ಮಂಗಳವಾರ, ಮೇ 11, 2021
25 °C

ಹುಲಿಗಳಿಗೆ ಗಂಡಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಲ್ಲಿ ಹುಲಿಗಳ ಸಂತತಿ ಕ್ಷೀಣಿಸುತ್ತಿದೆ ಎಂಬ ಸುದ್ದಿಯೇ ಆತಂಕಕಾರಿ. ಹುಲಿಗಳ ರಕ್ಷಣೆಗೆ ಕೇಂದ್ರ ಸರ್ಕಾರ ಪ್ರತಿ ವರ್ಷ ಹತ್ತಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ.ಆದರೂ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಂಕಿ ಅಂಶಗಳ ಪ್ರಕಾರ ಕಳೆದ ದಶಕದಲ್ಲಿ 337 ಹೆಚ್ಚು ಹುಲಿಗಳು ಸತ್ತಿವೆ. ಪ್ರಾಧಿಕಾರದ ಗಮನಕ್ಕೆ ಬಾರದ ಸಾವಿನ ಪ್ರಕರಣಗಳೂ ಇರಬಹುದು. ಸಾವಿಗೆ ರೋಗ, ವೃದ್ಧಾಪ್ಯ ಮತ್ತಿತರ ಸಹಜ ಕಾರಣಗಳಲ್ಲದೆ ಕಳ್ಳಬೇಟೆ, ರಸ್ತೆ, ರೈಲು ಅಪಘಾತ, ಕಾಡ್ಗಿಚ್ಚು, ಹಸಿವು, ವಿದ್ಯುತ್ ಆಘಾತ ಮತ್ತಿತರ ಕಾರಣಗಳಿವೆ. ರೋಗ, ವೃದ್ಧಾಪ್ಯದಿಂದ ಹುಲಿಗಳು ಸಾಯುವುದನ್ನು ತಪ್ಪಿಸಲಾಗದು.

 

ಆದರೆ, ಇತರ ಕಾರಣಗಳಿಂದ ಸಂಭವಿಸಿದ ಸಾವುಗಳಿಗೆ ಸಮರ್ಥನೆ ಇಲ್ಲ. ಹುಲಿಗಳ ಸಂತತಿ ರಕ್ಷಣೆಯ ಸರ್ಕಾರದ ಕಾಳಜಿಯೇ ವಿಫಲವಾದಂತೆ. ಸರ್ಕಾರ ಹುಲಿ ಯೋಜನೆಗಳಿಗೆ ಹಣ ಒದಗಿಸಿದರೆ ಸಾಲದು. ಸಂರಕ್ಷಣಾ ಕಾರ್ಯ ಸಮರ್ಪಕವಾಗಿ ನಡೆದಿದೆಯೇ ಎಂಬುದನ್ನು ಕಾಲಕಾಲಕ್ಕೆ ಪರಿಶೀಲಿಸುವ ವ್ಯವಸ್ಥೆ ಇರಬೇಕು.

 

ಹುಲಿಗಳ ಅಸಹಜ ಸಾವಿಗೆ ಸಂಬಂಧಿಸಿದ ಅರಣ್ಯ ಇಲಾಖೆ ಸಿಬ್ಬಂದಿಯೇ ಹೊಣೆ. ಇನ್ನಿತರ ಕಾರಣಗಳಿಂದ ಸಂಭವಿಸುವ ಸಾವುಗಳಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ಶಿಕ್ಷಿಸುವವರೆಗೆ ಹುಲಿಗಳಿಗೆ ಉಳಿಗಾಲ ಇಲ್ಲ. ಕಳೆದ ಶತಮಾನದಲ್ಲಿ ದೇಶದಲ್ಲಿ ನಲವತ್ತು ಸಾವಿರ ಹುಲಿಗಳಿದ್ದವು ಎಂಬ ಮಾಹಿತಿ ಇದೆ.ಕೇಂದ್ರ ಸರ್ಕಾರ 1972 ಹುಲಿ ಸಂರಕ್ಷಣಾ ಯೋಜನೆ ರೂಪಿಸಿತು. ಹದಿನೇಳು ರಾಜ್ಯಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ. 2002ರಿಂದೀಚೆಗೆ ಹುಲಿಗಳ ಅಸಹಜ ಸಾವಿನ ಪ್ರಕರಣಗಳು ಹೆಚ್ಚಾಗಿವೆ. ಕಳ್ಳಬೇಟೆಗೆ ಬಲಿಯಾಗುವ ಹುಲಿಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಹುಲಿ ಸಂರಕ್ಷಣಾ ಯೋಜನೆಗೆ ಹಿನ್ನಡೆಯಾಗಿದೆ.ಇತ್ತೀಚಿನ ವರ್ಷಗಳಲ್ಲಿ ದೇಶದ ಉದ್ದಗಲದಲ್ಲಿ ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಅರಣ್ಯದ ಪ್ರದೇಶದಲ್ಲಿ ರೆಸಾರ್ಟ್‌ಗಳು, ಜಂಗಲ್ ಲಾಡ್ಜ್‌ಗಳು ತಲೆ ಎತ್ತಿವೆ. ನೂರಾರು ವರ್ಷಗಳಿಂದ ಹುಲಿಗಳು ಓಡಾಡಿಕೊಂಡಿದ್ದ ಸಹಜ ಸಂಚಾರ ಮಾರ್ಗಗಳ ಒತ್ತುವರಿ ಆಗಿದೆ. ಗಣಿಗಾರಿಕೆ, ವಿದ್ಯುತ್ ಯೋಜನೆ, ರಸ್ತೆ ನಿರ್ಮಾಣ ಇತ್ಯಾದಿಗಳ ನೆಪದಲ್ಲಿ ಅರಣ್ಯ ಪ್ರದೇಶದಲ್ಲಿ ಜನ ಸಂಚಾರ ಹೆಚ್ಚಾಗಿದೆ.ಆಹಾರದ ಕೊರತೆ ಆದಾಗಲೆಲ್ಲ ಹುಲಿಗಳು ಕಾಡಿನಿಂದ ಹೊರ ಬಂದು ಸಮೀಪದ ಊರುಗಳಿಗೆ ನುಗ್ಗಿ ದನಕರುಗಳನ್ನು ತಿನ್ನುವ ಪ್ರಕರಣಗಳು ಹೆಚ್ಚಾಗಿವೆ. ಹುಲಿಗಳ ದಾಳಿ ತಪ್ಪಿಸಿಕೊಳ್ಳಲು ಜನರು ಕೈಗೊಂಡ ಅವೈಜ್ಞಾನಿಕ ಕ್ರಮಗಳೂ ಅವುಗಳ ಸಾವಿಗೆ ಕಾರಣವಾಗುತ್ತಿವೆ.ಅದೇನೇ ಇರಲಿ, ಹುಲಿಗಳನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿ. ಸರ್ಕಾರ ಒತ್ತುವರಿ, ಅರಣ್ಯದಲ್ಲಿ ವಾಹನಗಳ ಓಡಾಟವನ್ನು ನಿಯಂತ್ರಿಸುವ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಬೇಕು. ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಜನರು ಅರಣ್ಯ ಪ್ರದೇಶದಲ್ಲಿ ಮುಕ್ತವಾಗಿ ಸಂಚರಿಸುವುದಕ್ಕೂ ಕಡಿವಾಣ ಹಾಕಬೇಕು.ಹುಲಿಗಳನ್ನು ಸಂರಕ್ಷಣೆ ಮಾಡುವುದು ಸರ್ಕಾರದ ಕೆಲಸವೇ ಆದರೂ ಅದಕ್ಕೆ ಅರಣ್ಯ ಪ್ರದೇಶದ ಸುತ್ತಲಿನ ಜನರ ಸಹಕಾರವೂ ಬೇಕು. ಹುಲಿ ಸೇರಿದಂತೆ ಎಲ್ಲ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ವಿಷಯದಲ್ಲಿ ಈಗ ಅಸಡ್ಡೆ ತೋರಿದರೆ ಭವಿಷ್ಯದಲ್ಲಿ ಅವುಗಳನ್ನು ಪ್ರಾಣಿ ಸಂಗ್ರಹಾಲಯದಲ್ಲಿ ನೋಡಬೇಕಾದೀತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.