ಹುಡುಗಿಯರಿಗೆ ಕಿಚಾಯಿಸಿದರೆ ಹುಷಾರ್‌ !

7

ಹುಡುಗಿಯರಿಗೆ ಕಿಚಾಯಿಸಿದರೆ ಹುಷಾರ್‌ !

Published:
Updated:
ಹುಡುಗಿಯರಿಗೆ ಕಿಚಾಯಿಸಿದರೆ ಹುಷಾರ್‌ !

ಚಿಕ್ಕಬಳ್ಳಾಪುರ: ಬಸ್‌ಗಳಲ್ಲಿ, ರಸ್ತೆ ಬದಿಗಳಲ್ಲಿ ಕೆಲ ಕಿಡಿಗೇಡಿಗಳು ಯುವತಿ­ಯರನ್ನು ಕೀಟಲೆ ಮಾಡುತ್ತಾರೆ. ದೈಹಿಕ ಹಲ್ಲೆಗೂ ಮುಂದಾಗುತ್ತಾರೆ. ಒಂದು ವೇಳೆ ಅವರು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಅದೇ ರೀತಿ ತೊಂದರೆ ನೀಡಲು ಪ್ರಯತ್ನಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಕಾರಣ, ಪ್ರೌಢ­ಶಾಲಾ ವಿದ್ಯಾರ್ಥಿನಿಯರು ಕರಾಟೆ ಮೂಲಕ ತಕ್ಕ ಉತ್ತರ ನೀಡುತ್ತಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಪ್ರೌಢ­ಶಾಲಾ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲು ಮುಂದಾಗಿದೆ. ಅದಕ್ಕಾಗಿ ರಾಜ್ಯದ ಎಲ್ಲ ಪ್ರೌಢಶಾಲೆ­ಗಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ಕರಾಟೆ ತರಬೇತಿ ನೀಡುತ್ತಿದೆ. ಕರಾಟೆ ಕಲಿತ ಆ ಶಿಕ್ಷಕರು ತಮ್ಮ ಶಾಲೆಗಳ ವಿದ್ಯಾರ್ಥಿನಿ­ಯರಿಗೆ ಕರಾಟೆ ತರಬೇತಿ ನೀಡುವುದ­ಲ್ಲದೆ ಸ್ವಯಂ ರಕ್ಷಣಾ ಸಾಮರ್ಥ್ಯವನ್ನು ಬೆಳೆಸುತ್ತಾರೆ.ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿ­ಯಾನದ ಈ ತರಬೇತಿಯಲ್ಲಿ ರಾಜ್ಯದ 4,600 ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಿದ್ದು, ಕರಾಟೆ ತರಬೇತಿ ಶಿಬಿರದಲ್ಲಿ ಶಿಕ್ಷಕರು ಒಂದು ದಿನವೂ ತಪ್ಪಿಸದೇ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ. ಕರಾಟೆ ಪಟುಗಳ ನೆರವನ್ನು ಪಡೆದಿರುವ ಅಭಿಯಾನದ ಅಧಿಕಾರಿಗಳು ಶಿಕ್ಷಕರಿಗೆ ಸೆಪ್ಟೆಂಬರ್‌ 17ರಿಂದ 28ರವರೆಗೆ ತರಬೇತಿ ಪಡೆಯುಲು ವ್ಯವಸ್ಥೆ ಮಾಡಿದ್ದಾರೆ.ಕರಾಟೆಪಟುಗಳಿಂದ ತರಬೇತಿ ಪಡೆದ ಶಿಕ್ಷಕರು ಸೆಪ್ಟೆಂಬರ್‌ 30ರಿಂದ ತಮ್ಮ ಶಾಲೆಯ ವಿದ್ಯಾರ್ಥಿನಿಯರಿಗೆ ತರಬೇತಿ ತರಗತಿಗಳನ್ನು ಆರಂಭಿಸ­ಬೇಕು. ಎಷ್ಟೇ ಕಾರ್ಯ ಒತ್ತಡವಿದ್ದರೂ ವಾರಕ್ಕೆ ಎರಡು ಅವಧಿಯಂತೆ ವಿದ್ಯಾರ್ಥಿನಿ­ಯರಿಗೆ ತರಬೇತಿ ನೀಡುವುದು ಕಡ್ಡಾಯ.ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿಯೂ ಪ್ರತಿ ದಿನ ಎರಡು ಗಂಟೆಗಳ ಕಾಲ ಶಿಕ್ಷಕರಿಗೆ ಕರಾಟೆ ತರಬೇತಿ ನೀಡಲಾಗುತ್ತಿದ್ದು, ಸ್ವಯಂ ರಕ್ಷಣೆ ಮಾಡಿಕೊಳ್ಳುವ ಬಗೆಯನ್ನು ತಿಳಿಸಲಾಗುತ್ತಿದೆ. ಪ್ರೌಢಶಾಲಾ ವಿದ್ಯಾರ್ಥಿನಿ­ಯರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗದಂತೆ ತಡೆಯಲು ಮತ್ತು ಅಪಾಯ ಎದುರಾ­ದಾಗ ಸಮರ್ಥವಾಗಿ ಎದುರಿಸಲು ಈ ಕರಾಟೆ ತರಬೇತಿ ಶಿಬಿರ ನಡೆಸಲಾಗು­ತ್ತಿದೆ. ಶಿಕ್ಷಣ ಇಲಾಖೆಯು ಇದಕ್ಕೆ ತುಂಬ ಮಹತ್ವ ಕೊಟ್ಟಿದೆ ಎಂದು ಅಖಿಲ ಕರ್ನಾಟಕ ಸ್ಫೋರ್ಟ್ಸ್ ಕರಾಟೆ ಅಸೋಸಿ­ಯೇಷನ್‌ ಕಾರ್ಯದರ್ಶಿ ಅಲ್ತಾಫ್‌ ಪಾಷಾ ’ಪ್ರಜಾವಾಣಿ’ಗೆ ತಿಳಿಸಿದರು.

ಪ್ರೌಢಶಾಲಾ ವಿದ್ಯಾರ್ಥಿನಿಯರು ಮನೆಯಿಂದ ಬರುವಾಗ ಅಥವಾ ಹಿಂದಿರುಗುವಾಗ ಬೇಕೆಂದೇ ಕೆಲ ಕಿಡಿಗೇಡಿಗಳು ಕೀಟಲೆ ಮಾಡುತ್ತಾರೆ. ಕೆಲವರು ದೈಹಿಕವಾಗಿ ಹಿಂಸೆ ನೀಡಲು ಮುಂದಾಗುತ್ತಾರೆ. ಅಂತಹ ಘಟನೆ­ಗಳನ್ನು ಯಾವುದೆ ಕಾರಣಕ್ಕೂ ಸಹಿಸಿ­ಕೊಳ್ಳಬಾರದು ಎಂಬ ಉದ್ದೇಶದಿಂದ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲು ಶಿಕ್ಷಣ ಇಲಾಖೆಯು ಮುಂದಾಗಿದೆ ಎಂದು ಅವರು ಹೇಳಿದರು.ತರಬೇತಿ ಶಿಬಿರವನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ. ತರಬೇತಿಗೆ ಹಾಜರಾದ ಶಿಕ್ಷಕರ ದಾಖಲಾತಿ, ಶಿಕ್ಷಕರ ಸಂಖ್ಯೆ, ಖರ್ಚು ವೆಚ್ಚ, ತರಬೇತು­ದಾರರ ವಿವರ, ತರಬೇತಿ ಪರಿಣಾಮದ ಕುರಿತ ಮಾಹಿತಿಯನ್ನು ಛಾಯಾಚಿತ್ರ ಸಮೇತ ದಾಖಲೀಕರಣ ಮಾಡಿ, ಅಕ್ಟೋಬರ್‌ 3ರೊಳಗೆ ವರದಿ ಸಲ್ಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಪಿ.ಮುನಿಸ್ವಾಮಿ ಹೇಳಿದರು.50ರ ವಯಸ್ಸಿನಲ್ಲಿರುವ ಬಹುತೇಕ ದೈಹಿಕ ಶಿಕ್ಷಣ ಶಿಕ್ಷಕರು ಈ ಕರಾಟೆ ತರಬೇತಿ ಶಿಬಿರದಿಂದ ಉತ್ತಮ ವ್ಯಾಯಾಮವೂ ಆಗುತ್ತಿದೆ ಎನ್ನುತ್ತಿದ್ದಾರೆ. ‘ಅಂಗಾಂಗಗಳನ್ನು ಮೊದಲಿನಂತೆ ಮಣಿಸುವುದು ಮತ್ತು ದಂಡಿಸುವುದು ಕಷ್ಟ. ಮೈಕೈ ನೋವು ಕೊಂಚ ಇದೆಯಾದರೂ ಕರಾಟೆ ಕಲಿಯುವ ಉತ್ಸಾಹವಿದೆ’ ಎಂದು ದೈಹಿಕ ಶಿಕ್ಷಣ ಶಿಕ್ಷಕ ರಸೂಲ್ ಖಾನ್‌ ಹೇಳಿದರು.ವಿದ್ಯಾರ್ಥಿನಿಯರಿಗೆ ತರಬೇತಿ ನೀಡುವ ಉದ್ದೇಶದಿಂದ ನಮಗೆ ತರಬೇತಿ ನೀಡಲಾಗುತ್ತಿರುವುದು ನಿಜಕ್ಕೂ ಉತ್ತಮ ಅವಕಾಶ. ತರಬೇತಿ ಶಿಬಿರವನ್ನು ಸದ್ಬಳಕೆ ಮಾಡಿಕೊಳ್ಳ­ಲೆಂದೇ ಪ್ರತಿ ದಿನವೂ ತಪ್ಪದೇ ಶಿಬಿರಕ್ಕೆ ಹಾಜರಾಗುತ್ತಿದ್ದೇನೆ. ವಿದ್ಯಾರ್ಥಿನಿ­ಯರಿಗೆ ಉತ್ತಮ ಮಾರ್ಗದರ್ಶನ ನೀಡುತ್ತೇನೆ ಎಂಬ ವಿಶ್ವಾಸ ನನಗಿದೆ’ ಎಂದು ದೈಹಿಕ ಶಿಕ್ಷಣ ಶಿಕ್ಷಕ ಪಿ.ಸಿ.ಮಾರುತಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry