ಹುಟ್ಟಿದೂರಿನಲ್ಲಿ ಮುಗ್ಗರಿಸುತ್ತಿರುವ ಮುಲಾಯಂ

7

ಹುಟ್ಟಿದೂರಿನಲ್ಲಿ ಮುಗ್ಗರಿಸುತ್ತಿರುವ ಮುಲಾಯಂ

Published:
Updated:

ಈಟಾವ: ಅಂತರರಾಷ್ಟ್ರಿಯ ವಿಮಾನ ನಿಲ್ದಾಣ, ಆರು ಮಹಡಿಗಳ ಬೃಹತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಆ್ಯಸ್ಟ್ರೋಟರ್ಫ್ ಹಾಕಿ ಮೈದಾನ ಮತ್ತು ಒಲಿಂಪಿಕ್ ಗುಣಮಟ್ಟದ ಈಜುಕೊಳವನ್ನೊಳಗೊಂಡ ಕ್ರೆಡಾ ಸಂಕೀರ್ಣ, 1000 ಆಸನ ಸಾಮರ್ಥ್ಯದ ಹವಾನಿಯಂತ್ರಿತ ಸಭಾಂಗಣ, ಆಧುನಿಕ ಸಹಕಾರಿ ಆಡಳಿತ ತರಬೇತಿ ಕೇಂದ್ರ,, ಅಂದಾಜು ರೂ 70 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಚೌದರಿ ಚರಣ್ ಸಿಂಗ್ ಪದವಿ ಕಾಲೇಜು, ಪಂಚತಾರಾ ಸೌಲಭ್ಯಗಳನ್ನೊಳಗೊಂಡ ಅತಿಥಿ ಗೃಹ, ಲಯನ್ ಸಫಾರಿ.....ಇನ್ನೂ ಏನೇನೋ....ಇವೆಲ್ಲವೂ ಇರುವುದು ಉತ್ತರಪ್ರದೇಶದ ಅತೀ ಹಿಂದುಳಿದ ಪ್ರದೇಶವಾಗಿರುವ ಬುಂದೇಲ್‌ಖಂಡ ಪ್ರದೇಶದಲ್ಲಿರುವ ಸೈಫಯಿ ಎಂಬ ಒಂದು ಪುಟ್ಟ ಊರಿನಲ್ಲಿ.ಈಟಾವ ಜಿಲ್ಲೆಗೆ ಸೇರಿರುವ ಸುಮಾರು ಆರು ಸಾವಿರ ಜನಸಂಖ್ಯೆಯ ಈ ಊರಿನಲ್ಲಿ ಎಪ್ಪತ್ತುಮೂರು ವರ್ಷಗಳ ಹಿಂದೆ ಮುಲಾಯಂಸಿಂಗ್ ಯಾದವ್ ಎಂಬ ನಾಯಕ ಹುಟ್ಟಿದ್ದೇ ಅಲ್ಲಿ `ಸ್ವರ್ಗ ಧರೆಗೆ ಇಳಿಯಲು~ ಕಾರಣ.

 

ಇವೆಲ್ಲವನ್ನೂ ತೋರಿಸುತ್ತಾ ಇದರ ಹಿಂದಿನ ಕತೆ ಹೇಳುತ್ತಾ ಹೋದ ಸ್ಥಳೀಯ ಪತ್ರಕರ್ತ ಪ್ರದೀಪ್ ಅವಸ್ಥಿ `ಮುಲಾಯಂ ಎಲ್ಲವನ್ನೂ ಮಾಡಿದರು, ಇದನ್ನು ರಾಜಧಾನಿ ಮಾಡಲಾಗಿಲ್ಲ~ ಎಂದ ವ್ಯಂಗ್ಯದಿಂದ. ಇದನ್ನು ನೋಡುತ್ತಿದ್ದಾಗ  ನನಗೆ ಲಾಲು ಯಾದವ್ ಹುಟ್ಟೂರು ಫುಲ್‌ವಾರಿಯಾಕ್ಕೆ ಹೋಗಿದ್ದು ನೆನೆಪಾಯಿತು.

 

ಅವರು ಮುಖ್ಯಮಂತ್ರಿಯಾಗಿದ್ದಾಗ ಇಡೀ ಬಿಹಾರದಲ್ಲಿ ಇಲ್ಲದ್ದನ್ನೆಲ್ಲ ತಮ್ಮ ಹುಟ್ಟೂರಿಗೆ ಕೊಡುಗೆಯಾಗಿ ನೀಡಿದ್ದರು. ಶಾಲೆ, ಆಸ್ಪತ್ರೆ, ಹೆಲಿಪ್ಯಾಡ್ ಮಾತ್ರವಲ್ಲ `ಹೇಮಾ ಮಾಲಿನಿಯ ಕೆನ್ನೆ~ಯಷ್ಟು ನುಣುಪಾದ ರಸ್ತೆಗಳು ಅಲ್ಲಿದ್ದವು.ಮುಲಾಯಂಸಿಂಗ್ ಯಾದವ್ ಸಹ ಹುಟ್ಟೂರಿನ ಅಭಿವೃದ್ದಿ ಪ್ರಾರಂಭಿಸಿದ್ದು ಹೆಚ್ಚು ಕಡಿಮೆ ಅದೇ ಕಾಲದಲ್ಲಿ. 1993ರಲ್ಲಿ  ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಮೊದಲ ಬಜೆಟ್‌ನಲ್ಲಿಯೇ ಸೈಫಯಿ ಅಭಿವೃದ್ದಿಗೆ ರೂ 4 ಕೋಟಿ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಅವರ ಹುಟ್ಟೂರಿನ ಪ್ರೇಮಕ್ಕೆ ಈ ವಿವಾದಗಳು ಅಡ್ಡಿಯಾಗಲಿಲ್ಲ.ಮುಖ್ಯಮಂತ್ರಿ ಸ್ಥಾನದ ಮೂರನೆ ಅವಧಿಯಲ್ಲಿ ಮುಲಾಯಂಸಿಂಗ್ ಸಾವಿರಾರು ಕೋಟಿ ರೂಪಾಯಿಗಳನ್ನು ಸೈಫಯಿಗೆ ಸುರಿದಿದ್ದಾರೆ. ಇಷ್ಟೊಂದು  ಖರ್ಚು ಮಾಡಿ ನಿರ್ಮಾಣ ಮಾಡಿದ ಈ `ಭೂಸ್ವರ್ಗ~ ಈಗ ಪಾಳುಬಿದ್ದು ನರಕದಂತಾಗಿದೆ.ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಅಮಿತಾಬ್ ಬಚ್ಚನ್‌ನಿಂದ ಐಶ್ಚರ್ಯ ರೈ ವರೆಗಿನ ಬಾಲಿವುಡ್ ತಾರೆಯರು, ಅಂಬಾನಿಯಿಂದ ಹಿಡಿದು ಬಿರ್ಲಾ ವರೆಗಿನ ಉದ್ಯಮಿಗಳು, ಬಿರ್ಜು ಮಹಾರಾಜ್ ಅವರಿಂದ ಹಿಡಿದು ಅಮ್ಜದ್ ಅಲಿಖಾನ್ ವರೆಗಿನ ಕಲಾವಿದರು ಇಲ್ಲಿಗೆ ಆಗಮಿಸಿದ್ದರು.ಅವೆಲ್ಲವೂ ಮುಲಾಯಂ-ಅಮರ್‌ಸಿಂಗ್ ಸ್ನೇಹದ ದಿನಗಳು. ಆ ಸ್ನೇಹ ಮುರಿದುಬಿದ್ದ ನಂತರ `ಸೈಫಯಿ ಉತ್ಸವ~ವೇ ನಿಂತುಹೋಗಿ ಅವರಿಗಾಗಿಯೇ ನಿರ್ಮಿಸಿದ್ದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಿಕೋ ಅನಿಸುತ್ತಿದೆ.ಸುಮಾರು 60 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕ್ರೆಡಾ ಸಂಕೀರ್ಣದಲ್ಲಿ ಯಾವುದಾದರೂ ಕ್ರೆಡಾ ಕೂಟ ನಡೆದ ಹಾಗಿಲ್ಲ. ಆರು ಮಹಡಿಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಾಸಿಗೆಗಳು ಖಾಲಿ ಇವೆ.ಅಂಬೇಡ್ಕರ್ ಪಾರ್ಕ್, ಪ್ರತಿಮೆಗಳ ಸ್ಥಾಪನೆಯ ಮೂಲಕ ಮುಖ್ಯಮಂತ್ರಿ ಮಾಯಾವತಿ ಮಾಡಿರುವ `ದುಂದುವೆಚ್ಚ~ದಷ್ಟು `ನೇತಾಜಿ~ಯ ಅಧಿಕಾರವಧಿಯಲ್ಲಿ ಅವರ ಹುಟ್ಟೂರಿಗೆ ಹರಿದ ಹಣದ ಹುಚ್ಚು ಹೊಳೆ ಸುದ್ದಿಯಾಗಿಲ್ಲ. ಈ ಹಣದ ಹೊಳೆ ಕೂಡಾ ಮುಲಾಯಂ ಹುಟ್ಟೂರು ಬಿಟ್ಟು ಹೊರಗೆ ಹರಿದಿಲ್ಲ.

 

ಸೈಫಯಿ ಇರುವ ಜಸ್ವಂತ್‌ನಗರ ವಿಧಾನಸಭಾ ಕ್ಷೇತ್ರ ಪಕ್ಕದಲ್ಲೇ ಇರುವ ಬರ್ತಾನ ಮೀಸಲು ಕ್ಷೇತ್ರದಲ್ಲಿ ಯಮುನಾ ಮತ್ತು ಚಂಬಲ್ ನದಿ ಸಂಗಮದ ದಂಡೆಯಲ್ಲಿ ಚಕರನಗರ ಎನ್ನುವ ಊರಿದೆ. ಮೂರು ಕಡೆ ನದಿಗಳಿಂದ ಸುತ್ತುವರಿದ ಈ ಊರಲ್ಲಿ ಒಂದೇ ಒಂದು ಪಕ್ಕಾ ರಸ್ತೆ ಇಲ್ಲ.

 

ಶಾಲೆ ಎಂಟು ಕಿ.ಮೀ.ದೂರದಲ್ಲಿದೆ. ಸುಮಾರು ಒಂದು ಲಕ್ಷ ಜನಸಂಖ್ಯೆಯ ಈ ಪ್ರದೇಶದಲ್ಲಿ ಹೈಸ್ಕೂಲ್ ನಂತರ ಕಲಿಯುವ ಅವಕಾಶವೇ ಇಲ್ಲ. ಇರುವ ಒಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಬ್ಬ ವೈದ್ಯ ಮತ್ತು ಇಬ್ಬರು ದಾದಿಯರಿದ್ದಾರೆ.  ಸೈಫಯಿ ಮತ್ತು ಚಕರನಗರ ಒಂದೇ ಜಿಲ್ಲೆಯಲ್ಲಿದ್ದರೂ ಎರಡು ಊರುಗಳ ನಡುವೆ ಭೂಮಿ-ಆಕಾಶದಷ್ಟು ಅಂತರ ಇದೆ. ಉಳಿದ ಪ್ರದೇಶದ ಜನರ ಕಣ್ಣುಕುಕ್ಕುವ ಹಾಗೆ ಹುಟ್ಟೂರಿನ ಅಭಿವೃದ್ದಿಯ ಹೆಸರಿನಲ್ಲಿ ಮುಲಾಯಂಸಿಂಗ್ ಮಾಡಿರುವ ದುಂದುವೆಚ್ಚವೊಂದೇ ಕಾರಣ ಅಲ್ಲ, ಅವರು ಮುಖ್ಯಮಂತ್ರಿಯಾಗಿದ್ದಾಗ ಚಂಬಲ್ ಕಣಿವೆಯ ಭಾಗವೇ ಆಗಿರುವ ಈಟಾವ ಜಿಲ್ಲೆಯನ್ನು `ಗೂಂಡಾರಾಜ್~ ಮಾಡಿದ್ದು ಕೂಡಾ ಇಲ್ಲಿನ ಜನರ ಅಸಮಾಧಾನಕ್ಕೆ ಕಾರಣ. `ಬೆಹೆನ್‌ಜಿನೆ ಈಟಾವಕೋ ಸಾಫ್ ಕರ್‌ದಿಯಾ, ಅಬ್‌ಲೋಗೋಂಕೋ ಬಂದೂಕ್‌ಕಾ ಜರೂರತ್ ನಹಿ~ ಎಂದ ಸ್ಥಳೀಯ ವ್ಯಾಪಾರಿ ಬಬ್ಲು. ಡಕಾಯಿತರ ಹಾವಳಿಯಿಂದಾಗಿ ಬಂದೂಕು ಇಟ್ಟುಕೊಳ್ಳುವುದು ಮೊದಲಿನಿಂದಲೂ ಇಲ್ಲಿನ ಜನರಿಗೆ ರೂಢಿಯಾಗಿತ್ತು.

 

ಡಕಾಯಿತರ ಕಾಟ ಕಡಿಮೆಯಾದ ನಂತರ ಸ್ಥಳೀಯ ಗೂಂಡಾಗಳು ದರೋಡೆ, ಸುಲಿಗೆ, ಅಪಹರಣಕ್ಕೆ ಇಳಿದ ಕಾರಣ ಬಂದೂಕಿನಿಂದ ಇವರಿಗೆ ಮುಕ್ತಿಯೇ ಸಿಕ್ಕಿರಲಿಲ್ಲ. ಈಗಲೂ ಹೆಗಲ ಮೇಲೆ ಬಂದೂಕು ಇಟ್ಟುಕೊಂಡವರು ಅಲ್ಲಲ್ಲಿ ಸಿಗುತ್ತಾರೆ.

 

ಬಹಳಷ್ಟು ಸರ್ಕಾರಿ ಕಚೇರಿಗಳ ಬಾಗಿಲಲ್ಲಿ `ಬಂದೂಕುಧಾರಿಗಳಿಗೆ ಒಳಗೆ ಪ್ರವೇಶ ಇಲ್ಲ~ ಎನ್ನುವ ಫಲಕಗಳು ಇವೆ.ಮಾಯಾವತಿ ಅಧಿಕಾರಕ್ಕೆ ಬರುವ ಮೊದಲು ರಾಜ್ಯದಲ್ಲಿ ಅತ್ಯಂತ ಹೆಚ್ಚು ಬಂದೂಕುಗಳನ್ನು ಹೊಂದಿದ್ದ ಜಿಲ್ಲೆ ಈಟಾವ ಆಗಿತ್ತಂತೆ.ಚುನಾವಣಾ ಆಯೋಗ ಇತ್ತೀಚೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಬಂದೂಕು ಲೈಸೆನ್ಸ್‌ಗಳ ವಿವರ ಸಂಗ್ರಹಿಸಿತ್ತು. ಅದರ ಪ್ರಕಾರ ಇಲ್ಲಿರುವ ಲೈಸೆನ್ಸ್ ಹೊಂದಿರುವ ಬಂದೂಕುಗಳ ಸಂಖ್ಯೆ ಕೇವಲ ಹದಿಮೂರು ಸಾವಿರ. ಲಖನೌದಲ್ಲಿಯೇ 49,000 ಬಂದೂಕುಗಳಿವೆ. `ಐದು ವರ್ಷಗಳ ಹಿಂದೆ ಈ ಊರಲ್ಲಿ ಯಾರೂ ಒಂಟಿಯಾಗಿ ಹೊರಗೆ ಹೋಗುತ್ತಿರಲಿಲ್ಲ, ಹೋದರೆ ಗುಂಪಲ್ಲಿ ಹೋಗುತ್ತಿದ್ದರು. ಎಷ್ಟೇ ಕಷ್ಟವಾದರೂ ಹೆಚ್ಚಿನವರು ಬಂದೂಕು ಮನೆಯಲ್ಲಿಟ್ಟುಕೊಳ್ಳುತ್ತಿದ್ದರು. ಮಾಯಾವತಿ ಸರ್ಕಾರ ಬಂದ ನಂತರ ಹಿಂದಿನ ಭಯಭೀತ ವಾತಾವರಣ ಇಲ್ಲ~ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ಚುನ್ನಿಲಾಲ್.ಇಲ್ಲಿನ ಕುಖ್ಯಾತ ಗೂಂಡಾಗಳು ಈಗ ಒಂದೋ ಜೈಲಲ್ಲಿದ್ದಾರೆ, ಇಲ್ಲವೇ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸತ್ತಿದ್ದಾರೆ. ಇದು ಮುಲಾಯಂಸಿಂಗ್ ಅವರ ಹುಟ್ಟೂರಿನ ಜನ ಮಾಯಾವತಿಯವರನ್ನು ಅಭಿಮಾನದಿಂದ ನೆನಪುಮಾಡಿಕೊಳ್ಳಲು ಕಾರಣ.ಈ ಅಭಿಮಾನದ ಬಲದಿಂದಲೇ ಕಳೆದ ಚುನಾವಣೆಯಲ್ಲಿ ಈ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡನ್ನು ಬಿಎಸ್‌ಪಿ ಗೆದ್ದಿತ್ತು. ಸೈಫಯಿ ಇರುವ ಜಸ್ವಂತ್‌ನಗರ ಕ್ಷೇತ್ರದಲ್ಲಿ ಮಾತ್ರ ಮುಲಾಯಂಸಿಂಗ್ ಸೋದರ ಶಿವಪಾಲ್ ಯಾದವ್ ಶಾಸಕರಾಗಿದ್ದರು. ಈ ಬಾರಿಯೂ ಸಮಾಜವಾದಿ ಪಕ್ಷಕ್ಕೆ ಉಳಿಸಿಕೊಳ್ಳಲು ಸಾಧ್ಯವಾದರೆ ಅದೊಂದು ಕ್ಷೇತ್ರ ಮಾತ್ರ. ರಾಜ್ಯ ಗೆಲ್ಲುವುದಕ್ಕಿಂತಲೂ ಊರು ಗೆಲ್ಲುವುದು ಎಷ್ಟೊಂದು ಕಷ್ಟ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry