ಬುಧವಾರ, ಮೇ 25, 2022
23 °C

ಹುಲಿಕೆರೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಲಿಕೆರೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ

ಕೊಪ್ಪಳ: ಎಲ್ಲವೂ ಅಂದುಕೊಂಡಂತೆ ನೆರವೇರಿದರೆ ಬರುವ ಆ. 15ರ ವೇಳೆಗೆ ನಗರದ ಹುಲಿಕೆರೆ ದಡದಲ್ಲಿ ಸುಂದರ ಉದ್ಯಾನವನ ನಿರ್ಮಾಣವಾಗಲಿದೆ. ಮಕ್ಕಳ ಮನರಂಜನೆಗಾಗಿ ವಿವಿಧ ಸಲಕರಣೆಗಳು, ಬೋಟಿಂಗ್ ವ್ಯವಸ್ಥೆ, ವಿಹಾರ ಪ್ರಿಯರಿಗಾಗಿ ಪುಟ್ಟ ಪಥ, ಬಯಲು ರಂಗಮಂದಿರ, ಉಪಹಾರ ಗೃಹ, ಕಾರಂಜಿಗಳು ಸಿದ್ಧಗೊಳ್ಳಲಿವೆ. ಇವೆಲ್ಲವುಗಳಿಗೆ ಮೆರಗು ನೀಡುವ ಸಲುವಾಗಿ ವಿದ್ಯುತ್ ದೀಪಗಳ ಅಲಂಕಾರ ವ್ಯವಸ್ಥೆಯೂ ಜನರನ್ನು ಆಕರ್ಷಿಸಲಿದೆ.ಪ್ರಾಥಮಿಕ ಹಂತವಾಗಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಹುಲಿಕೆರೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಕಾಮಗಾರಿ ಭರದಿಂದ ಸಾಗಿದೆ.ಬೀದರ್, ಗುಲ್ಬರ್ಗ, ರಾಯಚೂರು ಹಾಗೂ ಬಳ್ಳಾರಿ ನಗರಗಳಲ್ಲಿನ ಉದ್ಯಾನವನ, ಕೆರೆಗಳನ್ನು ಆಯಾ ಜಿಲ್ಲೆಗಳಲ್ಲಿನ ನಿರ್ಮಿತಿ ಕೇಂದ್ರಗಳೇ ಅಭಿವೃದ್ಧಿಪಡಿಸಿವೆ. ಕಾಮಗಾರಿಯೂ ಚೊಕ್ಕವಾಗಿದೆ. ನಗರದಲ್ಲಿನ ಈ ಕೆರೆಯ ಅಭಿವೃದ್ಧಿಯ ಜವಾಬ್ದಾರಿಯನ್ನು ಸಹ ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಹೇಳುತ್ತಾರೆ.ಉದ್ಯಾನವನ ಅಭಿವೃದ್ಧಿಪಡಿಸುವುದು, ಉಳಿದ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿ ನಿಗದಿತ ವೇಳೆಗೆ ಪೂರ್ಣಗೊಳ್ಳುವ ವಿಶ್ವಾಸವನ್ನು ನಿರ್ಮಿತಿ ಕೇಂದ್ರದ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.ಆದರೆ, ಉದ್ಯಾನವನ ಹಸಿರಿನಿಂದ ಕಂಗೊಳಿಸಬೇಕಾದರೆ ಸಮಯ ಬೇಕಾಗುತ್ತದೆ ಎಂದು ಹೇಳಲು ಮರೆಯುವುದಿಲ್ಲ.3.5 ಲಕ್ಷ ರೂಪಾಯಿ ವೆಚ್ಚದಲ್ಲಿ ಉದ್ಯಾನವನಕ್ಕೆ ಬೇಲಿ ನಿರ್ಮಿಸಲಾಗುತ್ತಿದ್ದರೆ, 4 ಲಕ್ಷ ರೂಪಾಯಿ ವೆಚ್ಚದಲ್ಲಿ ವಾಟರ್‌ಫಾಲ್ಸ್ ಮತ್ತು ಕೊಳಗಳ ನಿರ್ಮಾಣ ಮಾಡಲಾಗುತ್ತಿದೆ. ಕ್ಯಾಂಟೀನ್ ಮತ್ತು ಫುಡ್‌ಕೋರ್ಟ್- 7 ಲಕ್ಷ ರೂಪಾಯಿ, ಬಯಲು ರಂಗ ಮಂದಿರ- 1.5 ಲಕ್ಷ, ವಿದ್ಯುತ್ ದೀಪಗಳಿಂದ ಅಲಂಕಾರ- 8.50 ಲಕ್ಷ, ಭೂ ದೃಶ್ಯಗಳ ನಿರ್ಮಾಣ- 17 ಲಕ್ಷ, ತೇಲುವ ಕಾರಂಜಿ- 4.50 ಲಕ್ಷ ಹಾಗೂ 3.50 ಲಕ್ಷ ರೂಪಾಯಿ ವೆಚ್ಚದಲ್ಲಿ ಮಕ್ಕಳ ಆಟಕ್ಕಾಗಿ ಸಲಕರಣೆಗಳ ಅಳವಡಿಕೆ ಈ ಉದ್ಯಾನವನದ ಪ್ರಮುಖ ಅಂಶಗಳು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.