಾಡಾನೆಗಳು ಬನ್ನೇರುಘಟ್ಟ ಮೀಸಲು ಅರಣ್ಯದಿಂದ ದಾರಿ ತಪ್ಪಿ ಬಂದಿವೆ, ಎರಡು ತಾಲ್ಲೂಕಿನ ಅರಣ್ಯ ಸಿಬ್ಬಂದಿ ಒಟ್ಟಾಗಿ ಕಾರ್ಯಾಚರಣೆ ಕೈಗೊಂಡು ಆನೆಗಳನ್ನು ಓಡಿಸುವರು ಎಂದು ಚನ್ನರಾಯಪಟ್ಟಣ ವಲಯ ಅರಣ್ಯಾಧಿಕಾರಿ ಎ.ಈ.ಧರ್ಮಪ್ಪ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)