ಶುಕ್ರವಾರ, ನವೆಂಬರ್ 15, 2019
21 °C

ಹುಡುಗಾಟದ ದಿನಗಳ ನೆನಪು...

Published:
Updated:

ಡಾ. ರಾಜ್‌ಕುಮಾರ್ ಮತ್ತು ಲಕ್ಷ್ಮೀ ಅಭಿನಯದ `ನಾ ನಿನ್ನ ಮರೆಯಲಾರೆ' ಚಿತ್ರೀಕರಣದ ಸಂದರ್ಭ. ಹುಡುಗಾಟದ ಕುತೂಹಲದಿಂದ ನಿತ್ಯವೂ ಚಿತ್ರೀಕರಣದ ಸ್ಥಳಕ್ಕೆ ತೆರಳುತ್ತಿದ್ದರು ಇಬ್ಬರು ಹುಡುಗರು. ಇಬ್ಬರೂ ದೊಡ್ಡವರ ಮಕ್ಕಳು. ಹೀಗಾಗಿ ಚಿತ್ರೀಕರಣ ಘಟಕಕ್ಕೆ ಬಂದಾಗ ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳಲಾಗುತ್ತಿತ್ತು. ಆದರೆ ಹಾಡೊಂದರ ಚಿತ್ರೀಕರಣದ ವೇಳೆಯಲ್ಲಿ ಮಾತ್ರ ನೀವು ಇರುವಂತಿಲ್ಲ ಎಂದು ಅಲ್ಲಿಂದ ಓಡಿಸಿದ್ದರು. ಏಕೆಂದರೆ ಅದು `ನನ್ನಾಸೆಯಾ ಹೂವೆ...' ರೊಮ್ಯಾಂಟಿಕ್ ಹಾಡಿನ ಚಿತ್ರೀಕರಣ. ಅಲ್ಲಿಂದ ಓಟಕಿತ್ತ ಇಬ್ಬರೂ ಸಿನಿಮಾ ನೋಡಿ ಮನೆ ಸೇರಿದ್ದರು! ಆ ಹುಡುಗರೇ ಶಿವರಾಜ್‌ಕುಮಾರ್ ಮತ್ತು ರವಿಚಂದ್ರನ್.



ಈ ಘಟನೆಯನ್ನು ಶಿವರಾಜ್‌ಕುಮಾರ್ ಮೆಲುಕು ಹಾಕಿದ್ದು ಬುಧವಾರ ನಡೆದ ರವಿಚಂದ್ರನ್ ಅವರ `ಕ್ರೇಜಿಸ್ಟಾರ್' ಚಿತ್ರದ ಹಾಡುಗಳ ಆಡಿಯೊ ಬಿಡುಗಡೆ ಸಮಾರಂಭದಲ್ಲಿ. ಅಂದು ರವಿಚಂದ್ರನ್ ಅವರ ತಂದೆ ದಿ. ವೀರಾಸ್ವಾಮಿ ಅವರ ಜನ್ಮದಿನ ಕೂಡ. ಚಿತ್ರರಂಗದ ಗಣ್ಯರು, ತಾರೆಯರು ನೆರೆದಿದ್ದ ಕಾರ್ಯಕ್ರಮದಲ್ಲಿ ಶಿವಣ್ಣ, ತಮ್ಮ ಹಾಗೂ ರವಿಚಂದ್ರನ್ ಅವರ ಬಾಲ್ಯದ ಒಡನಾಟವನ್ನು ನೆನಪಿಸಿಕೊಂಡರು.



`ಬೆಡ್‌ರೂಂ ಗೀತೆ ಚಿತ್ರೀಕರಿಸುವುದನ್ನು ನಾವು ನೋಡಬಾರದು ಎಂದು ಅಂದು ನಮ್ಮನ್ನು ಓಡಿಸಿದ್ದರು. ಆದರೆ ಇಂದು ಬೆಡ್‌ರೂಂ ಸಾಂಗ್‌ಗಳನ್ನು ಮಾಡುವುದರಲ್ಲಿ ರವಿಚಂದ್ರನ್ ಎತ್ತಿದ ಕೈ' ಎಂದು ನಗುವಿನ ಅಲೆ ಎಬ್ಬಿಸಿದರು. ಬಾಲ್ಯದ ದಿನಗಳಲ್ಲಿನ ಒಡನಾಟ ಮತ್ತು ಹುಡುಗಾಟ ಇಬ್ಬರಲ್ಲೂ ಇಂದಿಗೂ ಹಾಗೆಯೇ ಇದೆ ಎಂದರು.



ವೀರಾಸ್ವಾಮಿ ಮತ್ತು ರಾಜ್‌ಕುಮಾರ್ ಕುಟುಂಬಗಳ ನಡುವಿನ ಸ್ನೇಹ ಬಾಂಧವ್ಯ ದೀರ್ಘಕಾಲದ್ದು. ರವಿಚಂದ್ರನ್ ಅವರಿಂದ ಕ್ಲಾಪ್ ಮಾಡಿಸಿದ ಸಿನಿಮಾ ಸೋಲುವುದಿಲ್ಲ ಎನ್ನುವುದು ಚಿತ್ರರಂಗದ ಅನೇಕರ ನಂಬಿಕೆ. ಪುನೀತ್ ರಾಜ್‌ಕುಮಾರ್ ಸಿನಿಮಾಗಳ ಚಿತ್ರೀಕರಣ ಶುರುವಾಗುವುದೇ ರವಿಚಂದ್ರನ್ ಕ್ಲಾಪ್ ಮಾಡುವ ಮೂಲಕ. ಮಾರುಕಟ್ಟೆಗೆ ಚಲಾವಣೆಗೆ ಬಂದ ಹೊಸ ನೋಟು ತಮಗೆ ಸಿಕ್ಕರೆ ವೀರಾಸ್ವಾಮಿ ಅದನ್ನು ಪಾರ್ವತಮ್ಮ ಅವರಿಗೆ ನೀಡುತ್ತಿದ್ದರಂತೆ. ಅದು ಒಂದು ರೂಪಾಯಿ ನೋಟು ಇರಬಹುದು, ನೂರು ರೂಪಾಯಿ ಇರಬಹುದು. ಹೀಗಾಗಿ ಈ ಕಾರ್ಯಕ್ರಮ ರವಿಚಂದ್ರನ್ ಕಾರ್ಯಕ್ರಮವಲ್ಲ. ನಮ್ಮ ಕುಟುಂಬದ ಕಾರ್ಯಕ್ರಮ ಎಂದರು ಶಿವರಾಜ್‌ಕುಮಾರ್.



ರವಿಚಂದ್ರನ್ ಮತ್ತು ಶಿವರಾಜ್‌ಕುಮಾರ್ ಜೊತೆಯಾಗಿ ನಟಿಸಿರುವ ಏಕೈಕ ಚಿತ್ರ `ಕೋದಂಡರಾಮ'. ನಟಿಸಬೇಕಿರುವ ಮತ್ತೊಂದು ಚಿತ್ರ ಹಲವು ವರ್ಷಗಳಿಂದ ಹಾಗೆಯೇ ಬಾಕಿ ಉಳಿದುಕೊಂಡಿದೆ ಎಂಬುದನ್ನು ಅವರು ನೆನಪಿಸಿಕೊಂಡರು.



ಚಿತ್ರಗಳು: ಕೆ.ಎನ್. ನಾಗೇಶ್‌ಕುಮಾರ್

ಪ್ರತಿಕ್ರಿಯಿಸಿ (+)