ಬುಧವಾರ, ಮೇ 12, 2021
23 °C

ಹುಲಿ ಅಭಯಾರಣ್ಯದ ಕಾವಲುಗಾರರಿಗಿಲ್ಲ ರಕ್ಷಣೆ

ಕೆ.ಎಂ.ಸಂತೋಷ್‌ಕುಮಾರ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಇವರು ಕಾಯಂ ನೌಕರರಲ್ಲ; ಅರಣ್ಯ ಇಲಾಖೆ ದಿನಗೂಲಿ ನೌಕರರು. ಸೇವಾ ಭದ್ರತೆಯೂ ಇಲ್ಲ; ಕೈಯಲ್ಲಿ ಅಸ್ತ್ರಗಳೂ ಇಲ್ಲ; ವನ್ಯಜೀವಿ ದಾಳಿಯಿಂದ ಕೈ,ಕಾಲು, ದೈಹಿಕ  ಊನಕ್ಕೆ ತುತ್ತಾದವರು, ಜೀವವನ್ನೇ ತೆತ್ತವರೂ ಇದ್ದಾರೆ. ಪ್ರಾಣದ ಹಂಗು ತೊರೆದು ಕಳ್ಳಕಾಕರಿಂದ, ಬೆಂಕಿ ಅವಘಡಗಳಿಂದ ಅರಣ್ಯ ಮತ್ತು ವನ್ಯಜೀವಿ ಉಳಿಸಿದ ಅರಣ್ಯ ರಕ್ಷಕರಿವರು. 25 ವರ್ಷಗಳಿಗೂ ಹೆಚ್ಚು ಕಾಲ ದುಡಿದು, ಈಗ ನಿವೃತ್ತಿಯಾಗುವಾಗ ಬರಿಗೈಯಲ್ಲಿ ಮನೆಗೆ ಮರಳುವಂತಾಗಿದೆ!ಸಂಗಮೇಶ್ವರಪೇಟೆ ಸಮೀಪದ ಮಾಗಲು ಗ್ರಾಮದ ಪರಿಶಿಷ್ಟ ಜಾತಿಯ ಕರಿಯ (60) ಎಂಬುವವರನ್ನು 2011ರ ಜೂನ್ 30ರಂದು ಕರ್ತವ್ಯದಿಂದ ಅರಣ್ಯ ಇಲಾಖೆ ನಿವೃತ್ತಿಗೊಳಿಸಿದೆ. ಇವರು ಭದ್ರಾ ಹುಲಿ ರಕ್ಷಿತಾ ಅಭಯಾರಣ್ಯದ ಹೆಬ್ಬೆ ವಲಯದಲ್ಲಿ ದಿನಗೂಲಿ ನೌಕರರಾಗಿ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ತಿಂಗಳಿಗೆ 6 ಸಾವಿರ ರೂಪಾಯಿ ವೇತನ ಸಿಗುತ್ತಿತ್ತು. ಆರು ಸಾವಿರ ರೂಪಾಯಿ ವೇತನ ಸಿಕ್ಕಿದ್ದು ಕೂಡ ಕೇವಲ ಆರು ತಿಂಗಳು ಮಾತ್ರ. ಅದಕ್ಕೂ ಮೊದಲು ಇವರಿಗೆ ತಿಂಗಳಿಗೆ 270 (1985-86) ರೂಪಾಯಿ ವೇತನ ಕೊಡುತ್ತಿದ್ದರು.

 

1990ರ ಅವಧಿಯಲ್ಲಿ ವೇತನವನ್ನು 700 ರೂಪಾಯಿಗೆ ಹೆಚ್ಚಿಸಿದರು. 1996-97ರ ಅವಧಿಯಲ್ಲಿ ಈ ಮೊತ್ತ 4 ಸಾವಿರಕ್ಕೆ ಏರಿಕೆಯಾಯಿತು. ನಂತರ 2011ರ ಜನವರಿಂದ 6 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಅರಣ್ಯ ರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನವನ್ನು ಮೀಸಲಿಡುತ್ತಿದೆ. ಅರಣ್ಯ ರಕ್ಷಣೆಗಾಗಿ ಹಗಲಿರುಳು ಶ್ರಮಿಸಿಯೂ ಸೌಲಭ್ಯ ಪಡೆಯಲು ಹೋರಾಟದ ಹಾದಿ ಹಿಡಿಯಬೇಕಾಗಿರುವ ಪರಿಸ್ಥಿತಿ ಬಂದೊದಗಿರುವುದು ದುರಂತ ಎಂದು ವಿಷಾದಿಸುತ್ತಾರೆ ದಿನಗೂಲಿ ನೌಕರರು.`ನಿವೃತ್ತಿಗೊಳಿಸಿದ ನಂತರ ಇಲಾಖೆ ಮತ್ತೆ ದಿನಗೂಲಿಗೆ ಕಳೆದ ಜೂನ್‌ನಿಂದ ಅರ್ಧ ವೇತನ ನೀಡಿ ನೇಮಿಸಿಕೊಂಡಿತ್ತು. ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ನೀಡುತ್ತಿದ್ದರು. ಇದೇ ಹಣದಿಂದ ಕುಟುಂಬ ನಿರ್ವಹಿಸುತ್ತಿದ್ದೆ. ಮುಂದಿನ ತಿಂಗಳು (ಮೇ) ಕೆಲಸಕ್ಕೆ ಬರುವುದು ಬೇಡವೆಂದು ಅರಣ್ಯ ವಲಯಾಧಿಕಾರಿ ತಿಳಿಸಿದ್ದಾರೆ. ಮುಂದಿನ ಬದುಕಿನ ಬಗ್ಗೆ ದಾರಿ ತೋಚದಂತಾಗಿದೆ. ಇನ್ನೂ ಒಬ್ಬಳು ಮಗಳು ಇದ್ದಾಳೆ. ಅವಳಿಗೂ ಜೀವನ ರೂಪಿಸಿಕೊಡಬೇಕಿದೆ. ಈಗಾಗಲೇ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿರುವ ಸಾಲ ತೀರಿಸಲು ಸಾಧ್ಯವಾಗಿಲ್ಲ. ಪತ್ನಿ 15 ವರ್ಷಗಳ ಹಿಂದೆಯೇ ತೀರಿ ಹೋಗಿದ್ದಾಳೆ~ ಎಂದು ಅಳಲು ತೋಡಿಕೊಳ್ಳುತ್ತಾರೆ ನಿವೃತ್ತ ದಿನಗೂಲಿ ನೌಕರ ಕರಿಯಪ್ಪ.`ಇಷ್ಟು ವರ್ಷ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಈಗ ದುಡಿದು ತಿನ್ನಲು ದೇಹದಲ್ಲಿ ಶಕ್ತಿ ಉಳಿದಿಲ್ಲ. ಬದುಕಿನ ಆಸರೆಗಾಗಿ ನನ್ನ ಮಗಳಿಗಾದರೂ ದಿನಗೂಲಿ ಕೆಲಸವನ್ನು ಅರಣ್ಯಾಧಿಕಾರಿಗಳು ನೀಡಬೇಕು~ ಎಂದು ಕರಿಯಪ್ಪ ಮನವಿ ಮಾಡುತ್ತಾರೆ.ಇದು ಕರಿಯಪ್ಪನ ಸ್ಥಿತಿ ಮಾತ್ರವಲ್ಲ; ಇದೇ ಪರಿಸ್ಥಿತಿಯನ್ನು ನಿವೃತ್ತಿ ಅಂಚಿನಲ್ಲಿರುವ ಪ್ರತಿಯೊಬ್ಬ ದಿನಗೂಲಿ ನೌಕರರು ಎದುರಿಸುತ್ತಿದ್ದಾರೆ. ಜಿಲ್ಲೆಯ ನಾಲ್ಕು ವಲಯಗಳಲ್ಲಿ ಒಟ್ಟು 192 ಮಂದಿ ಪೆಟ್ಟಿ ಕ್ಯಾಷ್ ಪೇಮೆಂಟ್ ವರ್ಗದಲ್ಲಿ ಹಾಗೂ 300 ಮಂದಿ ದಿನಗೂಲಿ ನೌಕರರಾಗಿ ದುಡಿಯುತ್ತಿದ್ದಾರೆ. ಈ ಪೈಕಿ 100ರಷ್ಟು ಮಂದಿ ಮಾತ್ರ ಕಾಯಂಗೊಂಡಿದ್ದಾರೆ. ಉಳಿದವರೆಲ್ಲರೂ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅರಿಶಿಣಗೆರೆಯ ರಾಮಶೆಟ್ಟಿ ಎಂಬುವರು ಇದೇ ಅವಧಿಯಲ್ಲಿ ನಿವೃತ್ತಿಯಾಗಿದ್ದಾರೆ. ದೀರ್ಘ ವರ್ಷಗಳಿಂದ ದಿನಗೂಲಿಗಳಾಗಿ ಕೆಲಸ ಮಾಡಿರುವ ಚೌಡಯ್ಯ, ರಂಗ, ರಾಮಯ್ಯ, ಕೃಷ್ಣಪ್ಪಶೆಟ್ಟಿ, ರಾಮಚಂದ್ರಪ್ಪ, ಚೆನ್ನಪ್ಪ, ದ್ಯಾವಪ್ಪ, ಬಸವ ನಿವೃತ್ತಿ ಅಂಚಿನಲ್ಲಿದ್ದಾರೆ. ಎಲ್ಲರೂ ನಿವೃತ್ತಿ ಸೌಲಭ್ಯ ಸಿಗದೆ ಭಾರವಾದ ಹೃದಯಹೊತ್ತು ಮನೆಗೆ ಮರಳುತ್ತಿದ್ದಾರೆ.`ಅರಣ್ಯ ಇಲಾಖೆ ತಾಂತ್ರಿಕ ಕಾರಣ ಮುಂದಿಟ್ಟು ದಿನಗೂಲಿ ನೌಕರರಿಗೆ ಯಾವುದೇ ಸೌಲಭ್ಯ ನೀಡದೆ ಹೊರಗಟ್ಟುವ ಬದಲು ಮಾನವೀಯ ನೆರವು ನೀಡಬೇಕು. ದಿನಗೂಲಿ ನೌಕರರಿಗೆ ಸರ್ಕಾರ ನೇರವಾಗಿ ನಿವೃತ್ತಿ ಸೌಲಭ್ಯ ನೀಡಲು ಆಗದಿದ್ದರೆ ಟೈಗರ್ ಕನ್ಸರ್‌ವೇಷನ್ ಫೌಂಡೇಷನ್ ಮೂಲಕವಾದರೂ ಸೌಲಭ್ಯ ಒದಗಿಸಬೇಕು~ ಎನ್ನುತ್ತಾರೆ ಭದ್ರಾ ವೈಲ್ಡ್‌ಲೈಫ್ ಕನ್ಸರ್‌ವೇಷನ್ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಡಿ.ವಿ.ಗಿರೀಶ್.ಕಾಫಿ  ತೋಟದ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಭವಿಷ್ಯ ನಿಧಿ, ಗ್ರಾಚ್ಯುಟಿ ಇನ್ನಿತರ ಸೌಲಭ್ಯ ಸಿಗುತ್ತಿರುವಾಗ ಸರ್ಕಾರದ ಒಂದು ಭಾಗವಾದ ಅರಣ್ಯ ಇಲಾಖೆ ಕೆಲಸಕ್ಕೆ ಅಧಿಕೃತವಾಗಿಯೇ ನೇಮಿಸಿಕೊಂಡ ದಿನಗೂಲಿ ನೌಕರರಿಗೆ ಸೌಲಭ್ಯ ನಿರಾಕರಿಸುವುದು ನ್ಯಾಯವಲ್ಲ. ಅರಣ್ಯ ಇಲಾಖೆಗೆ ಹೊಸದಾಗಿ ಕಾಯಂ ಕಾವಲುಗಾರರನ್ನು ನೇಮಿಸಿಕೊಳ್ಳುವಾಗ ಹಾಲಿ ದಿನಗೂಲಿ ನೌಕರರನ್ನು ಪರಿಗಣಿಸಲಿಲ್ಲ. ದೈಹಿಕ ಅರ್ಹತೆ, ವಯಸ್ಸು ಮತ್ತು ವಿದ್ಯಾರ್ಹತೆ ಮುಂದಿಟ್ಟು ಅವಕಾಶ ನಿರಾಕರಿಸಿದರು. ಆದರೆ, ಇದೇ ನೌಕರರನ್ನು ದುಡಿಸಿಕೊಳ್ಳುವಾಗ ಈ ಯಾವುದೇ ಅಂಶಗಳು ಇಲಾಖೆಗೆ ಮುಖ್ಯವೆನಿಸಲಿಲ್ಲ. ಈಗಲೂ ದುಡಿಸಿಕೊಳ್ಳುತ್ತಿದ್ದಾರೆ. ನಿವೃತ್ತಿಯಾದ ದಿನಗೂಲಿ ನೌಕರರಿಗೆ ಅಗತ್ಯ ನೆರವು ನೀಡಲು ಅರಣ್ಯ ಇಲಾಖೆ ಜವಾಬ್ದಾರಿ ತೆಗೆದುಕೊಳ್ಳಲೇಬೇಕು ಎನ್ನುತ್ತಾರೆ ಅವರು.`ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರಿಗೆ ನಿವೃತ್ತಿ ಸೌಲಭ್ಯ ನೀಡಬೇಕೆಂಬ ಬೇಡಿಕೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಿದೆ. ದಿನಗೂಲಿ ನೌಕರರ ವಿಷಯದಲ್ಲಿ ಸ್ಪಷ್ಟ ನೀತಿ ಜಾರಿಗೆ ಬಾರದೆ ಇಲಾಖೆಯಿಂದ ಯಾವುದೇ ನೆರವು ನೀಡಲು ಆಗುತ್ತಿಲ್ಲ. ಈ ವಿಷಯದಲ್ಲಿ ಸರ್ಕಾರ ಆದಷ್ಟು ಶೀಘ್ರ ನಿರ್ಧಾರಕ್ಕೆ ಬರಲಿದೆ~ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವತಾರ್ ಸಿಂಗ್ `ಪ್ರಜಾವಾಣಿ~ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.