ಬುಧವಾರ, ಜೂನ್ 16, 2021
28 °C

ಹುತಾತ್ಮ ಯೋಧನಿಗೆ ಅಂತಿಮ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್.ನಗರ:  ಜಮ್ಮುವಿನಲ್ಲಿ  ಸೇನೆ ಮತ್ತು ಉಗ್ರರ ನಡುವಿನ ಕಾಳಗದಲ್ಲಿ ವೀರ ಮರಣ ಹೊಂದಿದ ತಾಲ್ಲೂಕಿನ ಬಡಕನಕೊಪ್ಪಲು ಗ್ರಾಮದ ಯೋಧ ಬಿ.ಕೆ. ಸುನಿಲ್‌ (22)   ಅಂತ್ಯಕ್ರಿಯೆ ಗುರುವಾರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.ಗುರುವಾರ ಬೆಳಿಗ್ಗೆ  ಪಟ್ಟಣಕ್ಕೆ ಬಂದ ಯೋಧನ ಪಾರ್ಥಿವ ಶರೀರವನ್ನು ತೋಪಮ್ಮ ದೇವಸ್ಥಾನ ಬಳಿ ತಾಲ್ಲೂಕು ಆಡಳಿತ ಮತ್ತು ಸಂಸದ ಅಡಗೂರು ಎಚ್. ವಿಶ್ವನಾಥ್, ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಸೇರಿದಂತೆ ಸಾರ್ವಜನಿಕರು ಬರಮಾಡಿಕೊಂಡರು.ಸ್ವಗ್ರಾಮ ಬಡಕನಕೊಪ್ಪಲು ಗ್ರಾಮಕ್ಕೆ ಬಂದ ಪಾರ್ಥಿವ ಶರೀರವನ್ನು ಅವರ ಮನೆಯ ಮುಂಭಾಗ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು.ಸುನಿಲ್ ತಂದೆ ಕಾಂತರಾಜ್, ತಾಯಿ ಧನಲಕ್ಷ್ಮೀ, ಅಣ್ಣ ಸಂಜಯ್, ಅಕ್ಕಂದಿರು, ಶಾಸಕ ಸಾ.ರಾ. ಮಹೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಡಿವೈಎಸ್ಪಿ  ಶ್ರೀಹರಿ ಬರಗೂರು, ಹುಣಸೂರು ಉಪ ವಿಭಾಗಾಧಿಕಾರಿ ಜಗದೀಶ್, ತಹಶೀಲ್ದಾರ್ ಶಿವಶಂಕರಪ್ಪ, ಉಪತಹಶೀಲ್ದಾರ್ ಯದುಗಿರೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ರಾಜಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯ ನಾಗಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ. ರವಿಶಂಕರ್, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕರಾದ ಎ.ಟಿ. ಸೋಮಶೇಖರ್, ಅಮಿತ್ ವಿ. ದೇವರಹಟ್ಟಿ, ಮುಖಂಡರಾದ ಪ್ರಭಾಕರ್ ಜೈನ್, ಶಶಿಗೌಡ, ಗ್ರಾಮಸ್ಥರು, ಸ್ನೇಹಿತರು, ಬಂಧು ಬಳಗ ಸೇರಿದಂತೆ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು. ಮಧ್ಯಾಹ್ನ 1ಕ್ಕೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು. ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜ ಹಾಕಲಾಗಿತ್ತು. ಪೊಲೀಸ್ ಇಲಾಖೆ ವತಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಲಾಯಿತು.ಪ್ರತಿಭಟನೆ: ದೇಶ ಕಾಯುವ ವೀರ ಯೋಧ ಮರಣ ಹೊಂದಿದರೂ ಸಹ ಅಂತಿಮ ದರ್ಶನಕ್ಕೆ ಜಿಲ್ಲಾಧಿಕಾರಿಗಳು ಬರಲಿಲ್ಲ ಎಂದು ಆರೋಪಿಸಿ ಇದ್ದಕ್ಕಿದ್ದಂತೆ ಕೆಲ ಹೊತ್ತು ಇಲ್ಲಿನ ಬಿಳಿಕೆರೆ– ಬೇಲೂರು ಹೆದ್ದಾರಿ ಬಂದ್ ಮಾಡಲಾಯಿತು. ಮಧ್ಯ ಪ್ರವೇಶಿಸಿದ ಪೊಲೀಸರ ವಿರುದ್ಧವೂ ತಿರುಗಿ ಬಿದ್ದ ಗ್ರಾಮಸ್ಥರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆಯುವವರೆಗೂ ರಸ್ತೆ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಇದರಿಂದ ಪರಿಸ್ಥಿತಿ ಕೆಲ ಹೊತ್ತು ಬಿಗುವಿನಿಂದ ಕೂಡಿತ್ತು.ಜಿಲ್ಲಾಧಿಕಾರಿಗಳಿಗೆ ಧಿಕ್ಕಾರವೂ ಕೂಗಲಾಯಿತು. ಪರಿಸ್ಥಿತಿಯನ್ನು ಅರಿತ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರರಲ್ಲದೇ ರಸ್ತೆ ಸಂಚಾರ ಸುಗಮ ಗೊಳಿಸುವಲ್ಲಿ ಯಶಸ್ವಿಯಾದರು.ಶಾಸಕರ ವಿರುದ್ಧ ಕಿಡಿ: ವೀರ ಯೋಧ ಸುನಿಲ್ ಮೃತಪಟ್ಟು ಇಂದಿಗೆ ಐದು ದಿನಗಳಾಗಿವೆ. ಸ್ಥಳೀಯ ಶಾಸಕರಾದ ನೀವು ಈ ಐದು ದಿನಗಳಲ್ಲಿ ಗ್ರಾಮಕ್ಕೆ ಒಮ್ಮೆಯೂ ಭೇಟಿ ನೀಡಲಿಲ್ಲ. ಅಲ್ಲದೇ ಅವರ ಕುಟುಂಬ ವರ್ಗಕ್ಕೆ ಸಂತೈಸುವ ಕೆಲಸವೂ ಮಾಡಲಿಲ್ಲ. ಯಾರೋ ಬಂದು ಹೋಗುವ ಹಾಗೆ ಅಂತ್ಯಕ್ರಿಯೆ ದಿನ ಬಂದು ಅಂತಿಮ ದರ್ಶನ ಪಡೆಯುತ್ತಿರುವುದು ಎಷ್ಟು ಸರಿ ಎಂದು ಗ್ರಾಮಸ್ಥರು ಶಾಸಕ ಸಾ.ರಾ. ಮಹೇಶ್ ಅವರನ್ನು ಪ್ರಶ್ನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.