ಹುಟ್ಟೂರಲ್ಲಿ ಯೋಧನ ಅಂತ್ಯಕ್ರಿಯೆ

7

ಹುಟ್ಟೂರಲ್ಲಿ ಯೋಧನ ಅಂತ್ಯಕ್ರಿಯೆ

Published:
Updated:
ಹುಟ್ಟೂರಲ್ಲಿ ಯೋಧನ ಅಂತ್ಯಕ್ರಿಯೆ

ಹುಣಸೂರು: ಜಮ್ಮುವಿನ ಗಡಿ ಜಿಲ್ಲೆ ರಜೋರಿಯಲ್ಲಿ ಸೆ.24 ರಂದು ಗುಂಡಿನ ಕಾಳಗದಲ್ಲಿ ಮೃತಪಟ್ಟ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ಯೋಧ ಆನಂದರಾವ್ ಅಂತ್ಯಕ್ರಿಯೆ ಮಂಗಳವಾರ ತಾಲ್ಲೂಕಿನ ಚೌಡಿಕಟ್ಟೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.ಯೋಧ ಆನಂದ್‌ರಾವ್ ಅವರ ಪಾರ್ಥಿವ ಶರೀರವನ್ನು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ತೆರೆದ ವಾಹನದಲ್ಲಿ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಕುಟುಂಬ ಸದಸ್ಯರೊಂದಿಗೆ ಜನಸಾಗರ ಸೇರಿತ್ತು. ಮಗನ ಸಾವಿನ ಸುದ್ದಿ ಕೇಳಿದ ತಾಯಿ ಲೀಲಾಬಾಯಿ  ಶನಿವಾರದಿಂದ ಅನ್ನ ನೀರು ಬಿಟ್ಟಿದ್ದರು. ಬೆಳಿಗ್ಗೆ ಮಗ ಶವವನ್ನು ಕಂಡು ದುಃಖದ ಮಡುವಿನಲ್ಲಿ ಮುಳುಗಿದರು.ಎಸ್.ಆನಂದರಾವ್ (26) ಅವರ ಪಾರ್ಥಿವ ಶರೀರ ಮಂಗಳವಾರ ಬೆಳಗಿನ ಜಾವ 4.30ಕ್ಕೆ ಪಟ್ಟಣ ತಲುಪಿತು. ಹುಣಸೂರು ಉಪವಿಭಾಗಾಧಿಕಾರಿ  ಲಿಂಗಮೂರ್ತಿ ಸರ್ಕಾರದ ಪರವಾಗಿ ಪಾರ್ಥಿವ ಶರೀರವನ್ನು ಸ್ವೀಕರಿಸಿ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದರು. ಶಾಸಕ ಎಚ್.ಪಿ.ಮಂಜುನಾಥ್, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ಚೌಡಿಕಟ್ಟೆ ಗ್ರಾಮಕ್ಕೆ ತೆರಳಿ ಆನಂದ್‌ರಾವ್ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವನ್ನಿಟ್ಟು ಅಂತಿಮ ನಮನ ಸಲ್ಲಿಸಿದರು.ಆನಂದರಾವ್ ಗಡಿ ಭದ್ರತಾ ಪಡೆಯಲ್ಲಿ ಕಳೆದ 7 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಯೋಧ ದೂರವಾಣಿ ಮೂಲಕ ಶನಿವಾರ ರಾತ್ರಿ 9.50ರಲ್ಲಿ ಚೌಡಿಕಟ್ಟೆಯಲ್ಲಿರುವ ತಾಯಿ ಲೀಲಾಬಾಯಿ ಮತ್ತು ತಂಗಿ ಪುಷ್ಪಬಾಯಿ ಅವರೊಂದಿಗೆ ಮಾತನಾಡಿದ್ದರು. ಆದರೆ ರಾತ್ರಿ 10.30ಕ್ಕೆ ಸೇನೆಯಿಂದ ಮಗನ ಸಾವಿನ ಆಘಾತದ ಸುದ್ದಿ ಬಂದಿತು ಎಂದು ಕುಟುಂಬದವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry