ಹುಚ್ಚು ಸಾಹಸಗಳು

7

ಹುಚ್ಚು ಸಾಹಸಗಳು

Published:
Updated:
ಹುಚ್ಚು ಸಾಹಸಗಳು

ವಾಯು ವಿಹಾರ!

`ಆಕಾಶದಿಂದ ಜಾರಿ ಭೂಮಿಗೆ ಬಂದ ನೋಡಿ...~ ಹಾಡು ಕೇಳಿದಾಗ ಮುಗಿಲಿನಿಂದ ಜಾರಿ ಬರುವುದೆಂದರೆ ಹೇಗಿರಬಹುದು ಎಂಬ ಕಲ್ಪನೆ ಸಣ್ಣನೆ ನಮ್ಮ ಮನದಲ್ಲಿ ಮೂಡಬಹುದು. ಹೀಗಾಗಿಯೇ ಮೇಲಿನಿಂದ ಕೆಳಕ್ಕೆ ಬೀಳುವ ಮಳೆಹನಿಯ ಬಗ್ಗೆ ನಮಗೆ ಹೆಚ್ಚು ಕುತೂಹಲ.

 

ಹೀಗೆ ಆಗಸದಲ್ಲಿ ತೇಲಾಡುವವರು ಮೇಲಿನಿಂದ ಕೆಳಕ್ಕೆ ಜಾರಿದರೆ ನೋಡಲೆಷ್ಟು ಸೊಗಸು. ಪ್ಯಾರಾಚೂಟ್‌ನಲ್ಲಿ ಕೆಳಕ್ಕಿಳಿಯುವುದನ್ನು ನೋಡಿದ್ದೇವೆ. ಕೆಲವರು ಅದರ ಅನುಭವವನ್ನೂ ಸವಿದಿದ್ದಾರೆ. ಆಕಾಶದಿಂದ ಕೆಳಕ್ಕೆ ಹಾರುವುದೂ ಒಂದು ಕ್ರೀಡೆ.ಈ ಮೋಜಿನಾಟದಲ್ಲಿ ಒಂದು ದಾಖಲೆ ಮೂಡದಿದ್ದರೆ ಹೇಗೆ? ಅದೂ ಸುಲಭವಾಗಿ ದಾಖಲೆ ಮುರಿಯಲು ಸಾಧ್ಯವಾಗಬಾರದು ಎಂಬ ಉದ್ದೇಶ ಈ ಜನರಿಗಿತ್ತು. ಅದಕ್ಕೆ ದಾಖಲೆ ನಿರ್ಮಿಸಲು ಒಟ್ಟುಗೂಡಿದ್ದು 400 ಮಂದಿ. ಅದು ಸ್ಕೈ ಡೈವಿಂಗ್‌ನಲ್ಲಿ ಸೃಷ್ಟಿಯಾದ ಮೊದಲ ದಾಖಲೆ.ಈ ನಾನೂರು ಜನ ಆಗಸದಿಂದ ಭೂಮಿಗೆ `ವಾಯು ವಿಹಾರ~ ಹೊರಟರು. ಅದೂ ಬಣ್ಣಬಣ್ಣದ ದಿರಿಸು ತೊಟ್ಟು ಚಕ್ರದಾಕಾರದಲ್ಲಿ ಸುರುಳಿ ಸುತ್ತಿಕೊಂಡು. 1994ರಲ್ಲಿ ಥೈಲಾಂಡ್‌ನಲ್ಲಿ ಮಾಡಿದ ಈ ಸಾಧನೆ ಇಂದಿಗೂ ಮುರಿಯಲಾಗದ ವಿಶ್ವದಾಖಲೆಯಾಗಿ ಉಳಿದಿದೆ.

 

ಕೈ ಕೈ ಹಿಡಿದು ಆಗಸದಿಂದ ಮೆಲ್ಲನೆ ಭೂಮಿಗಿಳಿದ ಮಾನವರನ್ನು ಕಂಡು ಪಕ್ಷಿ ಸಂಕುಲ ನಾಚಿಕೊಂಡಿತೋ ಅಥವಾ ಇಲ್ಲಿಗೂ ಬಂದರಲ್ಲಾ ಎಂದು ಭಯಪಟ್ಟುಕೊಂಡವೋ ಗೊತ್ತಿಲ್ಲ.ಅಜ್ಜನ ತಾಕತ್ತು!
ದಿನದಲ್ಲಿ ಆರೇಳು ಗಂಟೆ ಜಿಮ್‌ನಲ್ಲಿ ಕಳೆದು ಸಿಕ್ಸ್‌ಪ್ಯಾಕ್‌ಗಾಗಿ ಹಂಬಲಿಸುವವರಿಗೆ ಇಂಥದ್ದೊಂದು ಸಾಹಸ ಮಾಡಲು ಸಾಧ್ಯವೇ? ಅಷ್ಟು ಸುಲಭವಲ್ಲ. ಇಂತಹದ್ದೊಂದು ಇದುವರೆಗೆ ಮುರಿಯಲಾರದ ಸವಾಲನ್ನು ಮುಂದಿಟ್ಟಿರುವುದು ಆಸ್ಟ್ರೇಲಿಯಾದ ಪಾಲ್ ಡ್ರಿನನ್.ಮೊಣಕೈಗಳನ್ನು ಕೆಳಕ್ಕೆ ಊರಿ ಉದರ ಭಾಗವನ್ನು ನೆಲಕ್ಕೆ ತಗುಲಿಸದೆ ಸಮಾನಾಂತರವಾಗಿ ಎಷ್ಟು ಕಾಲ ಇಟ್ಟುಕೊಳ್ಳಲು ಸಾಧ್ಯ? ಎಷ್ಟೇ ಗಟ್ಟಿಗನಾದರೂ 10-15 ನಿಮಿಷ ಇರಬಹುದಷ್ಟೆ. ಆದರೆ ಪಾಲ್ ಸಾಧನೆ 33 ನಿಮಿಷ 40 ಸೆಕೆಂಡ್.ಮೊಣಕೈ ನೆಲಕ್ಕೆ ತಾಗುವಂತೆ ಎರಡೂ ಕೈಗಳನ್ನು ಸಮಾನಾಂತರವಾಗಿ ಇಟ್ಟುಕೊಂಡಿದ್ದ ಪಾಲ್ ಅರ್ಧ ಗಂಟೆಗೂ ಹೆಚ್ಚು ಕಾಲ ಹೊಟ್ಟೆಯನ್ನು ಹಲಗೆಯಂತೆ ನೇರವಾಗಿ ಅಲುಗಾಡದೆ ಇರಿಸಿಕೊಂಡಿದ್ದರು. ಅವರ ಉಸಿರಾಟದಲ್ಲಿಯೂ ವ್ಯತ್ಯಾಸವಾಗಿರಲಿಲ್ಲ. ಅಂದಹಾಗೆ, ಈ ಸಾಹಸ ಮಾಡುವಾಗ ಅವರ ವಯಸ್ಸೆಷ್ಟು ಗೊತ್ತೇ? 68 ವರ್ಷ!ಈ ಅಜ್ಜನಿಗೆ ಸ್ಫೂರ್ತಿ ನೀಡಿದ್ದು 12 ನಿಮಿಷ ಈ ರೀತಿ ನಿಂತಿದ್ದ ಯುವ ಫಿಟ್‌ನೆಸ್ ತರಬೇತುದಾರ. ಈಗ ಈ `ಯುವಕ~ನ ಹೆಸರು ಗಿನ್ನಿಸ್ ದಾಖಲೆಯಲ್ಲಿ ಸೇರಿಕೊಂಡಿದೆ.ನೀರ ಮೇಲೆ ಸವಾರಿ
ನೀರಾಟ ಎಷ್ಟು ಮೋಜು ನೀಡುವುದೋ ಅಷ್ಟೇ ಅಪಾಯಕಾರಿ ಕೂಡ. ನೀರಿನ ಮೇಲೆ ಸಾಹಸ ಮಾಡುವವರ ಬದುಕು ಸಹ ನೀರ ಮೇಲಿನ ಗುಳ್ಳೆ ಇದ್ದಂತೆ! ಹಾಗಂತ ಬೋರ್ಗರೆಯುತ್ತ ಅಲೆಗಳನ್ನು ಅಪ್ಪಳಿಸುವ ಸಾಗರದಲ್ಲಿಯೂ ಸಾಹಸ ಕ್ರೀಡೆಗಳನ್ನು ನಡೆಸುವವರಿಗೆ ಕಡಿಮೆ ಇಲ್ಲ.

 

ಜೀವದ ಮೇಲೆ ಆಸೆಯನ್ನೂ ಬಿಟ್ಟಂತೆ ನೀರಿನ ಮೇಲೆ ಜಾರುವವರನ್ನು (ವಾಟರ್‌ಸ್ಕೀಯಿಂಗ್) ನೋಡಿದಾಗ ಮೈ ನವಿರೇಳುವುದು ಖಚಿತ.

 

ಸ್ಟೀವನ್ ಥೀಲೆ ಇಂಥ ಸಾಹಸದಲ್ಲಿ ದಾಖಲೆ ನಿರ್ಮಿಸಿದ ವ್ಯಕ್ತಿ. ಇಂಗ್ಲೆಂಡಿನವರಾದ ಸ್ಟೀವನ್ ಹೀಗೆ ನೀರ ಮೇಲೆ ಜಾರುತ್ತಾ ಒಂದು ಗಂಟೆಯಲ್ಲಿ ಕ್ರಮಿಸಿದ ದೂರ 38.38 ಕಿಲೋ ಮೀಟರ್! ಎದ್ದೆದ್ದು ಬರುವ ಬೃಹದಾಕಾರದ ಅಲೆಗಳನ್ನು ನೋಡಿದಾಗಲೇ ಎದೆ ಧಸಕ್ಕೆನ್ನುತ್ತದೆ.

 

ಆದರೆ ಸ್ಟೀವನ್‌ಗೆ ಅಲೆಗಳ ಬಗ್ಗೆ ಚಿಂತೆಯೇ ಇರಲಿಲ್ಲ. ಏಕೆಂದರೆ ಆತ ಹುಟ್ಟು ಅಂಧ. ಈ ಕ್ರೀಡೆ ಜೀವನದೊಂದಿಗೆ ಆಟ ಆಡಿದಂತೆ ಕಂಡರೂ ಅಂಧ ಸ್ಟೀವನ್‌ರ ಸಾಧನೆ ಬದುಕಿನ `ಹೈವೇ~ಯಲ್ಲಿ ನಡೆಯಲು ಅಂಜುವವರಿಗೆ ಪ್ರೇರಣೆಯಲ್ಲವೆ?ಕೈಯಲ್ಲ ಸುತ್ತಿಗೆ
`ಉಗುರಲ್ಲಿ ಹೋಗೋದನ್ನ ತೆಗೆಯೋಕೆ ಕೊಡಲಿ ತೆಗೆದುಕೊಂಡಂತೆ~- ಇದು ನಮ್ಮ ಗಾದೆ ಮಾತು. ಆದರೆ ಕೊಡಲಿಯಲ್ಲಿಯೇ ಕಡಿಯಬೇಕಾದ್ದನ್ನು ತೆಗೆಯೋಕೆ ಕೊಡಲಿಯೇ ಸಿಗದಿದ್ದರೆ? ಇಲ್ಲಿ ವಿಷಯ ಅದಲ್ಲ.

 

ಟರ್ಕಿಯ ಜನರ ಅದೃಷ್ಟ ನೋಡಿ, ಅವರಿಗೆ ಕಲ್ಲನ್ನು ಪುಡಿ ಮಾಡಬೇಕೆಂದಿದ್ದರೆ ಸುತ್ತಿಗೆ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ. ಅಲಿ ಬಹಸೆತೆಪ್‌ರ ಕೈ ಸಿಕ್ಕರೆ ಸಾಕು! ನಿಮಿಷದಲ್ಲಿ ಎಂಥಹ ಗಟ್ಟಿ ಕಲ್ಲಾದರೂ ಚೂರು ಚೂರು. ಅಲಿಯ ಈ ಕೈ ಸೃಷ್ಟಿಸಿದ ದಾಖಲೆ ನೋಡಿ ತಾವೇ `ಗಟ್ಟಿಕುಳ~ ಎಂದು ಭಾವಿಸಿದ್ದವರೆಲ್ಲಾ ದಂಗಾಗಿದ್ದಾರೆ.ಒಂದೇ ಒಂದು ನಿಮಿಷದಲ್ಲಿ ಬರೋಬ್ಬರಿ 1,145 ಕಾಂಕ್ರೀಟ್ ಬ್ಲಾಕ್‌ಗಳನ್ನು ಪುಡಿ ಮಾಡಿದ್ದು ಅಲಿ ಸಾಧನೆ. ಪ್ರತಿ ಸೆಕೆಂಡಿಗೆ ಹದಿನೈದರ ಸರಾಸರಿಯಂತೆ ಬ್ಲಾಕ್‌ಗಳನ್ನು ಒಡೆದುಹಾಕಿದರು.10 ಬ್ಲಾಕ್‌ಗಳಿರುವ 37 ಸಾಲು ಮತ್ತು 6 ಬ್ಲಾಕ್‌ಗಳಿರುವ 36 ಸಾಲುಗಳಲ್ಲಿ 1,172 ಬ್ಲಾಕ್‌ಗಳನ್ನು ಇರಿಸಲಾಗಿತ್ತು. ಮೇಲಿನಿಂದ ಕೆಳಕ್ಕೆ ಕಲ್ಲಿನ ಮೇಲೆ ಹಾಕಿದರೂ ಸಾಮಾನ್ಯಕ್ಕೆ ಪುಡಿಯಾಗದ ಕಾಂಕ್ರೀಟ್ ಬ್ಲಾಕ್‌ಗಳನ್ನು ಮೊಣಕೈ ಏಟಿನಲ್ಲಿಯೇ ತುಂಡರಿಸುವುದೆಂದರೆ ಸಾಮಾನ್ಯವೆ?ಎರಡೇ ಸೆಕೆಂಡಿಗೆ ಮುಗಿದ ಪಂದ್ಯ
ಬಾಕ್ಸಿಂಗ್ ರೋಮಾಂಚನಕಾರಿ ಕದನ. ಹೀಗಾಗಿಯೇ ಬಾಕ್ಸಿಂಗ್ ನೋಡಲು ಜನ ಮುಗಿಬೀಳುತ್ತಾರೆ. ಹೊಡೆದಾಟಕ್ಕೆ ಹೆಸರಾದ ಡಬ್ಲ್ಯೂಡಬ್ಲ್ಯೂಇ ಎಂಬ ಆಟ ಒಂದಷ್ಟು ಕಾಲ ಜನರಲ್ಲಿ ರೋಮಾಂಚನ ಮೂಡಿಸಿದ್ದಿದೆ.ಆದರದು ನಾಟಕ ಎಂಬುದು ಬಹಿರಂಗವಾದ ಬಳಿಕ ಅದನ್ನು ನೋಡುವವರ ಸಂಖ್ಯೆ ಕಡಿಮೆ. ಇಷ್ಟಾದರೂ ಬಾಕ್ಸಿಂಗ್ ಜನಪ್ರಿಯತೆ ಕಳೆದುಕೊಂಡಿರಲಿಲ್ಲ. ಇಬ್ಬರು ಹೊಡೆದಾಡುವುದನ್ನು ನೋಡುವುದು ಒಂದು ರೀತಿಯ ಮಜವೇ ಅಲ್ಲವೇ? ಬಾಕ್ಸಿಂಗ್ ಬರಿಯ ಆಟವಲ್ಲ.ಅದು ಕಿಚ್ಚನ್ನು, ಸಾಮರ್ಥ್ಯವನ್ನು ಪ್ರದರ್ಶಿಸುವ ಕಲೆ. ಯಾರು ಗೆಲ್ಲುತ್ತಾರೆ ಎಂಬುದನ್ನು ನಿಮಿಷಗಟ್ಟಲೆ ಉದ್ವೇಗದಿಂದ ಉಸಿರು ಬಿಗಿಹಿಡಿದು ಕಾಯುವ ಬಾಕ್ಸಿಂಗ್ ಅಭಿಮಾನಿಗಳಿಗೆ ಲೆಕ್ಕವಿಲ್ಲ.ಆದರೆ ಹೀಗೆ ಕುತೂಹಲದಿಂದ ದೊಡ್ಡ ಪಂದ್ಯ ವೀಕ್ಷಿಸಲು ಬಂದ ಪ್ರೇಕ್ಷಕರಿಗೆ ನಿರಾಸೆಯಾದರೆ? ಅಲ್ಲಿ ಪ್ರೇಕ್ಷಕರಿಗೆ ಪಂದ್ಯ ನಿಂತು ಬೇಸರವಾಗಿದ್ದಲ್ಲ, ಪಂದ್ಯ ಎರಡೇ ಸೆಕೆಂಡಿನಲ್ಲಿ ಮುಗಿದದ್ದಕ್ಕೆ. ರಿಯೋಹಿ ಮಸುಡಾ ಮತ್ತು ತಕಹಿರೊ ಖುರೋಷಿ ನಡುವಿನ ಪಂದ್ಯ ಎರಡೇ ಕ್ಷಣದಲ್ಲಿ ಮುಗಿದುಹೋಗಿತ್ತು.

 

ಆಟ ಶುರುವಾಗುತ್ತಿದ್ದಂತೆ ತಮ್ಮತ್ತ ನುಗ್ಗಿ ಬಂದ ಖುರೋಷಿಗೆ ಮಸುಡಾ ಕೊಟ್ಟಿದ್ದು ಒಂದೇ ಪಂಚ್. ನೆಲಕ್ಕೆ ಬಿದ್ದ ಖುರೋಷಿ ಮತ್ತೆ ಏಳಲೇ ಇಲ್ಲ. ಎರಡೇ ಸೆಕೆಂಡಿಗೆ ಮುಗಿದ ಆಟವಿದು ಎಂದು ಪರಿಗಣಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry