ಹುಲಿವಾನದಲ್ಲಿ ಸಮಸ್ಯೆಗಳ ಸವಾರಿ

7

ಹುಲಿವಾನದಲ್ಲಿ ಸಮಸ್ಯೆಗಳ ಸವಾರಿ

Published:
Updated:

ಮಂಡ್ಯ: ಡಾಂಬರು ಕಾಣದ ರಸ್ತೆ, ಚರಂಡಿಯ ಕೊರತೆ, ಮನೆಗಳ ಆಸು ಪಾಸಿನಲ್ಲಿಯೇ ನಾಲ್ಕಾರು ತಿಪ್ಪೆ ರಾಶಿಗಳು. ಇದು ಮಂಡ್ಯ ತಾಲ್ಲೂಕಿನ ಹುಲಿವಾನ ಗ್ರಾಮದ ಚಿತ್ರಣ. ಆರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮವು, ಗ್ರಾಮ ಪಂಚಾಯಿತಿ ಕಚೇರಿಯನ್ನು ಹೊಂದಿದೆ.ಗ್ರಾಮದ ಕೆಲವು ರಸ್ತೆಗಳು ಡಾಂಬರೀಕರಣಗೊಂಡಿದ್ದರೆ, ಇನ್ನು ಕೆಲವು ರಸ್ತೆಗಳು ಡಾಂಬರಿನ ಮುಖವನ್ನೇ ಕಂಡಿಲ್ಲ.  ಆ ರಸ್ತೆಗಳು ಅಂಕು-ಡೊಂಕಾಗಿದ್ದು, ಅಲ್ಲಿ ಸಂಚರಿಸುವುದೇ ಸಾಹಸದ ಕೆಲಸವಾಗಿದೆ.ಕೆಲವು ರಸ್ತೆಗಳಲ್ಲಿ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಆದರೆ, ಅವುಗಳನ್ನು ಸ್ವಚ್ಛಗೊಳಿಸದೇ ತಿಂಗಳುಗಳೇ ಕಳೆದಿವೆ. ಪರಿಣಾಮ ಅಲ್ಲಲ್ಲಿ ಚರಂಡಿಯಲ್ಲಿ ಕಸ, ಕಡ್ಡಿ ಬಿದ್ದು ಮುಚ್ಚಿ ಹೋಗಿವೆ.ಇನ್ನು ಕೆಲವು ರಸ್ತೆಗಳಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ. ಅಲ್ಲಿನ ನಿವಾಸಿಗಳು ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅದರಲ್ಲಿ ಕಸ ಬಿದ್ದು ಮುಚ್ಚಿದಾಗ ಸ್ವಚ್ಛಗೊಳಿಸುವ ಗೋಜಿಗೆ ಯಾರೂ ಹೋಗುವುದಿಲ್ಲ. ಪರಿಣಾಮ ಅಲ್ಲಿನ ನೀರೆಲ್ಲ ರಸ್ತೆಯ ಮೇಲೆ ಹರಿಯುತ್ತದೆ. ಆಗ ಉಂಟಾಗುವ ಕೆಸರಿನಲ್ಲಿ ತಿರುಗಾಡಬೇಕಾದ ಅನಿವಾರ್ಯತೆ ಗ್ರಾಮಸ್ಥರದ್ದಾಗಿದೆ.ಟ್ಯಾಂಕ್ ಶಿಥಿಲ: ಕುಡಿಯುವ ನೀರು ಸರಬರಾಜಿಗಾಗಿ ನಿರ್ಮಿಸಿರುವ ಟ್ಯಾಂಕ್ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಸಿಮೆಂಟ್ ಕಿತ್ತು ಹೋಗಿದ್ದು, ಕಬ್ಬಿಣದ ಸರಳುಗಳು ಎದ್ದು ಕಾಣುತ್ತವೆ. ಅದರ ಪಕ್ಕದಲ್ಲಿಯೇ ಹೊಸದಾಗಿ ಟ್ಯಾಂಕ್‌ವೊಂದನ್ನು ನಿರ್ಮಿಸಲಾಗಿದೆ. ಜನಸಂಖ್ಯೆ ಹೆಚ್ಚಿರುವುದರಿಂದ ಹಳೆಯ ಟ್ಯಾಂಕ್ ಅನ್ನೂ ಉಪಯೋಗಿಸಲಾಗುತ್ತಿದೆ.ವಿದ್ಯುತ್ ಸಮಸ್ಯೆಯಿಂದಾಗಿ ನೀರು ಸರಿಯಾಗಿ ಸರಬರಾಜು ಆಗುವುದಿಲ್ಲ. ಮೇಲಿಂದ ಮೇಲೆ ಪಂಪ್‌ಸೆಟ್ ಹಾಳಾಗುವುದರಿಂದ ಒಮ್ಮಮ್ಮೆ ಮೂರ‌್ನಾಲ್ಕು ದಿನಗಳವರೆಗೂ ನೀರು ಬರುವುದಿಲ್ಲ. ಟ್ಯಾಂಕ್ ಸ್ವಚ್ಛಗೊಳಿಸಿ ವರ್ಷಗಳೇ ಕಳೆದು ಹೋಗಿವೆ. ಈ ಕುರಿತು ಪಂಚಾಯಿತಿ ದೂರು ನೀಡಿದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.ಗ್ರಾಮದಲ್ಲಿ ಮನೆ, ಮನೆಗಳ ಮಧ್ಯೆಯೇ ತಿಪ್ಪೇ ಗುಂಡಿಗಳಿವೆ. ಹೀಗಾಗಿ, ಎಲ್ಲೆಂದರಲ್ಲಿ ಕಸ ಬಿದ್ದಿದೆ. ಹೀಗಾಗಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ರೋಗಗಳು ಹರಡುವ ಸಾಧ್ಯತೆಗಳಿವೆ.ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸುಸಜ್ಜಿತವಾದ ರಾಜೀವಗಾಂಧಿ ಸೇವಾ ಕೇಂದ್ರವನ್ನು ನಿರ್ಮಿಸಲಾಗಿದೆ. ಅಲ್ಲಿಯೇ ಈಗ, ಗ್ರಾಮ ಪಂಚಾಯಿತಿ ಕಾರ್ಯ ನಿರ್ವಹಿಸುತ್ತಿದೆ. ಸುವರ್ಣ ಗ್ರಾಮಕ್ಕೆ ಆಯ್ಕೆಯಾಗಿದೆ ಎಂದು ಹಿಂದಿನ ಅಧಿಕಾರಿಗಳು ಹೇಳಿದ್ದಾರೆ. ಕುಡಿಯುವ ನೀರಿನ ಟ್ಯಾಂಕ್ ದುರಸ್ತಿಗೊಳಿಸಬೇಕು. ಈಗಷ್ಟೇ ಅಧಿಕಾರವಹಿಸಿಕೊಂಡಿದ್ದೇನೆ ಎನ್ನುತ್ತಾರೆ ಹೊಸದಾಗಿ ಬಂದಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗೇಗೌಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry