ಹುಮನಾಬಾದ್: ಕಾಮಗಾರಿ ಪರಿಶೀಲನೆ
ಹುಮನಾಬಾದ್: ನೆನೆಗುದಿಗೆ ಬಿದ್ದ ಪಟ್ಟಣದ ಹಳೆ ಪುರಸಭೆಯಿಂದ ಶಿವಾಜಿ ವೃತ್ತದ ವರೆಗಿನ ರಸ್ತೆ ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವುದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ತಿಳಿಸಿದರು.
ವಿವಿಧ ಯೋಜನೆ ಅಡಿಯಲ್ಲಿ ಮಂಜೂರಾದ ಅನುದಾದಲ್ಲಿ ಪಟ್ಟಣದಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಬಳಿಕ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು.
ಪಟ್ಟಣ ಅಭಿವೃದ್ಧಿಗಾಗಿ ಹುಮನಾಬಾದ್ ಮತ್ತು ಚಿಟಗುಪ್ಪ ಪುರಸಭೆಗಳಿಗೆ ತಲಾ ರೂ. 5ಕೋಟಿ ಮಂಜೂರಾಗಿದ್ದು, ಆ ಪೈಕಿ ಶೇ 80ರಷ್ಟು ಹಣದಲ್ಲಿ ರಸ್ತೆ, ಶೇ 20ರಲ್ಲಿ ಚರಂಡಿ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.
`ಪ್ರಜಾವಾಣಿ~ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯಂತೆ ವಿಸ್ತರಣೆ ಆದರೂ ಆರಂಭಗೊಳ್ಳದೇ ಬಾಕಿ ಉಳಿದುಕೊಂಡ ಕಲ್ಲೂರ ರಸ್ತೆ ಅಭಿವೃದ್ಧಿಗೆ ರೂ. 2ಕೋಟಿ ಈಗಾಗಲೇ ಮೀಸಲಿಡಲಾಗಿದೆ ಎಂದರು.
ಉಳಿದ ಅನುದಾನದಲ್ಲಿ ಚರಂಡಿ, ವಿದ್ಯುತ್ ಕಂಭ ಅಳವಡಿಕೆ ಮತ್ತಿತರ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಪಟ್ಟಣದಲ್ಲಿ ರೂ. 49ಲಕ್ಷ ಮೊತ್ತದಲ್ಲಿ ಗ್ರಂಥಾಲಯದ ಪಕ್ಕದಲ್ಲಿನ ಪುರಸಭೆ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವುದು, ಅನ್ಯ ಸ್ಥಳಗಳಲ್ಲಿ ಸಮುದಾಯ ಭವನ ಸೇರಿ ಒಟ್ಟು ಮೂರು ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.
ವಿವಿಧ ಲೇಔಟ್ಗಳಲ್ಲಿ ಒತ್ತುವರಿಗೊಂಡಿದ್ದ 12ಉದ್ಯಾನ ಸ್ಥಳಗಳ ಪೈಕಿ ಈಗಾಗಲೇ 6ಉದ್ಯಾನ ಸ್ಥಳಗಳನ್ನು ತೆರವುಗೊಳಿಸಿ, ಸುತ್ತುಗೋಡೆ ನಿರ್ಮಿಸಲಾಗಿದೆ. ಇನ್ನುಳಿದ 6ಉದ್ಯಾನಗಳಿಗೂ ಶೀಘ್ರ ಸುತ್ತುಗೋಡೆ ನಿರ್ಮಿಸುವುದಕ್ಕೆ ಉದ್ದೇಶಿಸಲಾಗಿದೆ ಎಂದರು.
ತೆರವುಗೊಳಿಸಿ ನಿರ್ಮಿಸಲಾದ ಉದ್ಯಾನಗಳ ಅಭಿವೃದ್ಧಿಗೆ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಇರುವ ಉದ್ಯಾನ ಸ್ಥಳ ಉಳಿಸಿಕೊಳ್ಳುವುದೇ ಕಷ್ಟವಾದ ಹಿನ್ನೆಲೆಯಲ್ಲಿ ಒತ್ತುವರಿಗೊಂಡ ಸ್ಥಳ ತೆರವುಗೊಳಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕಪ್ಪು ಪಟ್ಟಿಗೆ ಸೇರ್ಪಡೆ: ಕರ್ತವ್ಯ ಬೇಜವಾಬ್ದಾರಿ ಪ್ರದರ್ಶಿಸುತ್ತಿರುವ ಎಲ್ಲ ಗುತ್ತಿಗೆದಾರರ ಜಿಲ್ಲಾ ಮಟ್ಟದ ಸಭೆ ಕರೆದು ಗುಣಮಟ್ಟ ಜೊತೆಗೆ ಸಮಯ ಪರಿಪಾಲನೆ ಕುರಿತು ಅಗತ್ಯ ಸಲಹೆ ಸೂಚನೆ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಮಾರ್ಗದರ್ಶನ ನೀಡಿದ ನಂತರವೂ ಹಳೆ ಪದ್ಧತಿಯನ್ನೇ ಮುಂದುವರೆಸಿಕೊಂಡು ಹೋಗಿದ್ದೇ ಆದಲ್ಲಿ ಅಂಥ ಗುತ್ತಿಗೆದಾರರ ಹೆಸರನ್ನು ಅನಿವಾರ್ಯವಾಗಿ ಕಪ್ಪುಪಟ್ಟಿಗೆ ಸೇರ್ಪಡೆ ಮಾಡಬೇಕಾಗುತ್ತದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.
ನಗರದ ವ್ಯಾಪಾರಸ್ಥರಿಗಾಗಿ ಮೂತ್ರಾಲಯ ಮೊದಲಾದ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಎಲ್ಲ ಸಮಸ್ಯೆ ಹಂತಹಂತ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನಿಸುವುದಾಗಿ ಅವರು ವಿವರಿಸಿದರು.
ಶಾಸಕರಿಂದ ಶ್ಲಾಘನೆ: ಹೊಸದಾಗಿ ಆಗಮಿಸಿರುವ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಅವರು ಸಾಕಷ್ಟು ಕ್ರಿಯಾಶೀಲರಾಗಿದ್ದಾರೆ.
ಅವರ ಕ್ರಿಯಾಶೀಲತೆ ಬಗ್ಗೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಪಟ್ಟಣದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಕಾರಣಾಂತರ ನೆನೆಗುದಿಗೆ ಬಿದ್ದ ಎಲ್ಲ ಕಾಮಗಾರಿ ಜಿಲ್ಲಾಧಿಕಾರಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಧ್ಯವಾದಷ್ಟು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಪುರಸಭೆಯ ಅಧ್ಯಕ್ಷೆ ಪದ್ಮಾವತಿ ಮಚಕೂರಿ, ಉಪಾಧ್ಯಕ್ಷ ಎಸ್. ಎ.ಬಾಸೀತ್ ಓಮರ್, ಸದಸ್ಯರಾದ ಆಜಮ್ ಮತೀನ್, ವಿನಾಯಕ ಯಾದವ್, ಎಂ.ಡಿ.ಆಜಮ್, ಮುಖ್ಯಾಧಿಕಾರಿ ಸತೀಶ ಗುಡ್ಡೆ, ಚಿಟಗುಪ್ಪ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಭೂಸೇನಾ ನಿಗಮ ಎಇಇ ಬಿ.ಎಸ್.ಪಾಟೀಲ, ಜಿಲ್ಲಾ ಪಂಚಾಯಿತಿ ಎಇಇ ಸಿ.ಎಸ್.ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾಜಿ ಡೋಣೆ, ಪುರಸಭೆ ಎಂಜಿನಿಯರ್ಗಳಾದ ಅಣ್ಯಪ್ಪ, ಅಶೋಕ, ಕಾಂಗ್ರೆಸ್ ಮುಖಂಡರಾದ ಅಪ್ಸರಮಿಯ್ಯ, ಲಕ್ಷ್ಮಣರಾವ ಹಣಕುಣಿ, ಶಿವಾಜಿರಾವ ಮಚಕೂರಿ ಇತರರು ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.