ಹುಲಿಗಳಿಗೂ `ಆಧಾರ್' ಸಂಖ್ಯೆ!

7

ಹುಲಿಗಳಿಗೂ `ಆಧಾರ್' ಸಂಖ್ಯೆ!

Published:
Updated:
ಹುಲಿಗಳಿಗೂ `ಆಧಾರ್' ಸಂಖ್ಯೆ!

ಚಾಮರಾಜನಗರ: ದೇಶದ ಎಲ್ಲ ರಕ್ಷಿತಾರಣ್ಯದಲ್ಲಿ ಇರುವ ಹುಲಿಗಳಿಗೆ, `ಆಧಾರ್' ಮಾದರಿಯಲ್ಲಿ ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ) ನೀಡಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಮುಂದಾಗಿದೆ.ಪ್ರಸ್ತುತ ದೇಶದ ನಾಗರಿಕರಿಗೆ ಬಯೋಮೆಟ್ರಿಕ್ ಮಾಹಿತಿ ಆಧಾರದಡಿ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ 'ಆಧಾರ್' ಯೋಜನೆ ಜಾರಿಯಲ್ಲಿದೆ. ವನ್ಯಜೀವಿ ಸಂರಕ್ಷಣಾ ಕ್ರಮಗಳನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಹುಲಿಗಳಿಗೂ ಗುರುತಿನ ಸಂಖ್ಯೆ ನೀಡಲು ರಾಷ್ಟ್ರೀಯ ಮಾಹಿತಿ ಆಗರ (ನ್ಯಾಷನಲ್ ಡೇಟಾ ಬೇಸ್) ಸ್ಥಾಪಿಸಲಾಗಿದೆ.ದೇಶದ 17 ರಾಜ್ಯಗಳಲ್ಲಿ 41 ಘೋಷಿತ ಹುಲಿ ರಕ್ಷಿತಾರಣ್ಯಗಳಿವೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ರಾಷ್ಟ್ರ ಮಟ್ಟದಲ್ಲಿ ಹುಲಿ ಗಣತಿ ನಡೆಯುತ್ತದೆ. 2010ರ ಗಣತಿ ಅನ್ವಯ ದೇಶದಲ್ಲಿ 1,706 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಪ್ರಥಮ ಹಂತದಲ್ಲಿ 650 ಹುಲಿಗಳಿಗೆ ಗುರುತಿನ ಸಂಖ್ಯೆ ನೀಡಲಾಗುತ್ತಿದೆ.ಈಗಾಗಲೇ, ಹುಲಿ ಗಣತಿಯಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ವಿಧಾನ ಅನುಸರಿಸಲಾಗಿದೆ. ಇತ್ತೀಚೆಗೆ ಕೆಲವು ರಕ್ಷಿತಾರಣ್ಯದಲ್ಲಿ ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳ ತಜ್ಞರು 'ಕ್ಯಾಮೆರಾ ಟ್ರ್ಯಾಪಿಂಗ್' ಅಳವಡಿಸಿ ಹುಲಿಗಳ ಚಲನವಲನದ ಅಧ್ಯಯನ ನಡೆಸುತ್ತಿದ್ದಾರೆ.ಗಣತಿಯಲ್ಲಿ ದೇಶದ 6 ಭೌಗೋಳಿಕ ಪ್ರದೇಶದಲ್ಲಿ ಹಂಚಿಕೆಯಾಗಿರುವ ಹುಲಿಗಳ ಅಂದಾಜು ಸಂಖ್ಯೆ ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹುಲಿಗಳಿಗೆ ಗುರುತಿನ ಸಂಖ್ಯೆ ನೀಡುವಾಗ ಭೌಗೋಳಿಕ ಪ್ರದೇಶ ಹಾಗೂ ಆಯಾ ರಕ್ಷಿತಾರಣ್ಯಕ್ಕೆ ನಿರ್ದಿಷ್ಟ ಆಂಗ್ಲ ಅಕ್ಷರದ ಗುರುತು ನೀಡಲಾಗುತ್ತದೆ (ಉದಾಹರಣೆಗೆ ಪಶ್ಚಿಮಘಟ್ಟ ಪ್ರದೇಶ-'ಡಬ್ಲ್ಯುಜಿ', ಬಂಡೀಪುರ ರಾಷ್ಟ್ರೀಯ ಉದ್ಯಾನ-ಬಿಎನ್‌ಪಿ; ಹುಲಿಯ ಗುರುತಿನ ಸಂಖ್ಯೆ: ಡಬ್ಲ್ಯುಜಿ-ಬಿಎನ್‌ಪಿ-1). ನಂತರ, ಕ್ಯಾಮೆರಾ ಟ್ರ್ಯಾಪಿಂಗ್‌ನಲ್ಲಿ ದೇಹದ ಎಡ ಮತ್ತು ಬಲಭಾಗ ಸಂಪೂರ್ಣವಾಗಿ ದಾಖಲಾಗಿರುವ ಹುಲಿಗಳಿಗೆ ಗುರುತಿನ ಸಂಖ್ಯೆ ನೀಡಲಾಗುತ್ತದೆ.ಕ್ಯಾಮೆರಾಕ್ಕೆ ಸೆರೆಸಿಗುವ ಹುಲಿಗಳ ಸಂಪೂರ್ಣ ವಿವರ ರಾಷ್ಟ್ರೀಯ ಮಾಹಿತಿ ಆಗರದಲ್ಲಿ ದಾಖಲಾಗುತ್ತದೆ. ಇದಕ್ಕಾಗಿಯೇ ಎನ್‌ಟಿಸಿಎ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಯಾವುದೇ, ಹುಲಿ ನೈಸರ್ಗಿಕವಾಗಿ ಮೃತಪಟ್ಟರೆ, ಕಳ್ಳಬೇಟೆಗೆ    ಬಲಿಯಾದರೆ ಅಥವಾ ತನ್ನ ಸ್ಥಳದಿಂದ ಬೇರೆಡೆಗೆ ಹೋದರೆ ತಕ್ಷಣವೇ ಪತ್ತೆ  ಹಚ್ಚಲು ಈ ಗುರುತಿನ ಸಂಖ್ಯೆ   ನೆರವಾಗಲಿದೆ.ಕಳ್ಳಬೇಟೆಗಾರರ ತಂತ್ರಕ್ಕೆ ಬಲಿಯಾದ ಹುಲಿಗಳ ಚರ್ಮ ವಶಪಡಿಸಿಕೊಂಡ ವೇಳೆ ಅವರು ಯಾವ ರಕ್ಷಿತಾರಣ್ಯದಲ್ಲಿ ಹುಲಿ ಕೊಂದಿದ್ದಾರೆ ಎಂಬುದನ್ನು ಪತ್ತೆಹಚ್ಚುವುದು ಸುಲಭ.ಹುಲಿ ಹಂತಕರ ಕಾಕದೃಷ್ಟಿ ಬಿದ್ದಿರುವ ರಕ್ಷಿತಾರಣ್ಯದಲ್ಲಿ ಸಂರಕ್ಷಣಾ ಕ್ರಮ ಬಿಗಿಗೊಳಿಸಲು ಗುರುತಿನ ಸಂಖ್ಯೆ ಸಹಕಾರಿಯಾಗಲಿದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.

'ಹುಲಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಬಗ್ಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಸೂಚನೆ ಬಂದಿದೆ. ರಕ್ಷಿತಾರಣ್ಯದಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ಸಾಧನ ಅಳವಡಿಸುವ ಸಂಬಂಧ ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಅನುದಾನ ಲಭಿಸಿದ ನಂತರ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕ್ಯಾಮೆರಾ ಟ್ರ್ಯಾಪಿಂಗ್ ಅಳವಡಿಸಲಾಗುವುದು.ಬಳಿಕ ಕ್ಯಾಮೆರಾಕ್ಕೆ ಸೆರೆಸಿಗುವ ಹುಲಿಗಳ ಛಾಯಾಚಿತ್ರವನ್ನು ಪ್ರಾಧಿಕಾರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಹುಲಿಗಳಿಗೆ ಗುರುತಿನ ಸಂಖ್ಯೆ ನೀಡಲಾಗುತ್ತದೆ' ಎಂದು ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾ ರಣ್ಯದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ವಿಜಯ್  ಮೋಹನ್‌ರಾಜ್ 'ಪ್ರಜಾವಾಣಿ'ಗೆ ತಿಳಿಸಿದರು.ಏನಿದು ಕ್ಯಾಮೆರಾ ಟ್ರ್ಯಾಪಿಂಗ್

'ಕ್ಯಾಮೆರಾ ಟ್ರ್ಯಾಪಿಂಗ್' ಹುಲಿಗಳ ಎಣಿಕೆಯ ಒಂದು ಹೊಸ ಸಾಧನ. ಕ್ಯಾಮೆರಾ ಟ್ರ್ಯಾಪ್ ವ್ಯವಸ್ಥೆಯಡಿ ತಾನಾಗಿಯೇ ಕೆಲಸ ನಿರ್ವಹಿಸುವ ಕ್ಯಾಮೆರಾ ಘಟಕಗಳಿವೆ. ಹುಲಿಯು ಕ್ಯಾಮೆರಾದ ಮುಂದೆ ಚಲಿಸಿದ ತಕ್ಷಣವೇ ಅದರ ಛಾಯಾಚಿತ್ರ ದಾಖಲಾಗುತ್ತದೆ. ಹುಲಿಗಳ ಸಮೀಪದ ಚಿತ್ರವೂ ಲಭಿಸುತ್ತದೆ.

ಅರಣ್ಯದಲ್ಲಿ ಹುಲಿಗಳು ಸಂಚರಿಸುವ ಜಾಡಿನ ಎರಡು ಬದಿಯಲ್ಲಿ ಈ ಮಾದರಿಯ ಕ್ಯಾಮೆರಾ ಅಳವಡಿಸಿ ಅವುಗಳ ಛಾಯಾಚಿತ್ರ ದಾಖಲಿಸಲಾಗುತ್ತದೆ. ಹುಲಿಯ ಪಟ್ಟೆಗಳ ವಿನ್ಯಾಸವನ್ನು ಹೋಲಿಕೆ ಮಾಡಿ ಸಮೀಕ್ಷಾ ಪ್ರದೇಶದಲ್ಲಿರುವ ಪ್ರತಿಯೊಂದು ಹುಲಿಯನ್ನು ಗುರುತಿಸಬಹುದು. ಹೀಗಾಗಿ, 'ಕ್ಯಾಮೆರಾ ಟ್ರ್ಯಾಪಿಂಗ್' ವಿಶ್ವಾಸಾರ್ಹ ಗಣತಿ ವಿಧಾನವೂ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry