ಮಂಗಳವಾರ, ಮೇ 18, 2021
22 °C

ಹುಬ್ಬಳ್ಳಿ ಹುಡುಗ ಬಿಸಿಸಿಐ ಅಂಪೈರ್...!

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ ಹುಡುಗ ಬಿಸಿಸಿಐ ಅಂಪೈರ್...!

ಹುಬ್ಬಳ್ಳಿಯ ಸೇಂಟ್ ಮೇರೀಸ್ ಶಾಲೆಯಲ್ಲಿ ಓದುವ ದಿನಗಳಿಂದಲೂ ಅಭಿಜಿತ್ ಬೆಂಗೇರಿಗೆ ಕ್ರಿಕೆಟ್ ಅಂದರೆ ಪಂಚಪ್ರಾಣ. ಜೆ.ಜಿ. ಕಾಮರ್ಸ್ ಕಾಲೇಜಿನಲ್ಲಿ ಓದುವಾಗ ಈ ನಂಟು ಮತ್ತಷ್ಟು ಗಟ್ಟಿಯಾಯಿತು.

 

ಟಿವಿಯಲ್ಲಿ ಬರುತ್ತಿದ್ದ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರವನ್ನು ಇತರರಂತೆಯೇ ಕೌತುಕದಿಂದ ನೋಡುತ್ತಿದ್ದ ಈ ಹುಡುಗ, ಉಳಿದವರಂತೆ ನೋಡಿ ಸುಮ್ಮನೇ ಅದನ್ನು ಮರೆತುಬಿಡಲಿಲ್ಲ.ಮೊದಲು ಬ್ಯಾಟು, ಚೆಂಡು ಹಿಡಿದು ಆಡಲಿಳಿದ ಅವರು, ಆಮೇಲೆ ಅಂಪೈರ್ ಟೋಪಿ ತೊಟ್ಟು ಮೈದಾನಕ್ಕೆ ನಡೆದರು. 2002ರಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಲು ಆರಂಭಿಸಿದ ಅಭಿಜಿತ್, ಮರುವರ್ಷವೇ ರಾಜ್ಯ ಅಂಪೈರಿಂಗ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು.ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡೆಸುವ ಪ್ರತಿಷ್ಠಿತ ಲೆವೆಲ್-2 ಅಂಪೈರಿಂಗ್ ಪರೀಕ್ಷೆ ಪಾಸಾಗಿರುವ ಅವರು, ಉತ್ತರ ಕರ್ನಾಟಕದಲ್ಲಿ ಈ ಸಾಧನೆ ಮಾಡಿದ ಮೊದಲಿಗ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.ಕಳೆದ ಜುಲೈನಲ್ಲಿ ರಾಷ್ಟ್ರೀಯ ಅಂಪೈರಿಂಗ್ ಸಮಿತಿ ನಾಗಪುರದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪಾಸಾದ ಅಂಪೈರ್ ಎಂದರೆ ಹುಬ್ಬಳ್ಳಿಯ ಈ ಹುಡುಗ ಒಬ್ಬರೇ.ನೂರಕ್ಕೆ 98 ಅಂಕಗಳನ್ನು ಅವರು ಪಡೆದಿದ್ದಾರೆ. ಇನ್ನೇನು ಈ ಹೊಸ ಬಿಸಿಸಿಐ ಅಂಪೈರ್ ರಣಜಿ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸಲಿದ್ದು, ಉತ್ತರ ಕರ್ನಾಟಕದ ಕ್ರಿಕೆಟ್ ವಲಯ ಆ ಕ್ಷಣಕ್ಕಾಗಿ ಹೆಮ್ಮೆಯಿಂದ ಕಾಯುತ್ತಿದೆ.ಬಿಡಿಕೆ ಸ್ಪೋರ್ಟ್ಸ್ ಫೌಂಡೇಶನ್ ಹಾಗೂ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಪರ ಆಡಿದ್ದ ಅವರು, ರಾಜ್ಯ 14 ಮತ್ತು 16 ವರ್ಷದೊಳಗಿನ ತಂಡವನ್ನೂ ಪ್ರತಿನಿಧಿಸಿದ್ದರು.ಆಮೇಲೆ ಆಟಕ್ಕಿಂತ ಹೆಚ್ಚಾಗಿ ಆಟದ ನಿಯಮಾವಳಿ ಮೇಲೆ ಅಭಿಜಿತ್ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡರು. ಪರಿಣಾಮ ಕ್ರಿಕೆಟ್ ನಿಯಮಾವಳಿಯನ್ನು ಅಕ್ಷರಶಃ ಅರೆದು ಕುಡಿದರು. ವಿಜಯ್ ಕಾಮತ್ ಅವರಂತಹ ಹಿರಿಯರ ಬೆಂಬಲವೂ ಚೆನ್ನಾಗಿ ಸಿಕ್ಕಿತು.ಹುಬ್ಬಳ್ಳಿ-ಧಾರವಾಡ ಅಂಪೈರ್‌ಗಳ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಅಂಪೈರ್‌ಗಳ ಒಕ್ಕೂಟ ಕೂಡ ಈ ಹೊಸ ಅಂಪೈರ್‌ಗೆ ಚೆನ್ನಾಗಿಯೇ ಪ್ರೋತ್ಸಾಹ ನೀಡಿತು.

 

ಅಂಪೈರ್‌ಗಳು ಬರುವುದೇ ಅಪರೂಪದ ಸನ್ನಿವೇಶದಲ್ಲಿ ಸಿಕ್ಕ ಪ್ರತಿಭಾನ್ವಿತನನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕೂಡ ಕೈಬಿಡಲಿಲ್ಲ. ಹಲವು ಪಂದ್ಯಗಳಲ್ಲಿ ಅಂಪೈರ್ ಆಗಿ ದುಡಿಯುವ ಅವಕಾಶ ಅವರಿಗೆ ಸಿಕ್ಕಿತು.ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ತಂದೆ ಉದಯ್ ಹಾಗೂ ತಾಯಿ ಲಕ್ಷ್ಮಿದೇವಿ ಸಹ ಮಗನ ಅಂಪೈರಿಂಗ್ ವೃತ್ತಿ ಪ್ರೇಮಕ್ಕೆ ನೀರೆರೆದರು.

 

ಕ್ರಿಕೆಟ್ ನಿಯಮಾವಳಿ ಕುರಿತು ಎಲ್ಲಿಯೇ ಪುಸ್ತಕ ಸಿಕ್ಕರೂ ಅಭಿಜಿತ್ ಎತ್ತಿಕೊಂಡು ಬರುತ್ತಿದ್ದರು. ಟಿವಿಯಲ್ಲಿ ಬರುತ್ತಿದ್ದ ನೇರ ಪ್ರಸಾರದ ಸಂದರ್ಭದಲ್ಲಿ ಅಂಪೈರ್‌ಗಳ ದೇಹಭಾಷೆ ಮೇಲೆ ಈ ಹುಡುಗ ಹದ್ದುಗಣ್ಣು ಹಾಕಿ ಗಮನಿಸುತ್ತಿದ್ದರು.`ಎಲ್‌ಬಿಡಬ್ಲ್ಯು ಹಾಗೂ ನೋ  ಬಾಲ್‌ನಂತಹ ತೀರ್ಪುಗಳನ್ನು ನಿರ್ಧರಿಸುವುದು ಅತ್ಯಂತ ಸೂಕ್ಷ್ಮವಾದ ಕೆಲಸ. ಈ ಎರಡೂ ಸಂಗತಿಗಳ ಮೇಲೆ ನಾವು ಇಷ್ಟು ಕಣ್ಣಿಟ್ಟರೂ ಕಡಿಮೆಯೇ. ನಾವು ಸ್ವಲ್ಪ ಮೈಮರೆತರೂ ಪಂದ್ಯದ ಫಲಿತಾಂಶವೇ ಏರು-ಪೇರಾಗುವ ಸಂಭವ ಇರುತ್ತದೆ. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಅಂಪೈರ್ ಮಹತ್ವ ಎಂದಿಗೂ ಕಡಿಮೆ ಆಗುವುದಿಲ್ಲ~ ಎಂದು ಅಭಿಜಿತ್ ಹೇಳುತ್ತಾರೆ.~ಅದೇನೋ ಗೊತ್ತಿಲ್ಲ. ಕ್ರಿಕೆಟ್ ಆಡುವ ದಿನಗಳಿಂದಲೂ ನನಗೆ ಅಂಪೈರಿಂಗ್ ವೃತ್ತಿ ಮೇಲೆ ವಿಶೇಷವಾದ ಆಸಕ್ತಿ. ಒಮ್ಮಮ್ಮೆ ನಾನೇ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೆ.ಮುಂದೆ ಹುಬ್ಬಳ್ಳಿ -ಧಾರವಾಡ ಅಂಪೈರಿಂಗ್ ಸಂಸ್ಥೆ ಸದಸ್ಯರನ್ನು ಕಂಡೆ. ಅವರೆಲ್ಲ ನನಗೆ ಮಾರ್ಗದರ್ಶನ ಮಾಡಿದರು~ ಎಂದು ಅವರು ವಿವರಿಸುತ್ತಾರೆ.ವಿಶೇಷ ಎಂದರೆ ತಂದೆ ಉದಯ್ ಅವರ ಟೇಬಲ್ ಟೆನಿಸ್ ಪ್ರೀತಿ ಮಗನ ಮೇಲೂ ಪರಿಣಾಮ ಬೀರಿದ್ದು. ಒಂದಿಷ್ಟು ದಿನ ಈ ಹುಡುಗ ಟೇಬಲ್ ಟೆನಿಸ್ ಕೂಡ ಆಡಿದರು. ಚುಟುಕು ಬರೆಯುವ ಗೀಳು ಅವರಿಗಿತ್ತು.

 

ಆದರೆ, ದಿನಗಳು ಉರುಳಿದಂತೆ ಉಳಿದ ಆಸಕ್ತಿಗಳು ಹಿಂದಕ್ಕೆ ಹೊರಟು, ಅಂಪೈರಿಂಗ್ ಪ್ರೇಮವೇ ದೊಡ್ಡದಾಗಿ ಕಂಡಿತು. ವೃತ್ತಿ ಕೌಶಲ್ಯದ ಸಿದ್ಧಿಗಾಗಿ ಬೆಂಗಳೂರು ಸೇರಿದಂತೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪಂದ್ಯಗಳು ನಡೆಯುತ್ತಿದ್ದ ಅನೇಕ ನಗರಗಳಿಗೆ ಎಡತಾಕಿದರು.ಅಂಪೈರಿಂಗ್ ಕ್ಲಿನಿಕ್‌ಗಳು ನಡೆದಾಗ ಅದರಲ್ಲಿ ಪಾಲ್ಗೊಂಡರು. `ಪ್ರತಿ ಶಿಬಿರವೂ ನನಗೆ ವಿಭಿನ್ನ ಅನುಭವ ನೀಡಿದೆ. ದೊಡ್ಡವರ ಮಾರ್ಗದರ್ಶನ ಧಾರಾಳವಾಗಿ ಸಿಕ್ಕಿದೆ~ ಎಂದು ವಿನೀತರಾಗಿ ಹೇಳುತ್ತಾರೆ.`ಅಭಿಜಿತ್ ನಮ್ಮಲ್ಲೇ ಆಡಿ ಬೆಳೆದ ಹುಡುಗ. ಒಳ್ಳೆಯ ಪ್ರತಿಭಾವಂತ. ಮೃದುಭಾಷಿ. ಅಧ್ಯಯನದಲ್ಲಿ ಅವನಿಗೆ ತುಂಬಾ ಆಸಕ್ತಿ. ಕ್ರಿಕೆಟ್ ನಿಯಮಗಳ ಕುರಿತು ನಮ್ಮ ಜೊತೆ ಸಾಕಷ್ಟು ಚರ್ಚೆ ನಡೆಸುತ್ತಿದ್ದ. ಈಗ ಬಿಸಿಸಿಐ ಲೆವೆಲ್-2 ಪರೀಕ್ಷೆಯಲ್ಲಿ ಪಾಸಾಗಿದ್ದು, ಕೇಳಿ ನನಗೆ ತುಂಬಾ ಖುಷಿಯಾಗಿದೆ. ಖಂಡಿತವಾಗಿಯೂ ಅವನಿಗೆ ಉತ್ತಮ ಭವಿಷ್ಯ ಕಾದಿದೆ~ ಎಂದು ವಿಜಯ್ ಮೆಚ್ಚುಗೆ ಮಾತುಗಳನ್ನಾಡುತ್ತಾರೆ.ಬೆಂಗಳೂರಿನ ಬ್ರ್ಯಾಡಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರು ಕಳೆದ ಜುಲೈನಲ್ಲಷ್ಟೇ ವಿಮರ್ಶಾ ಅವರ ಕೈಹಿಡಿದಿದ್ದಾರೆ. `ಅಂತರರಾಷ್ಟ್ರೀಯ ಕ್ರಿಕೆಟ್ ರಂಗದ ಶ್ರೇಷ್ಠ ಅಂಪೈರ್‌ಗಳಂತೆ ನನಗೂ ಹೆಸರು ಮಾಡುವ ಬಯಕೆ ಇದೆ~ ಎಂದು ಅಭಿಜಿತ್ ತಮ್ಮ   ಕನಸನ್ನು ಹಂಚಿಕೊಳ್ಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.