ಹುಣಸೂರು ವಿದ್ಯಾರ್ಥಿಗಳ ಕೊಲೆ ಪ್ರಕರಣ: ಸಿಕ್ಕಿಬಿದ್ದ ಹಂತಕರು

7

ಹುಣಸೂರು ವಿದ್ಯಾರ್ಥಿಗಳ ಕೊಲೆ ಪ್ರಕರಣ: ಸಿಕ್ಕಿಬಿದ್ದ ಹಂತಕರು

Published:
Updated:
ಹುಣಸೂರು ವಿದ್ಯಾರ್ಥಿಗಳ ಕೊಲೆ ಪ್ರಕರಣ: ಸಿಕ್ಕಿಬಿದ್ದ ಹಂತಕರು

ಬೆಂಗಳೂರು: ರಾಜ್ಯದ ಜನರನ್ನು ತಲ್ಲಣಗೊಳಿಸಿದ್ದ ಹುಣಸೂರಿನ ಬಿಬಿಎಂ ವಿದ್ಯಾರ್ಥಿಗಳ ಜೋಡಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣದಲ್ಲಿ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್‌ಡಿ) ಸಂಘಟನೆಯ ಕೈವಾಡವಿರುವುದು ತನಿಖೆಯಿಂದ ದೃಢಪಟ್ಟಿದೆ.`ಅಲ್ಲದೇ ಪೊಲೀಸರು ಬಂಧಿಸಿರುವ ಆರು ಆರೋಪಿಗಳು ಕೆಎಫ್‌ಡಿ ಸಂಘಟನೆಯ ಸದಸ್ಯರೇ ಆಗಿದ್ದಾರೆ. ಸಂಘಟನೆಯನ್ನು ಬಲಪಡಿಸಲು ಅಗತ್ಯವಿದ್ದ ಹಣ ಗಳಿಕೆಯ ಉದ್ದೇಶಕ್ಕಾಗಿಯೇ ವಿದ್ಯಾರ್ಥಿಗಳನ್ನು ಅಪಹರಿಸಿದ್ದಾಗಿ ಬಂಧಿತರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ~ ಎಂದು ಗೃಹ ಸಚಿವ ಆರ್.ಅಶೋಕ ತಿಳಿಸಿದರು.ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಚಿವರು ನೀಡಿದ ವಿವರ ಇಲ್ಲಿದೆ;ಹುಣಸೂರಿನ ಆದಿಲ್ ಉರುಫ್ ಆದಿಲ್ ಪಾಷಾ (23), ಅತಾವುಲ್ಲಾ ಖಾನ್ ಉರುಫ್ ಅಟ್ಟು (23), ಮೈಸೂರಿನ ರಾಜೀವ್‌ನಗರದ ಅಮೀನ್ ಉರುಫ್ ಸೈಯದ್ ಅಮೀನ್ (23), ರೆಹಮಾನ್ (25), ಕೌಸರ್ ಉರುಫ್ ಮಹಮ್ಮದ್ ಕೌಸರ್ (26) ಮತ್ತು ಸಫೀರ್ ಅಹಮ್ಮದ್ ಉರುಫ್ ಸಫೀರ್ (34) ಬಂಧಿತರು. ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಶಂಕೆ ಇದೆ. ಆ ಬಗ್ಗೆ ತನಿಖೆ ಮುಂದುವರೆದಿದೆ.ಅಪಹರಣಗೊಂಡಿದ್ದ ವಿದ್ಯಾರ್ಥಿಗಳ ಪೋಷಕರು ನೀಡುವ ಹಣದಲ್ಲಿ ಅರ್ಧದಷ್ಟನ್ನು ಕೆಎಫ್‌ಡಿಯ ಸಂಘಟನಾ ಕಾರ್ಯಕ್ಕೆ ಬಳಸುವ ಉದ್ದೇಶ ಆರೋಪಿಗಳಿಗಿತ್ತು. ಈ ಅಂಶ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಮೈಸೂರಿನಲ್ಲಿ 2009ರಲ್ಲಿ ಕೋಮುಗಲಭೆ ಸಂಭವಿಸಿದ ಸಂದರ್ಭದಲ್ಲಿ ನಡೆದ ಜೈಲ್ ಭರೋ ಚಳವಳಿಯಲ್ಲೂ ಈ ಆರೋಪಿಗಳು ಪಾಲ್ಗೊಂಡಿದ್ದರು. ಈ ಸಂಬಂಧ ಆದಿಲ್ ಮತ್ತು ಅತಾವುಲ್ಲಾ ಖಾನ್‌ನನ್ನು ಹಿಂದೆಯೇ ಬಂಧಿಸಲಾಗಿತ್ತು. ಗುಲ್ಬರ್ಗ ಜೈಲಿನಲ್ಲಿದ್ದ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬೆಂಗಳೂರಿನ ವಿಲ್ಸನ್‌ಗಾರ್ಡನ್‌ನಲ್ಲಿ ಈ ಹಿಂದೆ ನಡೆದಿದ್ದ ಕೆಎಫ್‌ಡಿ ಸಂಘಟನೆಯ ಸಭೆಗಳಲ್ಲೂ ಈ ಆರೋಪಿಗಳು ಪಾಲ್ಗೊಂಡಿದ್ದರು.ಆರೋಪಿಗಳು ಈ ಹಿಂದೆಯೂ ಸುಧೀಂದ್ರನನ್ನು ಅಪಹರಿಸಲು ಎರಡು ಮೂರು ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು. ಆದರೂ ಅಪಹರಣದ ಪ್ರಯತ್ನ ಮುಂದುವರೆಸಿದ್ದ ಆರೋಪಿಗಳು ಜೂನ್ 8ರಂದು ಆತನ ಕಾಲೇಜಿಗೆ ಬಂದು ಸೂಚನಾ ಫಲಕದಲ್ಲಿ ಅಳವಡಿಸಿದ್ದ ಪರೀಕ್ಷಾ ವೇಳಾಪಟ್ಟಿಯನ್ನು ಪರಿಶೀಲಿಸಿದ್ದರು. ಪರೀಕ್ಷೆ ಬರೆಯಲು ಸುಧೀಂದ್ರ ಬಂದೇ ಬರುತ್ತಾನೆ ಎಂಬ ಅಂಶವನ್ನು ಪರೀಕ್ಷಾ ವೇಳಾಪಟ್ಟಿಯಿಂದ ಖಚಿತಪಡಿಸಿಕೊಂಡ ಆರೋಪಿಗಳು ಆತನಿಗಾಗಿ ಕಾಲೇಜಿನ ಸಮೀಪವೇ ಸುತ್ತಾಡುತ್ತಿದ್ದರು.ದುಷ್ಕರ್ಮಿಗಳು ಕಾರಿನಲ್ಲಿ ಹಿಂಬಾಲಿಸಿ ಬಂದು ಅಪಹರಿಸಿದ್ದರು. ಆರೋಪಿಗಳಿಗೆ ವಿಘ್ನೇಶ್‌ನನ್ನು ಅಪಹರಿಸುವ ಉದ್ದೇಶವಿರಲಿಲ್ಲ. ಅಪಹರಣದ ಸಂದರ್ಭದಲ್ಲಿ ಸುಧೀಂದ್ರನ ಜತೆಯಲ್ಲೇ ಇದ್ದ ವಿಘ್ನೇಶ್ ಪೊಲೀಸರಿಗೆ ಮಾಹಿತಿ ನೀಡಬಹುದು ಎಂಬ ಕಾರಣಕ್ಕಾಗಿ ಆರೋಪಿಗಳು ಆತನನ್ನು ಎಳೆದೊಯ್ದಿದ್ದರು.ಪ್ರಕರಣದ ಹಿನ್ನೆಲೆ: ಮೈಸೂರಿನ ಮಹಾಜನ್ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದ ಹುಣಸೂರಿನ ಸುಧೀಂದ್ರ (20) ಮತ್ತು ವಿಘ್ನೇಶ್ (20) ಅವರನ್ನು ಆರೋಪಿಗಳು ಜೂನ್ 8ರಂದು ಅಪಹರಿಸಿದ್ದರು. ಜೂನ್ 12ರ ನಸುಕಿನಲ್ಲಿ ಅವರಿಬ್ಬರಿಗೂ ನಿದ್ರೆ ಮಾತ್ರೆ ನೀಡಿ ಕುತ್ತಿಗೆಗೆ ಹಗ್ಗ ಬಿಗಿದು ಮತ್ತು ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿದ್ದರು. ಶವಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಅಗಲಗುರ್ಕಿ ಗ್ರಾಮದ ಬಳಿ ಎಸೆದು ಪರಾರಿಯಾಗಿದ್ದರು.

ಇಲಾಖೆ ವೈಫಲ್ಯಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಇರುವುದನ್ನು ಸ್ವತಃ ಗೃಹ ಸಚಿವರೇ ಪತ್ರಿಕಾಗೋಷ್ಠಿಯಲ್ಲಿ ಒಪ್ಪಿಕೊಂಡರು.ಅಪಹರಣದ ವಿಷಯ ತಿಳಿಯುತ್ತಿದ್ದಂತೆ ಹುಣಸೂರು ಹಾಗೂ ಮೈಸೂರು ಪೊಲೀಸರು ದೂರು ದಾಖಲಿಸಿಕೊಂಡು ಸಮನ್ವಯತೆಯಿಂದ ಕೆಲಸ ಮಾಡಿದ್ದರೆ ವಿದ್ಯಾರ್ಥಿಗಳನ್ನು ಪ್ರಾಣಾಪಾಯದಿಂದ ಪಾರು ಮಾಡಬಹುದಿತ್ತಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಶೋಕ ಅವರು, `ಪ್ರಕರಣದ ಸಂಬಂಧ ಸ್ಥಳೀಯ ಪೊಲೀಸರು ನಿರ್ಲಕ್ಷ್ಯ ತೋರಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಇಲಾಖೆಯ ವೈಫಲ್ಯವನ್ನು ನಿರಾಕರಿಸುವುದಿಲ್ಲ~ ಎಂದರು.`ಸಕಾಲಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸದೆ ಪರೋಕ್ಷವಾಗಿ ವಿದ್ಯಾರ್ಥಿಗಳ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸದ್ಯದಲ್ಲೇ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಆದರೆ ಆರೋಪಿಗಳನ್ನು ಬಂಧಿಸುವುದು ಮೊದಲ ಆದ್ಯತೆಯಾಗಿತ್ತು~ ಎಂದು ಸ್ಪಷ್ಟಪಡಿಸಿದರು.ನಗದು ಬಹುಮಾನ: `ದುಷ್ಕರ್ಮಿಗಳು ಅಮಾಯಕ ವಿದ್ಯಾರ್ಥಿಗಳನ್ನು ಅಪಹರಿಸಿ ಕೊಲೆ ಮಾಡಿದ್ದು ಅನಾಗರಿಕ ವರ್ತನೆ. ಇದು ಮಾನವ ಸಮಾಜವೇ ತಲೆತಗ್ಗಿಸುವಂತಹ ಘಟನೆ. ಇಲಾಖೆಗೆ ಸವಾಲಾಗಿದ್ದ ಈ ಪ್ರಕರಣದ ತನಿಖೆಗಾಗಿ ಬೆಂಗಳೂರು ನಗರ ಅಪರಾಧ ವಿಭಾಗ, ಮೈಸೂರು ಹಾಗೂ ಮಂಡ್ಯ ಜಿಲ್ಲಾ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ಎರಡು ವಿಶೇಷ ತಂಡ ರಚಿಸಲಾಗಿತ್ತು.ಅಧಿಕಾರಿಗಳು ಶ್ರಮ ವಹಿಸಿ ಕೆಲಸ ಮಾಡಿ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣ ಭೇದಿಸಿದ ಸಿಬ್ಬಂದಿ ತಂಡಕ್ಕೆ ಎರಡು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ~ ಎಂದು ಅವರು ತಿಳಿಸಿದರು.ವಿಶೇಷ ನ್ಯಾಯಾಲಯ: `ಸಾಧ್ಯವಾದಷ್ಟು ಬೇಗ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಮೃತ ವಿದ್ಯಾರ್ಥಿಗಳ ಪೋಷಕರಿಗೆ ನ್ಯಾಯ ಒದಗಿಸಿಕೊಡುವ ಉದ್ದೇಶದಿಂದ ವಿಶೇಷ ನ್ಯಾಯಾಲಯ ಸ್ಥಾಪಿಸಲು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಿಸಲು ನಿರ್ಧರಿಸಲಾಗಿದೆ~ ಎಂದು ಸಚಿವರು ಹೇಳಿದರು.ಸಮಾಜ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿರುವ ಕೆಎಫ್‌ಡಿ ಸಂಘಟನೆಯ ಮೇಲೆ ನಿಷೇಧ ಹೇರಲಾಗುತ್ತದೆಯೇ ಎಂದು ಮಾಧ್ಯಮ ಪ್ರತಿನಿಧಿಗಳು ಸಚಿವರಿಗೆ ಪ್ರಶಿಸಿದ್ದಕ್ಕೆ `ಆ ಬಗ್ಗೆ ನಿರ್ಧಾರ ಕೈಗೊಂಡಿಲ್ಲ~ ಎಂದರು.ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ, ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕರ್ಬಿಕರ್, ಬೆಂಗಳೂರು ನಗರ ಸಿಸಿಬಿ ಡಿಸಿಪಿ ಡಿ.ಎಂ.ಕೃಷ್ಣಂರಾಜು, ಎಸಿಪಿ ನ್ಯಾಮೇಗೌಡ, ಇನ್‌ಸ್ಪೆಕ್ಟರ್‌ಗಳಾದ ಕೆ.ಸಿ.ಅಶೋಕನ್, ಬಾಳೇಗೌಡ, ಬದ್ರಿನಾಥ್, ಎಸ್.ಕೆ.ಮಾಲತೇಶ್, ಆನಂದ ಕಬ್ಬೂರಿ, ಎಸ್‌ಐಗಳಾದ ನಾಗಣ್ಣಗೌಡ, ಸಿರಾಜುದ್ದೀನ್ ಬಾಷಾ ಮತ್ತು ಸಿಬ್ಬಂದಿ ತಂಡ ಈ ಪ್ರಕರಣ ಭೇದಿಸಿದೆ.ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಸ್.ಟಿ.ರಮೇಶ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ರೂಪಕ್‌ಕುಮಾರ್ ದತ್ತ, ದಕ್ಷಿಣ ವಲಯ ಐಜಿಪಿ ಅಮರ್‌ಕುಮಾರ್ ಪಾಂಡೆ ಗೋಷ್ಠಿಯಲ್ಲಿ ಹಾಜರಿದ್ದರು.

ದಿಕ್ಕು ತೋಚದಂತಾಗಿದೆ: `ಒಬ್ಬನೇ ಮಗನನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದೆ. ಇಂತಹ ಕಷ್ಟ ಯಾವ ತಂದೆ-ತಾಯಿಗೂ ಬರಬಾರದು. ಮಗನನ್ನು ಕೊಲೆ ಮಾಡಿರುವ ಆರೋಪಿಗಳಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ. ಅವರು ಇಂತಹ ದುಷ್ಕೃತ್ಯ ಎಸಗಿ ಯಾರಿಗೂ ನೋವುಂಟು ಮಾಡಬಾರದು~ ಎಂದು ಸುಧೀಂದ್ರ ಅವರ ತಾಯಿ ಜ್ಯೋತಿ ಹೇಳಿದರು.`ನಮ್ಮ ಆಸ್ತಿಯನ್ನೆಲ್ಲ ಮಾರಿದ್ದರೂ ಅಪಹರಣಕಾರರು ಕೇಳಿದ್ದಷ್ಟು ಹಣ ಸಿಗುತ್ತಿರಲಿಲ್ಲ. ನಮ್ಮ ಕಷ್ಟವನ್ನು ಅರ್ಥ ಮಾಡಿಕೊಂಡು ಹಣ ಹೊಂದಿಸಿ ಕೊಡಲು ಸಹ ಅವರು ಅವಕಾಶ ನೀಡಲಿಲ್ಲ~ ಎಂದು ಅವರು ರೋದಿಸಿದರು.

`ಆರೋಪಿಗಳಾದ ಆದಿಲ್ ಮತ್ತು ಅತಾವುಲ್ಲಾ ಖಾನ್ ಅವರು ಆಗಾಗ್ಗೆ ಅಂಗಡಿಗೆ ಬಂದು ಸಿಮೆಂಟ್ ಮತ್ತಿತರ ವಸ್ತುಗಳನ್ನು ಖರೀಸುತ್ತಿದ್ದರು. ಅವರಿಬ್ಬರನ್ನು ಹಲವು ಬಾರಿ ನೋಡಿದ್ದೆ~ ಎಂದು ಸುಧೀಂದ್ರ ಅವರ ತಂದೆ ಮೋಹನ್ ಕುಮಾರ್ ತಿಳಿಸಿದರು. `ಮುಂದೆ ಇಂತಹ ದುರ್ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು. ಸಮಾಜ ಘಾತುಕರ ಮೇಲೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು~ ಎಂದು ಅವರು ವಿನಂತಿಸಿದರು.

 

ಸುಳಿವು ನೀಡಿದ 40 ಸಿಮ್, 400 ಕರೆ

ಅಪಹರಣಕ್ಕೆ ಪೂರ್ವಯೋಜಿತ ಸಂಚು ರೂಪಿಸಿದ್ದ ಆರೋಪಿಗಳು ಯಾವುದೇ ಸುಳಿವು ಸಿಗದಂತೆ ಕೃತ್ಯ ನಡೆಸಿದ್ದರು. ತನಿಖೆಯ ದಾರಿ ತಪ್ಪಿಸಲು ಬೇಕಾದ ಪ್ರಯತ್ನಗಳನ್ನೆಲ್ಲ ಮಾಡಿದ್ದರು. ಪೊಲೀಸರಿಗೆ ಸುಳಿವು ಸಿಗಬಹುದು ಎಂಬ ಕಾರಣಕ್ಕಾಗಿ, ಸುಧೀಂದ್ರ ಅವರ ತಂದೆಗೆ ಕರೆ ಮಾಡಿದ ಸಂದರ್ಭದಲ್ಲೆಲ್ಲ ಬೇರೆ ಬೇರೆ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಬಳಸಿದ್ದರು.ಅವರು 30ರಿಂದ 40 ಸಿಮ್ ಕಾರ್ಡ್‌ಗಳನ್ನು ಬಳಸಿರುವುದು ತನಿಖೆಯಿಂದ ಗೊತ್ತಾಗಿದೆ. ಮೊಬೈಲ್ ಫೋನ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ ಅತಾವುಲ್ಲಾ ಖಾನ್ ಪದೇ ಪದೇ ಸಿಮ್ ಕಾರ್ಡ್ ಬದಲಿಸಲು ಇತರೆ ಆರೋಪಿಗಳಿಗೆ ಸಲಹೆ ನೀಡಿದ್ದ~ ಎಂದು ಪ್ರಕರಣದ ತನಿಖಾಧಿಕಾರಿಗಳು ಹೇಳಿದ್ದಾರೆ.`ಅಪಹರಣ ಘಟನೆ ನಡೆದ ದಿನ ಮೈಸೂರು ಹಾಗೂ ಹುಣಸೂರು ಭಾಗದ ಮೊಬೈಲ್ ಗೋಪುರಗಳ (ಟವರ್) ವ್ಯಾಪ್ತಿಯಲ್ಲಿನ ಸುಮಾರು 4,000 ಮೊಬೈಲ್ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಅವುಗಳಲ್ಲಿ 400ಕ್ಕೂ ಹೆಚ್ಚು ಕರೆಗಳಲ್ಲಿ ಕೆಎಫ್‌ಡಿ ಸಂಘಟನೆಯ ಸದಸ್ಯರ ನಡುವೆಯೇ ಸಂಭಾಷಣೆ ನಡೆದಿರುವುದು ಗೊತ್ತಾಯಿತು. ಈ ಸುಳಿವನ್ನೇ ಆಧರಿಸಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಬಂಧಿಸಲಾಯಿತು~ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.`ಸುಧೀಂದ್ರನ ತಂದೆ ಮೋಹನ್ ಕುಮಾರ್ ಅವರ ಹೆಸರಿನಲ್ಲಿ ಸಾಕಷ್ಟು ಜಮೀನು ಹಾಗೂ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮನೆ ಇತ್ತು. ಈ ವಿಷಯ ತಿಳಿದಿದ್ದ ಆರೋಪಿಗಳು ಸುಧೀಂದ್ರನನ್ನು ಅಪಹರಿಸಿದರೆ ಮೋಹನ್ ಕುಮಾರ್ ಜಮೀನು ಮತ್ತು ಮನೆಯನ್ನು ಮಾರಾಟ ಮಾಡಿಯಾದರೂ ಹಣ ಕೊಡುತ್ತಾರೆ ಎಂದು ಭಾವಿಸಿದ್ದರು. ಈ ಹಿನ್ನೆಲೆಯಲ್ಲೇ ಆರೋಪಿಗಳು ಸುಧೀಂದ್ರನನ್ನು ಅಪಹರಿಸಿದ್ದರು~ ಎಂದು ಅವರು ಹೇಳಿದರು.

 ಆದಿಲ್ ಮಾಂಸದ ಅಂಗಡಿ ಇಟ್ಟುಕೊಂಡಿದ್ದ. ಅಮೀನ್, ಕೌಸರ್ ಮತ್ತು ರೆಹಮಾನ್ ಪೀಠೋಪಕರಣಗಳಿಗೆ ಪಾಲಿಷ್ ಹಾಕುವ ಕೆಲಸ ಮಾಡುತ್ತಿದ್ದರು.

ಸಫೀರ್ ಮಿಕ್ಸಿ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಎರಡು ಕಾರು, ಆಟಿಕೆ ಪಿಸ್ತೂಲ್, ಆರು ಮೊಬೈಲ್ ಫೋನ್‌ಗಳು ಹಾಗೂ ಎರಡು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry