ಹುಲಿಗಳಿಗೆ ನಾಯಿ ವೈರಸ್: ಮುನ್ನೆಚ್ಚರಿಕೆಗೆ ಸೂಚನೆ

ಶನಿವಾರ, ಜೂಲೈ 20, 2019
22 °C

ಹುಲಿಗಳಿಗೆ ನಾಯಿ ವೈರಸ್: ಮುನ್ನೆಚ್ಚರಿಕೆಗೆ ಸೂಚನೆ

Published:
Updated:

ಚಾಮರಾಜನಗರ:  ಸಾಕು ನಾಯಿಗಳಿಗೆ ಮಾರಣಾಂತಿಕವಾಗಿರುವ `ಕೆನೈನ್ ಡಿಸ್ಟೆಂಪರ್ ವೈರಸ್' (ಸಿಡಿವಿ) ಹುಲಿಗಳ ಜೀವಕ್ಕೂ ಕುತ್ತು ತರುವ ಸಾಧ್ಯತೆಯಿದೆ ಎಂಬ ಅಂಶ ಬೆಳಕಿಗೆ ಬಂದಿದ್ದು, ಎಲ್ಲ ರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಸೂಚಿಸಿದೆ.ಇತ್ತೀಚೆಗೆ ಇಂಡೋನೇಷ್ಯ ಮತ್ತು ರಷ್ಯದಲ್ಲಿ ಹುಲಿಗಳಿಗೆ ಈ ವೈರಸ್ ತಗುಲಿರುವುದು ಪತ್ತೆಯಾಗಿದೆ. ಸಾಮಾನ್ಯವಾಗಿ ಸಾಕುಪ್ರಾಣಿಗಳಿಗೆ ಈ ವೈರಸ್ ಹರಡುತ್ತದೆ. ಬಹುಮುಖ್ಯವಾಗಿ ನಾಯಿಗಳು ಈ ರೋಗಕ್ಕೆ ತುತ್ತಾಗುವುದು ಹೆಚ್ಚು. ಇತ್ತೀಚಿನ ವರ್ಷಗಳಲ್ಲಿ ಕಾಡುಪ್ರಾಣಿಗಳಿಗೂ ವೈರಸ್ ಹರಡುತ್ತಿರುವುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹುಲಿ ರಕ್ಷಿತಾರಣ್ಯಗಳ ವ್ಯಾಪ್ತಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಎನ್‌ಟಿಸಿಎ ಸುತ್ತೋಲೆ ಹೊರಡಿಸಿದೆ.ಈ ಸುತ್ತೋಲೆ `ಪ್ರಜಾವಾಣಿ'ಗೆ ಲಭ್ಯವಾಗಿದ್ದು, ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ತಮ್ಮ ವ್ಯಾಪ್ತಿಯ ರಕ್ಷಿತಾರಣ್ಯಗಳಲ್ಲಿ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸೂಚಿಸಲಾಗಿದೆ.ಅರಣ್ಯದ ಅಂಚಿನಲ್ಲಿ ಗ್ರಾಮಗಳಿರುತ್ತವೆ. ಈ ಹಳ್ಳಿಗಳಿಂದ ನಿತ್ಯವೂ ಜಾನುವಾರು, ನಾಯಿಗಳು ಅರಣ್ಯದೊಳಕ್ಕೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಕಾಡಂಚಿನ ಎಲ್ಲ ಗ್ರಾಮಗಳಲ್ಲಿರುವ ಜಾನುವಾರು, ಬೆಕ್ಕು, ನಾಯಿಗಳಿಗೆ ವೈರಸ್ ತಡೆಗೆ ಲಸಿಕೆ ಹಾಕಬೇಕು. ವೈರಸ್‌ಗೆ ತುತ್ತಾಗಿರುವ ಪ್ರಾಣಿಗಳು ಕಂಡು ಬಂದರೆ ಕೂಡಲೇ ವರದಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.ವೈರಸ್ ದಾಳಿಗೆ ಬಲಿಯಾದ ಪ್ರಾಣಿಯ ಅವಯವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಅರಣ್ಯದಲ್ಲಿ ವನ್ಯಜೀವಿಗಳಿಗೆ ಆಸರೆಯಾಗಿರುವ ಕುಡಿಯುವ ನೀರಿನ ಮೂಲಗಳನ್ನು ಕೂಡ ಪರೀಕ್ಷಿಸಬೇಕು ಎಂದು ಸೂಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry