ಶುಕ್ರವಾರ, ಮೇ 14, 2021
21 °C

ಹುಟ್ಟೂರಲ್ಲಿ ಯೋಧ ಯೋಗಾನಂದ ಅಂತ್ಯಸಂಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಟ್ಟೂರಲ್ಲಿ ಯೋಧ ಯೋಗಾನಂದ ಅಂತ್ಯಸಂಸ್ಕಾರ

ಚನ್ನರಾಯಪಟ್ಟಣ: ಸಿಯಾಚಿನ್ ಪ್ರದೇಶದಲ್ಲಿ ಹೃದಯಾಘಾತದಿಂದ ಮೃತಪಟ್ಟ ತಾಲ್ಲೂಕಿನ ಬಾಗೂರು ಹೋಬಳಿ ಅಗ್ರಹಾರ ಗ್ರಾಮದ ಯೋಧ ಸಿ. ಯೋಗಾನಂದ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಮಂಗಳವಾರ ನೆರವೇರಿತು.ಹಾಸನದಿಂದ ಪಾರ್ಥಿವ ಶರೀರ ಹೊತ್ತ ವಾಹನ ಗ್ರಾಮಕ್ಕೆ ಬೆಳಿಗ್ಗೆ 11.15ಕ್ಕೆ ಆಗಮಿಸಿತು. ಸಾರ್ವಜನಿಕರು ಹಾಗೂ ಬಂಧುಗಳಿಗೆ ಪಾರ್ಥಿವ ಶರೀರ ದರ್ಶನಕ್ಕೆ ಕೆಲ ಹೊತ್ತು ಅವಕಾಶ ಕಲ್ಪಿಸಲಾಯಿತು.ಪೊಲೀಸರು ರಾಷ್ಟ್ರಗೀತೆ ನುಡಿಸಿ, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ನಮನ ಸಲ್ಲಿಸಿದರು. ಅದೇ ರೀತಿ, ಸೈನಿಕರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸೂಚಿಸಿದರು. ಸೇನೆಯ ಅಧಿಕಾರಿಗಳಾದ ಗಣೇಶ್ ಕುಮಾರ್, ರಾಧಾಕೃಷ್ಣನ್, ಪೊನ್ನಪ್ಪ, ಗುರುವಿಂದರ್ ಸಿಂಗ್, ರಾಜೇಂದ್ರ ಕುಮಾರ್ ಯೋಧನಿಗೆ ಪುಷ್ಪನಮನ ಸಲ್ಲಿಸಿದರು.ಯೋಗಾನಂದ ಅವರ ತಾಯಿ ಮಾಯಮ್ಮ, ಪತ್ನಿ ಲಕ್ಷ್ಮೀ, ಪುತ್ರಿ ಹರ್ಷಿತಾ, 11 ತಿಂಗಳ ಗಂಡು ಮಗು ಪರೀಕ್ಷಿತ್, ಇಬ್ಬರು ಸೋದರರು, ಮೂವರು ಸಹೋದರಿಯರು ಸೇರಿದಂತೆ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದ ಬಳಿಕ ಸಕಲ ವಿಧಿ- ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.ಸಿಯಾಚಿನ್ ಪ್ರದೇಶಕ್ಕೆ ಭಾನುವಾರ ಬೆಳಿಗ್ಗೆ ಆಹಾರದ ಪೊಟ್ಟಣಗಳನ್ನು ತೆಗೆದುಕೊಂಡು ಹೋಗುವಾಗ ಯೋಗಾನಂದ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಸಾವರಿಸಿಕೊಂಡು ಮತ್ತೆ ಸ್ವಲ್ಪ ದೂರ ನಡೆದಾಗ ಎದೆನೋವು ತೀವ್ರವಾಗಿ ಹೃದಯಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸಿಪಾಯಿಯಾಗಿ ಸೇನೆ ಸೇರಿದ್ದ ಅವರು, ಹವಾಲ್ದಾರ್ ಆಗಿ, ನಂತರ ಬಿಎಚ್‌ಎಂ (ಬ್ಯಾಟರಿ ಹವಾಲ್ದಾರ್ ಮೇಜರ್) ಹುದ್ದೆಗೆ ಬಡ್ತಿ ಪಡೆದಿದ್ದರು.ನಸೀರಾಬಾದ್, ಜಮ್ಮು ಮತ್ತು ಕಾಶ್ಮೀರ, ಹೈದರಾಬಾದ್ ಸೇರಿದಂತೆ ಏಳು ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಉತ್ತಮ ಕ್ರೀಡಾಪಟುವೂ ಆಗಿದ್ದ ಯೋಗಾನಂದ, ರಿಲೇ, ಗುಡ್ಡಗಾಡು ಓಟದಲ್ಲಿ ಉತ್ತಮ ಸಾಧನೆ ಮಾಡಿದ್ದರು.

'ಸರ್ಕಾರದಿಂದ ಅವರ ಕುಟುಂಬಕ್ಕೆ ಸಲ್ಲಬೇಕಾದ ಸವಲತ್ತುಗಳನ್ನು ಶೀಘ್ರದಲ್ಲೇ ಕೊಡಿಸಲಾಗುವುದು' ಎಂದು ಸೇನೆಯ ಸುಬೇದಾರ್ ಎ.ಕೆ. ರಂಜಿತ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.