ಹುಬ್ಬಳ್ಳಿಯಲ್ಲಿ ಹಾಕಿ ತುಡಿತ...

7

ಹುಬ್ಬಳ್ಳಿಯಲ್ಲಿ ಹಾಕಿ ತುಡಿತ...

Published:
Updated:
ಹುಬ್ಬಳ್ಳಿಯಲ್ಲಿ ಹಾಕಿ ತುಡಿತ...

ಒಂದೊಂದು ಗೋಲಿಗೂ ಚಪ್ಪಾಳೆಯ ಮಳೆ, ಪ್ರತಿಯೊಂದು ಶಾಟ್‌ಗೂ ಹಾ...ಹೋ ಎನ್ನುವ ಉದ್ಗಾರ.  ಬಿರುಬಿಸಿಲಿನಲ್ಲೂ ನೆಲದ ಮೇಲೆ, ಸಿಮೆಂಟ್‌ ಕಟ್ಟೆಗಳ ಮೇಲೆ ಕುಳಿತ ಪ್ರೇಕ್ಷಕರಿಂದ ಸ್ಥಳೀಯರ ಜೊತೆಗೆ ಹೊರಗಿನಿಂದ ಬಂದ ಆಟಗಾರರಿಗೂ ಒಂದೇ ತೆರನಾದ ಪ್ರೋತ್ಸಾಹ. ಹುಬ್ಬಳ್ಳಿಯ ಸೆಟ್ಲ್‌ಮೆಂಟ್‌ನಲ್ಲಿ ಹಾಕಿ ಟೂರ್ನಿಗಳು ನಡೆಯುವಾಗ ಇಂಥ ಉತ್ಸಾಹದ, ಹುಮ್ಮಸ್ಸಿನ ವಾತಾವರಣ ಸಾಮಾನ್ಯ...ಎರಡು ರಣಜಿ ಪಂದ್ಯ ಮತ್ತು ಒಂದು ‘ಲಿಸ್ಟ್‌ ಎ’ ಅಂತರರಾಷ್ಟ್ರೀಯ ಪಂದ್ಯಗಳ ಬೆನ್ನಲ್ಲೇ, ಶಾಲಾ ಮಕ್ಕಳ ಟೂರ್ನಿಗಳು, ವಿವಿಧ ಕ್ಲಬ್‌ಗಳು ನಡೆಸುವ ಟೂರ್ನಿಗಳು, ಕುಟುಂಬದ ವ್ಯಕ್ತಿಗಳ ಸ್ಮರಣಾರ್ಥ ನಡೆಸುವ ಪಂದ್ಯಾವಳಿ ಮುಂತಾದ ಕ್ರಿಕೆಟ್‌ ಚಟುವಟಿಕೆ ಈಚೆಗೆ ಹುಬ್ಬಳ್ಳಿಯಲ್ಲಿ ಸುದ್ದಿಯಾಗಿತ್ತು. ಆದರೆ ಇದೀಗ ಜನವರಿ 8ರಿಂದ 12ರ ವರೆಗೆ ನಡೆದ ಹುಬ್ಬಳ್ಳಿ ಹಾಕಿ ಅಕಾಡೆಮಿಯ (ಎಚ್‌ಎಚ್‌ಎ) ಆಹ್ವಾನಿತ ಅಂತರರಾಜ್ಯ  ಟೂರ್ನಿ ಇಲ್ಲಿನ ಹಾಕಿ ಪ್ರಿಯರನ್ನು ಮತ್ತೆ ಸೆಟ್ಲ್‌ಮೆಂಟ್‌ನ ಯಂಗ್‌ಸ್ಟರ್‌ ಸ್ಪೋರ್ಟ್ಸ್‌ ಕ್ಲಬ್‌ ಮೈದಾನಕ್ಕೆ ಎಳೆದುಕೊಂಡು ಬಂದಿತು.ಹುಬ್ಬಳ್ಳಿ ಕೇಂದ್ರವಾಗಿರಿಸಿಕೊಂಡು ಉತ್ತರ ಕರ್ನಾಟಕದಲ್ಲಿ ನಡೆಯುವ ಹಾಕಿ ಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗೆ ಮತ್ತಷ್ಟು ಚೇತನ ತುಂಬುವ ಪ್ರಯತ್ನದ ಫಲವಾಗಿತ್ತು ಈ ಟೂರ್ನಿ. ಹಾಕಿ ಬೆಳವಣಿಗೆಯನ್ನಷ್ಟೇ ಗುರಿಯಾಗಿರಿಸಿಕೊಂಡು ಸೆಟ್ಲ್‌ಮೆಂಟ್‌ನಲ್ಲಿ ಮತ್ತೆ ಮತ್ತೆ ಕ್ಲಬ್‌ಗಳು ಹುಟ್ಟಿಕೊಳ್ಳುತ್ತಿವೆ. ಹಾಕಿಯನ್ನು ತಳಮಟ್ಟದಿಂದ ಮರುಸಂಘಟಿಸುವ ಪ್ರಯತ್ನದ ಭಾಗವಾಗಿ ಸ್ಥಾಪನೆಯಾಗುತ್ತಿರುವ ಇಂಥ ಸಂಘಟನೆಗಳ ಹೊಸ ಅವತರಣಿಕೆ  ಎಚ್‌ಎಚ್‌ಎ.ಗುನ್ನೇಗಾರರು (ಅಪರಾಧಿ) ವಾಸ ಮಾಡುವ ಸ್ಥಳ ಎಂಬ ಅಪಖ್ಯಾತಿಗೆ ಒಳಗಾಗಿದ್ದ ಸೆಟ್ಲ್‌ಮೆಂಟ್‌ ಹಾಕಿ ಮೂಲಕ ಹೊಸ ದಿಶೆಯತ್ತ ನಡೆದ ಕಥೆ ಹುಬ್ಬಳ್ಳಿ ಇತಿಹಾಸದಲ್ಲಿ ಸೇರಿಕೊಂಡಿದೆ. ನಗರದಲ್ಲಿ ಯಾವುದೇ ಅಪರಾಧ ನಡೆದರೂ ‘ಅಪರಾಧಿ’ಗಳ ಬೇಟೆಗಾಗಿ ಸೆಟ್ಲ್‌ಮೆಂಟ್ ಕಡೆಗೆ ಧಾವಿಸುತ್ತಿದ್ದ ಪೊಲೀಸರೇ ನಂತರ ಕೋಮು ಗಲಭೆಗಳು ನಡೆಯುವಾಗ ಈ ಭಾಗದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿಯನ್ನು ಅಲ್ಲಿನವರಿಗೇ ವಹಿಸಿ ಕೊಟ್ಟಿದ್ದರು.ಹಾಕಿ ಮೂಲಕ ಅಲ್ಲಿನ ಜನರು ಪರಿವರ್ತನೆಗೊಂಡು ಸುಧಾರಿತ ಜೀವನಕ್ಕೆ ತಮ್ಮನ್ನು ಒಡ್ಡಿಕೊಂಡದ್ದೇ ಪೊಲೀಸರಿಗೆ ಇಂಥ ವಿಶ್ವಾಸ ಮೂಡಲು ಕಾರಣ. ಒಂದೇ ಪ್ರದೇಶದಲ್ಲಿ ನಾಲ್ಕು ಕ್ಲಬ್‌ಗಳಿದ್ದರೂ ಎಂಟಕ್ಕಿಂತ ಹೆಚ್ಚು ತಂಡಗಳಿದ್ದರೂ ಇಲ್ಲಿ ಟೂರ್ನಿಗಳು ನಡೆಯುವಾಗ ಎಲ್ಲರೂ ಒಂದಾಗುತ್ತಾರೆ. ಒಳ್ಳೆಯ ಆಟಗಾರನನ್ನು ಬೆಳಕಿಗೆ ತರಲು ಒಟ್ಟಾಗಿ ಶ್ರಮಿಸುತ್ತಾರೆ.ಇಂಥ ಪ್ರಯತ್ನದ ಫಲವಾಗಿಯೇ ಇಲ್ಲಿ ಪ್ರತಿವರ್ಷ ಸಾಯ್‌ ಮತ್ತು ರಾಜ್ಯ ಕ್ರೀಡಾನಿಲಯದಂಥ ತರಬೇತಿ ಕೇಂದ್ರಗಳಿಗೆ ಹತ್ತಾರು ಮಂದಿ ಆಟಗಾರರು ಹೋಗಲು ಸಾಧ್ಯವಾಗುತ್ತಿದೆ. ಆದರೆ ಅಲ್ಲಿ ಹೋಗಿ ಉತ್ತಮ ತರಬೇತಿ ಪಡೆದರೂ ದೇಶವನ್ನು ಪ್ರತಿನಿಧಿಸುವ ಇಲ್ಲಿನ ಹಾಕಿ ಆಟಗಾರರ ಆಸೆ ಕೈಗೂಡುತ್ತಿಲ್ಲ. ವಿವಿಧ ಕಾರಣಗಳಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸದೆ ಇಲ್ಲಿನ ಆಟಗಾರರು ಸಪ್ಪೆ ಮೋರೆ ಹಾಕಿಕೊಂಡು ವಾಪಸ್‌ ಬರುತ್ತಿದ್ದಾಗ ಹಾಕಿ ಪ್ರಿಯರು ನಿರಾಶೆಯ ಕೂಪಕ್ಕೆ ಜಾರುತ್ತಾರೆ. ಆದರೆ ಪ್ರೋತ್ಸಾಹಕ್ಕೆ ಕುತ್ತು ಬರುವುದಿಲ್ಲ; ಮರಳಿ ಯತ್ನ ನಡೆಯುತ್ತಲೇ ಇರುತ್ತದೆ.ಎಚ್‌ಎಚ್‌ಎ ಆಶ್ರಯದ ಅಂತರರಾಜ್ಯ ಆಹ್ವಾನಿತ ಹಾಕಿ ಟೂರ್ನಿ ಸೆಟ್ಲ್‌ಮೆಂಟ್‌ನಲ್ಲಿ ಸುಮಾರು ಒಂದೂವರೆ ವರ್ಷದಿಂದ ನಿಂತುಹೋಗಿದ್ದ ಸ್ಪರ್ಧಾತ್ಮಕ ಹಾಕಿ ಚಟುವಟಿಕೆಗೆ ಮರುಜೀವ ನೀಡಿತು. ಬೆಂಗಳೂರಿನಂಥ ಮಹಾನಗರಗಳಲ್ಲಿ ನೆಲೆಸಿ ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಂಡ ಸ್ಥಳೀಯ ಆಟಗಾರರು ಮತ್ತೆ ತಮ್ಮೂರಿನಲ್ಲಿ ಆಟ ಪ್ರದರ್ಶಿಸಲು ಈ ಟೂರ್ನಿ ನೆರವಾಯಿತು. ಬೆನು ಬಾಟ್‌, ರಾಜು ಬಾಗಡೆ, ವಾಸು ಬಳ್ಳಾರಿ, ರವಿ ನಾಯ್ಕರ್‌, ಬಂಡು ಪಾಟೀಲ ಮುಂತಾದ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ  ನೀಡಿದ ಈ ಭಾಗದಲ್ಲಿ ಕಳೆದ ಒಂದು ದಶಕದಿಂದ ಯಾರೂ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶ ಪಡೆಯಲಿಲ್ಲ. 2003ರಲ್ಲಿ ಪುಂಡಲೀಕ ಬಳ್ಳಾರಿ ಈಜಿಪ್ಟ್‌ನಲ್ಲಿ ಆಡಿ ಬಂದ ನಂತರ ವಿದೇಶಿ ತಂಡದ ವಿರುದ್ಧ ಉತ್ತರ ಕರ್ನಾಟಕದವರು ಯಾರೂ ಆಡಲಿಲ್ಲ. ಹೀಗಾಗಿಯೇ ವರ್ಷದ ಮೊದಲ ಟೂರ್ನಿ ಅವರ ನಿರೀಕ್ಷೆಯನ್ನು ಹೆಚ್ಚಿಸಿತ್ತು.ವಿಶ್ವ ಹಾಕಿ ಸರಣಿಯಲ್ಲಿ ಆಡಿದ ವಿನಾಯಕ ಬಿಜವಾಡ ಮತ್ತು ಮಾನುಪಾಟಿ, ಅಖಿಲ ಭಾರತ ಅಂತರ ವಿವಿ ಟೂರ್ನಿಯಲ್ಲಿ ಬೆಂಗಳೂರು ವಿವಿಗೆ ಪ್ರಶಸ್ತಿ ತಂದುಕೊಟ್ಟ ನಾಯಕ ದೀಪಕ್‌ ಬಿಜವಾಡ, ಅವರೊಂದಿಗೆ ರಾಜಧಾನಿಯಲ್ಲಿ ತರಬೇತಿ ಪಡೆಯುತ್ತಿರುವ ಬಿಜು ಎರಕಲ್‌, ಮಿಥುನ್‌ ಬಿಜವಾಡ, ಸಚಿನ್‌ ಮಲ್ಲಾಡ್‌, ಸಹದೇವ ಎರಕಲ್‌, ಮಣಿಕಾಂತ ಬಳ್ಳಾರಿ, ರಾಷ್ಟ್ರಮಟ್ಟದ ‘ಪೈಕಾ’ ಕ್ರೀಡಾಕೂಟದಲ್ಲಿ ಮಿಂಚಿ ಬಂದಿರುವ ಬಾಲಕರು ಇಲ್ಲಿನ ಹಾಕಿ ಮೈದಾನದಲ್ಲಿ ‘ದೂಳು’ ಎಬ್ಬಿಸಿದಾಗ ಜನರ ಭರವಸೆಯ ಹಕ್ಕಿ ಆಕಾಶದೆತ್ತರಕ್ಕೆ ಹಾರಿತ್ತು. ಆದರೆ  ಜಯದೇವ ದನದಮನಿ, ಚಂದ್ರಶೇಖರ ಕೊರವರ, ಮಾರುತಿ ಬಳ್ಳಾರಿ ಅವರಂತಹ ಆಟಗಾರರು ಅವಕಾಶ ಸಿಗದೆ ಕೊರಗುವಂತಾಯಿತು.ಕಾಡುವ ಇಬ್ಬಂದಿತನ

ಹಾಕಿ ಬೆಳವಣಿಗೆಗೆ ಸಾಕಷ್ಟು ಶ್ರಮ ನಡೆಯುತ್ತಿದ್ದರೂ ಪೋಷಕರ ಮನಸ್ಸಿನ ಇಬ್ಬಂದಿತನ ಯುವ ಹಾಕಿಪಟುಗಳು ಬೆಳಕಿಗೆ ಬರಲು ಅಡ್ಡಿಯಾಗುತ್ತಿದೆ ಎಂದು ಅಭಿಪ್ರಾಯಪಡುತ್ತಾರೆ ಇಲ್ಲಿನ ಕೋಚ್‌ಗಳು.ಕ್ರಿಕೆಟ್‌ನ ಖ್ಯಾತಿ, ಆ ಆಟದ ಅಂದ ಮತ್ತು ಈ ಭಾಗದಲ್ಲಿ ಅದಕ್ಕೆ ಇರುವ ಸೌಲಭ್ಯಗಳು ಅನೇಕ ಪಾಲಕರನ್ನು ಅತ್ತ ಎಳೆದೊಯ್ಯುತ್ತಿದೆ. ಹಾಕಿ ಆಟದಲ್ಲಿರುವ ವೇಗದ ಚಲನೆಗಳು, ಬೆವರು ಸುರಿಸಿ ಆಡುವ ವಿಧಾನ, ಗಾಯದ ಆತಂಕ ಇತ್ಯಾದಿ ನಕಾರಾತ್ಮಕ ಅಂಶಗಳ ಜೊತೆಗೆ ಸೌಲಭ್ಯಗಳ ಕೊರತೆ ಜನರನ್ನು ಕಾಡುತ್ತಿದೆ ಎಂದು ಹೇಳುತ್ತಾರೆ ಹುಬ್ಬಳ್ಳಿ ಹಾಕಿ ಅಕಾಡೆಮಿಯ ಕಾರ್ಯದರ್ಶಿ ಭೀಮಣ್ಣ ಎಂ.ಹಲಕುರ್ಕಿ.25ಕ್ಕೂ ಹೆಚ್ಚು ಶಾಲಾ–ಕಾಲೇಜುಗಳಲ್ಲಿ ಹಾಕಿಗೆ ವಿಶೇಷ ತರಬೇತಿ ನೀಡುವ ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಒಂದು ಟರ್ಫ್‌ ಮೈದಾನ ಇಲ್ಲದೇ ಇರುವುದು ಹಲಕುರ್ಕಿ ಅವರ ಮಾತನ್ನು ಪುಷ್ಠೀಕರಿಸುತ್ತದೆ. ಬೆಂಗಳೂರಿನಂಥ ನಗರಗಳಿಗೆ ತರಬೇತಿಗೆ ಹೋದರೂ ಆರ್ಥಿಕ ಮತ್ತು ಶೈಕ್ಷಣಿಕ ಕಾರಣದಿಂದಾಗಿ ಕ್ರೀಡಾ ನಿಲಯಗಳಿಂದ ಬೇಗನೇ ವಾಪಸ್ ಬರುವುದು ಕೂಡ ಇಲ್ಲಿನವರ ಕನಸು ಸಾಕಾರಗೊಳ್ಳಲು ಅಡ್ಡಿಯಾಗಿದೆ. 

 

 

 

 

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry