ಹುತ್ತಕ್ಕೆ ಕೋಳಿಯ ರಕ್ತದ ನೈವೇದ್ಯ!

7

ಹುತ್ತಕ್ಕೆ ಕೋಳಿಯ ರಕ್ತದ ನೈವೇದ್ಯ!

Published:
Updated:
ಹುತ್ತಕ್ಕೆ ಕೋಳಿಯ ರಕ್ತದ ನೈವೇದ್ಯ!

ಚಾಮರಾಜನಗರ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಬುಧವಾರ ಹುತ್ತಕ್ಕೆ ಕೋಳಿಯ ಬಿಸಿ ರಕ್ತ ಎರೆದು ತನಿ ಹಬ್ಬ ಆಚರಿಸಲಾಯಿತು.ಷಷ್ಠಿಯ ದಿನದಂದು ಈ ಹಬ್ಬ ಆಚರಿಸಲಾಗುತ್ತದೆ. ಹುತ್ತಕ್ಕೆ ಕೋಳಿ ಬಲಿ ನೀಡಿದರೆ ಹೊಲ-ಗದ್ದೆಗಳಲ್ಲಿ ನಾಗರಹಾವು ಕಾಣಿಸಿಕೊಳ್ಳುವುದಿಲ್ಲ. ನಾಗದೋಷವೂ ಕಾಡುವುದಿಲ್ಲ ಎಂಬುದು ಜನರ ನಂಬಿಕೆ.ಜಿಲ್ಲೆಯ ಚಂದಕವಾಡಿ, ಮಲ್ಲಯ್ಯನಪುರದ ಭಾಗದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಬೆಳಿಗ್ಗೆಯೇ ಕುಟುಂಬ ಸದಸ್ಯರು ಗ್ರಾಮದ ಹೊರಭಾಗದಲ್ಲಿರುವ ಹುತ್ತಗಳ ಬಳಿಗೆ ಹೋಗುತ್ತಾರೆ. ಪೂಜಾ ಸಾಮಗ್ರಿಯೊಂದಿಗೆ ಕೋಳಿ, ಜತೆಗೆ ಕೋಳಿ ಮೊಟ್ಟೆ ತೆಗೆದುಕೊಂಡು ಹೋಗುತ್ತಾರೆ. ಹುತ್ತಕ್ಕೆ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಿದ ಬಳಿಕ ಹುತ್ತದ ಕೋವಿಗೆ ಕೋಳಿ ಮೊಟ್ಟೆ ಇಡುತ್ತಾರೆ. ನಂತರ ಕೋಳಿ ಕತ್ತು  ಕೊಯ್ದು ಕೋವಿಗಳಿಗೆ ರಕ್ತ ಬಿಡುತ್ತಾರೆ.ದಲಿತರು ಮತ್ತು ಹಿಂದುಳಿದ ಜನರು ಹೆಚ್ಚಾಗಿ ವಾಸಿಸುವ ಗ್ರಾಮಗಳಲ್ಲಿ ಕೋಳಿ ಬಲಿ ಕೊಡಲಾಗುತ್ತದೆ. ಗ್ರಾಮದ ಇತರೇ ಸಮುದಾಯದ ಮಂದಿಯೂ ಈ ಹಬ್ಬ ಆಚರಿಸುವುದು ಉಂಟು. ಆದರೆ, ಅವರು ಕೋಳಿ ಬಲಿ ನೀಡುವುದಿಲ್ಲ. ಬಾಳೆಹಣ್ಣು-ಸಕ್ಕರೆ, ಹಾಲು-ಸಕ್ಕರೆಯ ನೈವೇದ್ಯ ಅರ್ಪಿಸುವುದು ವಾಡಿಕೆ. ಜತೆಗೆ, ಕೋವಿಗಳಿಗೆ ಬೆಳ್ಳಿ ಅಥವಾ ತಾಮ್ರದಿಂದ ಮಾಡಿರುವ ಚಿಕ್ಕದಾದ `ನಾಗರ ಹೆಡೆ~ ಆಕಾರದ ಆಭರಣ  ಹಾಕುತ್ತಾರೆ.ಹಲವು ತಲೆಮಾರುಗಳಿಂದಲೂ ಈ ಹಬ್ಬ ಆಚರಿಸಲಾಗುತ್ತದೆ. ಹೆಣ್ಣುಮಕ್ಕಳೇ ಕೋಳಿ ಬಲಿ ನೀಡುವುದು ವಿಶೇಷ. ಒಂದೇ ಹುತ್ತದ ಬಳಿಯಲ್ಲಿ  ಸಿಹಿ ಪದಾರ್ಥ ಹಾಗೂ ಕೋಳಿಯ ಬಿಸಿರಕ್ತದ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸುವುದು ಈ ಹಬ್ಬದ ವೈಶಿಷ್ಟ್ಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry