ಹುಣಸೂರು ವಿದ್ಯಾರ್ಥಿಗಳ ಕೊಲೆ ಪ್ರಕರಣ: ಎಂಟು ಮಂದಿ ಬಂಧನ

ಮಂಗಳವಾರ, ಜೂಲೈ 23, 2019
20 °C

ಹುಣಸೂರು ವಿದ್ಯಾರ್ಥಿಗಳ ಕೊಲೆ ಪ್ರಕರಣ: ಎಂಟು ಮಂದಿ ಬಂಧನ

Published:
Updated:

ಮೈಸೂರು: ಹುಣಸೂರಿನ ಇಬ್ಬರು ವಿದ್ಯಾರ್ಥಿಗಳ ಅಪಹರಣ ಮತ್ತು ಕೊಲೆ ಪ್ರಕರಣವು ಅಂತಿಮ ಘಟ್ಟ ತಲುಪಿದ್ದು, ವಿಶೇಷ ಪೊಲೀಸ್ ತಂಡ ಎಂಟು ಮಂದಿ ಯುವಕರನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ಕಬ್ಬಿಣ ಮತ್ತು ಸಿಮೆಂಟ್ ವ್ಯಾಪಾರಿ ಅಶೋಕ್‌ಕುಮಾರ್ ಪುತ್ರ ಸುಧೀಂದ್ರ ಹಾಗೂ ಪ್ರಾವಿಷನ್ ಸ್ಟೋರ್‌ನ ಮಾಲೀಕ ಶ್ರೀನಾಥ್ ಪುತ್ರ ವಿಘ್ನೇಶ್ ಕೊಲೆ ಪ್ರಕರಣದ ಸಂಪೂರ್ಣ ವಿವರ ಅತೀ ಶೀಘ್ರದಲ್ಲಿಯೇ ಹೊರಬೀಳುವ ಸಾಧ್ಯತೆ ಇದೆ. ಆರೋಪಿಗಳು ಸುಧೀಂದ್ರ ಹಾಗೂ ವಿಘ್ನೇಶ್‌ರನ್ನು ಜೂ. 8 ರಂದು ಅಪಹರಿಸಿ 5 ಕೋಟಿ ರೂಪಾಯಿ ಒತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ ಜೂನ್ 12 ರಂದು  ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಳಿ ಸುಧೀಂದ್ರ ಮತ್ತು ವಿಘ್ನೇಶ್ ಶವಗಳು ಪತ್ತೆಯಾಗಿದ್ದವು. ಆಗ ಸರ್ಕಾರ ವಿಶೇಷ  ಪೊಲೀಸ್ ತಂಡವನ್ನು ರಚಿಸಿತು.ಆರೋಪಿಗಳು: ಹುಣಸೂರು, ಮೈಸೂರಿನ ಉದಯಗಿರಿ ಮತ್ತು ಮಂಡಿ ಮೊಹಲ್ಲಾದ ಒಟ್ಟು ಎಂಟು ಮಂದಿ ಯುವಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ಬಲ್ಲ ಮೂಲಗಳು ತಿಳಿಸಿವೆ. ಹುಣಸೂರಿನ ಇಬ್ಬರು ಯುವಕರು ಈ ಪ್ರಕರಣದ ರೂವಾರಿಗಳಾಗಿದ್ದು, ಇವರೊಂದಿಗೆ  ಆರು ಮಂದಿ ಸಹಕರಿಸಿದ್ದರು ಎಂದು ತಿಳಿದುಬಂದಿದೆ.ಮೊಬೈಲ್ ಸುಳಿವು: ಮೊಬೈಲ್ ಕರೆಯ ಜಾಡು ಹಿಡಿದ ವಿಶೇಷ  ಪೊಲೀಸ್ ತಂಡ ಆರೋಪಿಗಳನ್ನು ಬೆನ್ನಟ್ಟಿ ಕೊನೆಗೂ  ಅವರನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದೆ. ಹುಣಸೂರು ತಾಲ್ಲೂಕಿನ ವ್ಯಕ್ತಿಯೊಬ್ಬರು ತಮ್ಮ  ಮೊಬೈಲ್‌ಅನ್ನು ಸಿಮ್ ಕಾರ್ಡ್ ಸಹಿತ ರಿಪೇರಿಗೆ ಕೊಟ್ಟಿದರು. ಆರೋಪಿಗಳು ವಿದ್ಯಾರ್ಥಿಗಳನ್ನು ಅಪಹರಿಸಿದ ನಂತರ ಇದೇ ಮೊಬೈಲ್ ಬಳಸುತ್ತಿದ್ದರು. ಈ ಕರೆಗಳ ಜಾಡು ಹಿಡಿದ ಪೊಲೀಸರಿಗೆ ಮೊಬೈಲ್ ಹೊಂದಿದ ವ್ಯಕ್ತಿ ರಿಪೇರಿಗೆ ಕೊಟ್ಟಿದ್ದ ವಿಷಯ ತಿಳಿಸಿದ. ಮೊಬೈಲ್ ರಿಪೇರಿ ಮಾಡುವವನ್ನು ವಿಚಾರಣೆಗೆ ಒಳಪಡಿಸಿದಾಗ ಇಡೀ ಪ್ರಕರಣದ ರಹಸ್ಯ ಬಯಲಾಯಿತು.ಆರೋಪಿಗಳು ಸುಧೀಂದ್ರನ ಕುಟುಂಬದ ವ್ಯವಹಾರವನ್ನು ಹತ್ತಿರದಿಂದ ಬಲ್ಲವರಾಗಿದ್ದರು. ಸುಧೀಂದ್ರ ಮತ್ತು ವಿಘ್ನೇಶ್ ಮೈಸೂರಿನ ಮಹಾಜನ   ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದರು. ಜೂ.8ರಂದು ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ಇಬ್ಬರೂ ಬಂದಿದ್ದರು.  ಮಧ್ಯಾಹ್ನ 12.55ಕ್ಕೆ ಅಪಹರಣವಾಗಿತ್ತು. ನಂತರ ಆರೋಪಿಗಳು ವಿಘ್ನೇಶ್ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಅಲ್ಲದೆ ಒತ್ತೆ ಹಣ ನೀಡುವಂತೆ  ಮೋಹನ್‌ಕುಮಾರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಮುಖಾಂತರ ಪತ್ರವನ್ನು ರವಾನಿಸಿದ್ದರು. ತದನಂತರ ಅಪಹರಣಕಾರರು ಪೋಷಕರನ್ನು ಸಂಪರ್ಕ ಮಾಡಿರಲಿಲ್ಲ.ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಆರೋಪಿಗಳ ಬಗ್ಗೆ ಯಾವ ಸುಳಿವೂ ದೊರೆತಿರಲಿಲ್ಲ. ಇದನ್ನು  ಸವಾಲಾಗಿ ಸ್ವೀಕರಿಸಿದ   ಪೊಲೀಸ್ ಇಲಾಖೆ ಪ್ರಕರಣವನ್ನು ಭೇದಿಸಲು ಐದು ವಿಶೇಷ ತಂಡಗಳನ್ನು ರಚಿಸಿತ್ತು. ವಿಶೇಷ ತಂಡ ಮತ್ತು ಬೆಂಗಳೂರು, ಮೈಸೂರು ಪೊಲೀಸರು, ಸಿಸಿಬಿ  ಪೊಲೀಸರು ಆರೋಪಿಗಳ ಪತ್ತೆಗಾಗಿ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿದ್ದರು. ಹುಣಸೂರು ಪಟ್ಟಣ, ಕಾಲೇಜು ಸೇರಿದಂತೆ ವಿವಿಧೆಡೆ ತೆರಳಿ ವಿಚಾರಣೆ  ನಡೆಸಿ, ಸಾಕ್ಷಿಗಳನ್ನು ಕಲೆ ಹಾಕಿದ್ದರು. ~ಹುಣಸೂರಿನ ಇಬ್ಬರು ವಿದ್ಯಾರ್ಥಿಗಳ  ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡಿದೆ~ ಎಂದು ಎಡಿಜಿಪಿ (ಕಾನೂನು  ಮತ್ತು ಸುವ್ಯವಸ್ಥೆ) ಆರ್.ಕೆ. ದತ್ತ ತಿಳಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry