ಹುರುಳಿಗೆ ಬೂದು ರೋಗ !

7

ಹುರುಳಿಗೆ ಬೂದು ರೋಗ !

Published:
Updated:

ಶ್ರೀನಿವಾಸಪುರ: ಪಟ್ಟಣದ ಸುತ್ತ ಮುತ್ತ ಹುರುಳಿ ಗಿಡಕ್ಕೆ ಬೂದು ರೋಗ ಕಾಣಿಸಿಕೊಂಡಿದೆ. ಇದರಿಂದ ಕಾಯಿ ಸರಿಯಾಗಿ ಕಟ್ಟದೆ ಬೆಳೆಗಾರರಿಗೆ ನಷ್ಟ ಉಂಟಾಗುತ್ತಿದೆ.ಹುರುಳಿಯನ್ನು ರೋಗರಹಿತ ಬೆಳೆ ಎಂದು ಕರೆಯಲಾಗುತ್ತದೆ. ಫಲವತ್ತಲ್ಲದ ಜಮೀನಿಗೆ ಹುರುಳಿ ಬಿತ್ತುವುದು ಮೊದಲಿನಿಂದಲೂ ನಡೆದು ಬಂದಿರುವ ಪದ್ಧತಿ. ಕಡಿಮೆ ತೇವಾಂಶ ಇದ್ದರೂ ಹುಲುಸಾಗಿ ಬೆಳೆಯುವ ಈ ಬೆಳೆಗೂ ಈ ಬಾರಿ ಹಳದಿ ರೋಗದ ಜೊತೆಗೆ ಬೂದುರೋಗ ಕಾಣಿಸಿಕೊಂಡಿದೆ. ಈ ರೋಗ ಬಂದಿರುವ ಗಿಡಗಳಲ್ಲಿ ಸರಿಯಾಗಿ ಫಸಲು ಬಂದಿಲ್ಲ. ಬಂದಿರುವ ಫಸಲೂ ಸಹ ಸೊರಗಿದೆ. ಗಿಡಗಳಲ್ಲಿ ಎಲೆ ಉದುರುವುದರಿಂದ ಸರಿಯಾಗಿ ಕಾಳು ಕಟ್ಟುತ್ತಿಲ್ಲ.‘ಹುರುಳಿ ಬಿಟ್ಟಿ ಬೆಳೆ. ಅದಕ್ಕೆ ಗೊಬ್ಬರ ಹಾಕಬೇಕಾಗಿಲ್ಲ. ರೋಗ ಎಂದು ಔಷಧಿ ಸಿಂಪರಣೆ ಮಾಡಬೇಕಾಗಿಲ್ಲ. ಆದರೆ ಅದಕ್ಕೂ ರೋಗ ಬರುವ ಕಾಲವನ್ನು ನೋಡಿದ್ದಾಯಿತು’ ಎಂದು ಪನಸಮಾಕನಹಳ್ಳಿ ಗ್ರಾಮದ ಹಿರಿಯ ರೈತ ರಾಮಪ್ಪ ‘ಪ್ರಜಾವಾಣಿಗೆ’ ತಿಳಿಸಿದರು.ತಾಲ್ಲೂಕಿನಲ್ಲಿ ಮಾವಿನ ತೋಟಗಳು ಮತ್ತು ಪ್ರತ್ಯೇಕವಾಗಿ ಹೆಚ್ಚಿನ ವಿಸ್ತೀರ್ಣದಲ್ಲಿ ಹುರುಳಿ ಬೆಳೆಯಲಾಗಿದೆ. ಮೊದಲು ಬಿತ್ತನೆ ಮಾಡಲಾಗಿರುವ ಹುರುಳಿ ಕಟಾವಿಗೆ ಬಂದಿದ್ದರೆ, ತಡವಾಗಿ ಬಿತ್ತಲಾಗಿರುವ ಗಿಡಗಳಲ್ಲಿ ಇನ್ನೂ ಹಸಿರು ಕಾಯಿ ಇದೆ. ತಡವಾಗಿ ಬಿತ್ತಲಾಗಿರುವ ಹೊಲಗಳಲ್ಲಿ ರೋಗ ಕಾಣಿಸಿಕೊಂಡಿರುವುದು ವಿಶೇಷ.  ಇಷ್ಟಾದರೂ ಹುರುಳಿಗೆ ಔಷಧಿ ಸಿಂಪರಣೆ ಮಾಡುತ್ತಿಲ್ಲ. ಜಾನುವಾರುಗಳಿಗೆ ಉತ್ತಮ ಮೇವಾಗಿರುವ ಹುರುಳಿ ಹೊಟ್ಟು ಔಷಧಿ ಸಿಂಪಣೆಯಿಂದ ಕೆಡುತ್ತದೆ ಎಂದು ತಿಳಿದಿರುವ ಅವರು, ಆದಷ್ಟು ಆಗಲಿ ಎಂಬ ನಿರ್ಧಾರಕ್ಕೆ ಬಂದಂತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry