ಹುತಾತ್ಮ ಪೊಲೀಸ್ ಕುಟುಂಬಕ್ಕೆ ಸೌಲಭ್ಯ ನೀಡಿ

7

ಹುತಾತ್ಮ ಪೊಲೀಸ್ ಕುಟುಂಬಕ್ಕೆ ಸೌಲಭ್ಯ ನೀಡಿ

Published:
Updated:

ತುಮಕೂರು: ಕರ್ತವ್ಯದ ಸಂದರ್ಭದಲ್ಲಿ ಪ್ರಾಣ ತೆತ್ತ ಪೊಲೀಸ್ ಸಿಬ್ಬಂದಿಯ ಕುಟುಂಬ ವರ್ಗಕ್ಕೆ ದೊರೆಯಬೇಕಾದ ಪರಿಹಾರ ಸಿಗದೆ ಹಲವು ಕುಟುಂಬಗಳು ಸಂಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿವೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋವಿಂದರಾಜು ಭಾನುವಾರ ಆತಂಕ ವ್ಯಕ್ತಪಡಿಸಿದರು. ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಭಾನುವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರಿಗೆ ಗೌರವ ಸಮರ್ಪಣೆ ಸಲ್ಲಿಸಿ ಅವರು ಮಾತನಾಡಿದರು.   ಪೊಲೀಸ್ ಇಲಾಖೆಯಲ್ಲಿ ಹಲವು ತೊಡಕಗಳಿದ್ದರೂ ಸಹ ಕಾರ್ಯ ನಿರ್ವಹಿಸುತ್ತಾ ಬಲಿದಾನವಾದ ಸಿಬ್ಬಂದಿ ವರ್ಗಕ್ಕೆ ಸೂಕ್ತ ಸೌಲಭ್ಯ ನೀಡುವಲ್ಲಿ ಹಿಂದೆ ಬಿದ್ದಿದೇವೆ ಎಂದು ವಿಷಾದ ವ್ಯಕ್ತಪಡಿಸಿದರು.ಪೊಲೀಸ್ ಕುಟುಂಬಗಳಿಗೆ ದೊರೆಯಬೇಕಾದ ಸೇವಾ ಸೌಲಭ್ಯಗಳು ಸಿಗದೆ ಯಾತನೆ ಅನುಭವಿಸುತ್ತಿದ್ದಾರೆ. ಸೈನಿಕರು ಮತ್ತು ಪೊಲೀಸ್ ಸಿಬ್ಬಂದಿ ರಾಷ್ಟ್ರದ ಬೆನ್ನೆಲುಬಿನಂತೆ ಕಾರ್ಯ ನಿರ್ವಹಿಸುತ್ತಾ ಸಾರ್ವಜನಿಕರ ರಕ್ಷಣೆಗೆ ಮುಂದಾಗುವ ಕಾರ್ಯ ವೈಖರಿ ವಿಭಿನ್ನ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಆರ್.ಕೆ.ರಾಜು ಮಾತನಾಡಿದರು. ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ವೆಂಕಟೇಶ್ ಮಾತನಾಡಿ, ಕರ್ತವ್ಯ ನಿರತವಾಗಿದ್ದಾಗ ಮೃತರಾದ ಪೊಲೀಸರ ಸ್ಮರಣೆ ಮಾಡಬೇಕಾದದ್ದು ಎಲ್ಲರ ಕರ್ತವ್ಯ ಎಂದರು. ಈ ವರ್ಷ ಬಲಿದಾನವಾದ 574 ಹುತಾತ್ಮ ಪೊಲೀಸರ ಹೆಸರುಗಳನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ವಾಚನ ಮಾಡಿದರು.   ಗೌರವ ರಕ್ಷೆಯಾಗಿ ಹುತಾತ್ಮ ಪುತ್ಥಳಿಗೆ ಗಣ್ಯರು ಪುಷ್ಪ ಮಾಲೆ ಮತ್ತು ಶ್ರದ್ಧಾಂಜಲಿ ಅರ್ಪಿಸಿದರು. ಉಪ ವಿಭಾಗಾಧಿಕಾರಿ ನಕುಲ್, ನಿವೃತ್ತ ಪೊಲೀಸ್ ಅಧಿಕಾರಿಗಳು, ಪೊಲೀಸರು ಹಾಗೂ ಸೈನಿಕರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry