ಗುರುವಾರ , ಜೂನ್ 24, 2021
28 °C

ಹುಣಸಗಿ: ಕಾಲುವೆ ನವೀಕರಣ ಟೆಂಡರ್:ನಡೆಯದ ಸಭೆ: ರೈತರ ಆತಂಕ

ಪ್ರಜಾವಾಣಿ ವಾರ್ತೆ/ಭೀಮಶೇನರಾವ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಹುಣಸಗಿ: ಮಹತ್ವದ ನೀರಾವರಿ ಯೋಜನೆಗಳಲ್ಲಿ ಒಂದಾಗಿರುವ, ಕೃಷ್ಣಾ ಅಚ್ಚುಕಟ್ಟು ಪ್ರದೇಶದ  ರೈತರ ಜೀವನಾಡಿಯಾಗಿರುವ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ನವೀಕರಣಕ್ಕೆ ಟೆಂಡರ್ ಕರೆಯಲಾಗಿದೆ ಎಂದು ಸಂತೋಷದಲ್ಲಿರುವ ರೈತರ ಸಂತಸಕ್ಕೆ ಮತ್ತೆ ಆತಂಕ ಎದುರಾಗಿದೆ.ಕಾಲುವೆ ಪುನರ್ ನವೀಕರಣಕ್ಕಾಗಿ ಈಗಾಗಲೇ ಸುಮಾರು ರೂ.193 ಕೋಟಿ  ವೆಚ್ಚದಲ್ಲಿ  ಮೂರು ಪ್ಯಾಕೇಜ್‌ನಲ್ಲಿ ಟೆಂಡರ್ ಕರೆಯಲಾಗಿದೆ. ಆದರೆ ಒಂದು ಮೂಲದ ಪ್ರಕಾರ ಈ ಕಾಮಗಾರಿ ಪ್ರಾರಂಭವಾಗಬೇಕಾದರೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿರುವ ತಾಂತ್ರಿಕ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಿದ ನಂತರವೇ ಈ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತಿದೆ.ಇದರಿಂದಾಗಿ ಈಗಾಗಲೇ ಎರಡು ಮೂರು ಬಾರಿ ಸಭೆ ದಿನಾಂಕ ನಿಗದಿಯಾಗಿ ಮುಂದೂಡಿದ ಪ್ರಸಂಗಳು ನಡೆದಿದೆ ಎನ್ನಲಾಗುತ್ತದೆ.ಈಗಾಗಲೇ ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಸಮರ್ಪಕವಾಗಿ ನೀರು ಬರದೇ ಇದ್ದುದರಿಂದ ನೂರಾರು ಕೋಟಿ ಆಹಾರ ಉತ್ಪಾದನೆಯಲ್ಲಿ ಖೊತಾ ಬಿದ್ದಂತಾಗಿದೆ. ಪ್ರತಿ ಗ್ರಾಮದಲ್ಲಿ ನೂರಾರು ಜನರು ಬೆಂಗಳೂರು, ಪುಣೆ, ಮುಂಬೈ ನಗರಗಳಿಗೆ ಗುಳೆ ಹೋಗುತ್ತಿರುವುದು ಸಾಮಾನ್ಯವಾಗಿದೆ.ಒಂದು ವೇಳೆ ಮುಂಗಾರು ಹಂಗಾಮಿಗೂ ನೀರು ಒದಗಿಸುವಲ್ಲಿ ವಿಳಂಬವಾದರೆ ರೈತರ ಸ್ಥಿತಿ ದೇವರೇ ಗತಿ ಎನ್ನುವಂತಾಗುತ್ತದೆ ಎಂದು ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಕಾರ್ಯದರ್ಶಿ ರಾಘವೇಂದ್ರ ಕಾಮನಟಗಿ ಮತ್ತು ಪ್ರಗತಿಪರ ರೈತರಾದ ರುದ್ರಗೌಡ ಗುಳಬಾಳ ಆಂತಕ ವ್ಯಕ್ತಪಡಿಸಿದ್ದಾರೆ.ಸುಮಾರು 193 ಕೋಟಿ ರೂ ಟೆಂಡರ್ ಕರೆದಾಗ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮಧ್ಯದ ಜಟಾಪಟಿಯಿಂದ ಕೋರ್ಟ ಮೆಟ್ಟಿಲೇರಿತ್ತು. ಇದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದರೂ. ಮತ್ತೆ ಈಗ ಆತಂಕ ಎದುರಿಸುವಂತಾಗಿದೆ. ಒಂದು ದಿನ ತಡವಾದರೂ ಮುಂಗಾರು ಹಂಗಾಮಿಗೆ ನೀರು ಹರಿಸುವಲ್ಲಿ ಪರಿಣಾಮ ಎದುರಿಸಬೇಕಾಗಿದೆ ಎಂದು ಮಾತನಾಡುತ್ತಿದ್ದಾರೆ.ಒಂದು ಮೂಲದ ಪ್ರಕಾರ ಸುಮಾರು ರೂ. ಐದು ಕೋಟಿಗಿಂತ ಮೆಲ್ಪಟ್ಟ ಕಾಮಗಾರಿಗಳಿಗೆ ಈ ನಿಗಮದ ಮಂಡಳಿ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕಾಗುತ್ತದೆ. ಮುಖ್ಯಮಂತ್ರಿಗಳು ಈ ಮಂಡಳಿಯ ಅಧ್ಯಕ್ಷರಾಗಿದ್ದು, ಜಲಸಂಪನ್ಮೂಲ ಸಚಿವರು ಇದರ ಉಪಾಧ್ಯಕ್ಷರಾಗಿರುತ್ತಾರೆ. ತಾಂತ್ರಿಕ ಇಲಾಖೆಯ ಇಂತಹ ಸಭೆಯಲ್ಲಿ ಅನುಮೋದನೆ ಸೂಚಿಸಬೇಕಾಗಿದ್ದರಿಂದ ಯಾವ ಕಾರಣಕ್ಕಾಗಿ ಸಭೆ ಮುಂದೂಡಲಾಗುತ್ತಿದೆ ಎಂದು ತಿಳಿಯುತ್ತಿಲ್ಲ.ಸರ್ಕಾರದ ವಿಳಂಬ ಧೋರಣೆಗೆ ರೈತರು ಬಲಿಯಾಗುವಂತಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ಇನ್ನಾದರು ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವರು ತಮ್ಮ ಅಮೂಲ್ಯವಾದ ಕೆಲ ಸಮಯವನ್ನು ರೈತರಿಗಾಗಿ ಮೀಸಲಿಟ್ಟು ಈ ಕಾಮಗಾರಿ ಪ್ರಾರಂಭವಾಗಲು ಅನುವು ಮಾಡಿಕೊಡಲಿ ಎಂದು ಕೃಷ್ಣಾ ಅಚ್ಚುಕಟ್ಟು  ಪ್ರದೇಶದ ರೈತರು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.