ಭಾನುವಾರ, ಮೇ 22, 2022
22 °C

ಹುಟ್ಟೂರಿನಲ್ಲೇ ಬಂದಿಯಾದ ಶಾಸಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಧಾನಿಯಲ್ಲಿ ದಲಿತ ಸಂಘಟನೆಯೊಂದರ ಮೂಲಕ ಪರಿಚಿತರಾಗಿದ್ದ ವೈ.ಸಂಪಂಗಿ 100 ಕಿ.ಮೀ. ದೂರದವರೆಗೆ ಹೋಗಿ ರಾಜಕೀಯ ಎದುರಾಳಿಗಳನ್ನು ಮಣಿಸಿ ಶಾಸಕನಾಗಿದ್ದರು. ಆದರೆ, ಕೆಜಿಎಫ್‌ನ ನಿವೇಶನ ವಿವಾದದ ಕೆಸರಿನಲ್ಲಿ ಸಿಲುಕಿದ ಪರಿಣಾಮ ಈಗ ಹುಟ್ಟೂರಿನಿಂದ ಮೂರೇ ಕಿ.ಮೀ. ದೂರದಲ್ಲಿ ಸಜಾಬಂದಿ.ಹೌದು. ಸಂಪಂಗಿ  ಹುಟ್ಟಿ, ಬೆಳೆದದ್ದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಮೂರು ಕಿ.ಮೀ. ದೂರದಲ್ಲಿರುವ ಹೊಂಗಸಂದ್ರದಲ್ಲಿ. ಕೆಜಿಎಫ್ ಶಾಸಕನಾದರೂ ಹೊಂಗಸಂದ್ರದ ಒಡನಾಟವೇ ಹೆಚ್ಚು. ಶನಿವಾರ ತನ್ನ ಹುಟ್ಟೂರಿನ ಜನರೆದುರೇ ಅವರು ಜೈಲು ಬಂದಿಯಾದರು.ಲೋಕಾಯುಕ್ತ ಪೊಲೀಸರು ಶಾಸಕರನ್ನು ಕಾರಾಗೃಹಕ್ಕೆ ಕರೆತರುವ ಸುದ್ದಿ ತಿಳಿದ ಹೊಂಗಸಂದ್ರದ ನೂರಾರು ಜನರು ಅಲ್ಲಿಗೆ ಧಾವಿಸಿದ್ದರು. ಬಹುತೇಕರು ಸಂಪಂಗಿ ಸ್ಥಿತಿ ನೆನೆದು ಮರುಕಪಡುತ್ತಿದ್ದ ದೃಶ್ಯ ಕಂಡುಬಂತು.ಕುಸಿದುಬಿದ್ದ ತಾಯಿ: ವಿಷಯ ತಿಳಿದು ತೀವ್ರ ಉದ್ವೇಗಕ್ಕೆ ಒಳಗಾಗಿದ್ದ ಸಂಪಂಗಿ ಅವರ ತಾಯಿ ಲೋಕಾಯುಕ್ತ ವಿಶೇಷ ಕೋರ್ಟ್‌ವರೆಗೂ ಬಂದಿದ್ದರು. ನ್ಯಾಯಾಲಯ ಆದೇಶ ಪ್ರಕಟಿಸುತ್ತಿದ್ದಂತೆ ಅಲ್ಲಿಯೇ ಬಿಕ್ಕಿ ಬಿಕ್ಕಿ ಅತ್ತರು. ನಂತರ ಪುತ್ರನನ್ನು ಜೈಲಿಗೆ ಕರೆದೊಯ್ಯುತ್ತಿದ್ದ ಲೋಕಾಯುಕ್ತ ಪೊಲೀಸರ ವಾಹನದ ಹಿಂದೆಯೇ ತಮ್ಮ ವಾಹನದಲ್ಲಿ ಹೋದರು.ಸಂಪಂಗಿ ಅವರನ್ನು ಕಾರಾಗೃಹದ ವಶಕ್ಕೆ ಒಪ್ಪಿಸುತ್ತಿದ್ದ ಸಂದರ್ಭದಲ್ಲಿ ಜೋರಾಗಿ ಅಳಲಾರಂಭಿಸಿದ ಅವರ ತಾಯಿ, ಕೆಲ ಕ್ಷಣಗಳಲ್ಲಿ ಕುಸಿದುಬಿದ್ದರು. ನಂತರ ಕುಟುಂಬದವರು ನೀರು ಕುಡಿಸಿ ಸಮಾಧಾನಪಡಿಸಿದರು. ಬಳಿಕ ಪುತ್ರನ ಜೊತೆ ಮಾತನಾಡಲು ಅವಕಾಶ ನೀಡುವಂತೆ ಜೈಲಿನ ಅಧಿಕಾರಿಗಳಿಗೆ ಮನವಿ ಮಾಡಿದರು. ಆದರೆ, ಭೇಟಿ ವೇಳೆ ಮುಗಿದಿದ್ದರಿಂದ ಅವಕಾಶ ನಿರಾಕರಿಸಿದರು.ಸಂಪಂಗಿ ಅವರ ಪತ್ನಿ, ಪುತ್ರ ಮತ್ತು ಪುತ್ರಿ ಕೂಡ ಅಲ್ಲಿಗೆ ಬಂದಿದ್ದರು. ಶಾಸಕರನ್ನು ಜೈಲಿನೊಳಕ್ಕೆ ಕರೆದೊಯ್ಯುವ ವೇಳೆ ಕುಟುಂಬದವರೆಲ್ಲ ದುಃಖ ತಡೆಯಲಾರದೆ ಗಳಗಳನೆ ಅಳುತ್ತಿದ್ದ ದೃಶ್ಯ ಕಂಡುಬಂತು.ಎಂಟು ಗಂಟೆ ದುಡಿಮೆ: ಸಂಪಂಗಿ ಶಾಸಕರಾದರೂ ಜೈಲಿನಲ್ಲಿ ಇದ್ದಷ್ಟೂ ದಿನ ಕನಿಷ್ಠ ಎಂಟು ಗಂಟೆ ದುಡಿಯಲೇಬೇಕು. ಮೂರೂವರೆ ವರ್ಷ ಕಠಿಣ ಜೈಲು ಶಿಕ್ಷೆ ಹಿನ್ನೆಲೆಯಲ್ಲಿ ಅವರನ್ನು ಸಣ್ಣ ಸಜಾಬಂದಿಗಳ ಗುಂಪಿಗೆ ಸೇರಿಸಲಾಗುತ್ತದೆ. ಈ ಗುಂಪಿನ ಸಜಾಬಂದಿಗಳಿಗೆ ಕಾರಾಗೃಹದ ಆವರಣ ಶುಚಿಗೊಳಿಸುವ ಅಥವಾ ಅಡುಗೆ ಮನೆ ಕೆಲಸ ನೀಡಲಾಗುತ್ತದೆ.`ಕಠಿಣ ಶಿಕ್ಷೆಗೆ ಗುರಿಯಾದವರಿಗೆ ಯಾವುದೇ ವಿಶೇಷ ಸೌಲಭ್ಯ ನೀಡುವುದಿಲ್ಲ. ದಿನಕ್ಕೆ 8 ಗಂಟೆ ಕೆಲಸ ಮಾಡಬೇಕು. ದುಡಿಮೆಗೆ ಪ್ರತಿಯಾಗಿ ನಿಗದಿತ ಕೂಲಿ ನೀಡಲಾಗುತ್ತದೆ. ಪ್ರತಿ ಮಂಗಳವಾರ ಹೊಸ ಕೈದಿಗಳಿಗೆ ಕೆಲಸ ನಿಗದಿ ಮಾಡಲಾಗುವುದು~ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.ಸಂಪಂಗಿ ಸಜಾಬಂದಿ ಆಗಿರುವುದರಿಂದ ಮನೆಯಿಂದ ಊಟ ತರಿಸಿಕೊಳ್ಳುವುದಕ್ಕೂ ಅವಕಾಶವಿಲ್ಲ.  ಸಮವಸ್ತ್ರ ಧರಿಸುವುದೂ ಕಡ್ಡಾಯ. ದಿನವೊಂದರಲ್ಲಿ ಕುಟುಂಬದ ಸದಸ್ಯರು ಸೇರಿದಂತೆ 8ಜನರ ಭೇಟಿಗೆ ಮಾತ್ರವೇ ಅವಕಾಶ ಇರುತ್ತದೆ.ಕೋಣೆಯೊಳಗೆ ಚಿಂತಾಕ್ರಾಂತ: ಶನಿವಾರ ಸಂಜೆ ಆರು ಗಂಟೆಯ ಬಳಿಕ ಸಂಪಂಗಿ ಅವರನ್ನು ಮೂರು ಜನರಿರುವ ಕೊಠಡಿಯೊಳಕ್ಕೆ ಬಿಡಲಾಯಿತು. ಬಳಿಕ ಅವರು ಯಾರೊಂದಿಗೂ ಮಾತನಾಡಲಿಲ್ಲ. ಏಕಾಂಗಿಯಾಗಿ ಚಿಂತಿಸುತ್ತಾ ಕುಳಿತಿದ್ದರು ಎಂದು ಮೂಲಗಳು ತಿಳಿಸಿವೆ.ಸಂಜೆ ಅವರಿಗೆ ನಾಲ್ಕು ಚಪಾತಿ, 550 ಗ್ರಾಂ. ತೂಕದ ಮುದ್ದೆ, 210 ಗ್ರಾಂ.ನಷ್ಟು ಅನ್ನ, ಸಾಂಬಾರ್ ನೀಡಲಾಗಿದೆ.  ಅದನ್ನು  ಅವರು ಸ್ವೀಕರಿಸಿರುವುದು ಖಚಿತವಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.